ADVERTISEMENT

ಚಿತ್ರದುರ್ಗಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ: ಉಮೇಶ್ ಕಾರಜೋಳ ಆರೋಪ

ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ಉಮೇಶ್ ಕಾರಜೋಳ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 16:09 IST
Last Updated 14 ಏಪ್ರಿಲ್ 2024, 16:09 IST
ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಅವರ ಪುತ್ರ ಉಮೇಶ್ ಕಾಜೋಳ ಮತ ಯಾಚಿಸಿದರು
ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಅವರ ಪುತ್ರ ಉಮೇಶ್ ಕಾಜೋಳ ಮತ ಯಾಚಿಸಿದರು   

ಹಿರಿಯೂರು: ‘ಚಿತ್ರದುರ್ಗ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಹಿರಿಯೂರು ತಾಲ್ಲೂಕಿನಲ್ಲಿ ನೀರಾವರಿ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಕೊಡುಗೆ ಹೆಚ್ಚು’ ಎಂದು ಬಿಜೆಪಿ ಯುವ ಮುಖಂಡ ಉಮೇಶ್ ಕಾರಜೋಳ ಹೇಳಿದರು.

ತಾಲ್ಲೂಕಿನ ಎಂ.ಡಿ. ಕೋಟೆ, ಮದ್ದನಕುಂಟೆ, ಸೊಂಡೆಕೆರೆ, ರಾಮಜೋಗಿಹಳ್ಳಿ, ವದ್ದೀಕೆರೆ, ಬಿದರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾನುವಾರ ಅವರ ತಂದೆ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಮತಯಾಚಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದೆ. ಕುಡಿಯುವ ನೀರಿಗೆ ಗ್ರಾಮೀಣ ಭಾಗದ ಜನ ಪರದಾಡುತ್ತಿದ್ದಾರೆ. ಜನ–ಜಾನುವಾರು ರಕ್ಷಣೆ ಮಾಡಲು ಆಗದ ಕಾಂಗ್ರೆಸ್ ಸರ್ಕಾರ ಇನ್ನೂ ಗ್ಯಾರಂಟಿಗಳ ಗುಂಗಿನಿಂದ ಹೊರಬಂದಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಹಣ ಬರುತ್ತಿಲ್ಲ. ನಮ್ಮ ತಂದೆಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಚಿತ್ರದುರ್ಗ ಜಿಲ್ಲೆಯ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಧರ್ಮಪುರ ಹೋಬಳಿ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಯಲ್ಲಿ ಅವರ ಅಪಾರ ಶ್ರಮವಿದೆ’ ಎಂದರು.

ADVERTISEMENT

‘ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆಗಳಿಗೆ, ಸುಳ್ಳಿನ ಹೇಳಿಕೆಗೆ ಬೆಲೆ ಕೊಡದೆ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಶಿವಣ್ಣ, ಹರೀಶ್ ಕುಮಾರ್, ಜನಾರ್ದನ್, ಪರಮೇಶ್, ರಾಘವೇಂದ್ರ, ಪ್ರಕಾಶ್, ಆದರ್ಶ, ವೀರೇಂದ್ರ, ಹನುರಾಮಂತರಾಯ, ರಾಜೇಶ್, ಹನುಮಂತೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.