ADVERTISEMENT

ದಾವಣಗೆರೆ | ಭದ್ರಾ ಜಲಾಶಯಕ್ಕೆ ನಾಳೆ ಬಿಜೆಪಿ ನಿಯೋಗ ಭೇಟಿ

ನೀರು ಸೋರಿಕೆ ತಡೆಗೆ ಶಾಶ್ವತ ಕ್ರಮ ಅಗತ್ಯ: ರೇಣುಕಾಚಾರ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:37 IST
Last Updated 7 ಜುಲೈ 2024, 14:37 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ಭದ್ರಾ ಜಲಾಶಯದಿಂದ ನದಿಗೆ ನೀರು ಸೋರಿಕೆಯಾಗಿರುವುದನ್ನು ಪರಿಶೀಲಿಸಲು ಬಿಜೆಪಿ ರೈತ ಮೋರ್ಚಾ ನಿಯೋಗ ಸೋಮವಾರ ಲಕ್ಕವಳ್ಳಿಗೆ ಭೇಟಿ ನೀಡುತ್ತಿದೆ. ಸೋರಿಕೆ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

‘ಹಲವು ದಿನಗಳಿಂದ ನದಿಗೆ ನೀರು ಸೋರಿಕೆಯಾಗುತ್ತಿರುವುದನ್ನು ಮುಚ್ಚಿಟ್ಟು ರೈತರನ್ನು ವಂಚಿಸಲಾಗಿದೆ. ಶೀಘ್ರ ದುರಸ್ತಿ ಕೈಗೊಳ್ಳುವಂತೆ ಮಾಡಿದ ಒತ್ತಾಯಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ತಾತ್ಕಾಲಿಕ ಕ್ರಮಗಳಿಂದ ನೀರು ಸೋರಿಕೆ ತಡೆಯಲು ಸಾಧ್ಯವಿಲ್ಲ. ನೀರಾವರಿ ನಿಗಮ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಭದ್ರಾ ಅಚ್ಚುಕಟ್ಟು ರೈತರು ಬುತ್ತಿ ಕಟ್ಟಿಕೊಂಡು ಜಲಾಶಯಕ್ಕೆ ಬರಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಜಲಾಶಯದಲ್ಲಿರುವ ನದಿ ಮಟ್ಟದ ಸ್ಲುಸ್‌ ಗೇಟ್‌ ಹಾಳಾಗಿ ಹಲವು ತಿಂಗಳು ಕಳೆದಿವೆ. ಟೆಂಡರ್‌ ಕರೆದು ದುರಸ್ತಿಪಡಿಸಲು ಸರ್ಕಾರ ಆಸಕ್ತಿ ತೋರಿಲ್ಲ. ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿಕೊಂಡು ಕಾಲಾಹರಣ ಮಾಡಿದೆ. ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಇದರಿಂದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರಿಗೆ ತೊಂದರೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಜನವಿರೋಧಿ ನೀತಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ತುರ್ತು ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರದ ಬಳಿ ಸಂಪನ್ಮೂಲ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ದೊಡ್ಡಮಟ್ಟದ ಹಗರಣ ನಡೆದಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಜನರು ಬೇಸತ್ತು ಹೋಗಿದ್ದಾರೆ’ ಎಂದು ದೂರಿದರು.

ಬಿಜೆಪಿ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ, ‘2023ರ ಜುಲೈ 7ರಂದು ಜಲಾಶಯದಲ್ಲಿ 138 ಅಡಿ ನೀರಿತ್ತು. ಮಳೆಯ ಪ್ರಮಾಣ ಕಳೆದ ವರ್ಷದಷ್ಟೇ ಇದ್ದರೂ ಜಲಾಶಯದಲ್ಲಿ 131 ಅಡಿ ನೀರಿದೆ. ನೀರಿನ ಪ್ರಮಾಣ ಕಡಿಮೆಯಾಗಲು ಸೋರಿಕೆಯೇ ಪ್ರಮುಖ ಕಾರಣ. ಅಚ್ಚುಕಟ್ಟು ಪ್ರದೇಶದ ಜೀವನಾಡಿಯಾಗಿರುವ ಭದ್ರಾ ಜಲಾಶಯದ ನೀರಿಗೆ ರೈತರು ಕಾಯುತ್ತಿದ್ದಾರೆ. ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌, ಮುಖಂಡರಾದ ಕೋಳೆನಹಳ್ಳಿ ಬಿ.ಎಂ.ಸತೀಶ್‌, ಚಂದ್ರಶೇಖರ್‌, ವಿಜಯಕುಮಾರ್‌, ಪ್ರವೀಣ್‌ ಜಾಧವ್‌ ಇದ್ದರು.

ಜಲಾಶಯದಿಂದ ನಿತ್ಯ 5 ಸಾವಿರ ಕ್ಯುಸೆಕ್‌ ನೀರು ಹರಿದು ಹೋಗಿದೆ. ಜಲಾಶಯದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಜನರ ದಿಕ್ಕುತಪ್ಪಿಸಿದ್ದಾರೆ.

- ಕೋಳೆನಹಳ್ಳಿ ಬಿ.ಎಂ.ಸತೀಶ್‌ ಬಿಜೆಪಿ ಮುಖಂಡ

‘ಪಕ್ಷ ವಿರೋಧಿಯಾಗಿ ನಡೆದುಕೊಂಡಿಲ್ಲ’ ನಾನು ಯಾವ ನಾಯಕರ ವಿರುದ್ಧವೂ ಆರೋಪ ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ. ಇಂತಹ ಕೆಲಸದಲ್ಲಿರುವವರಿಗೆ ಪಕ್ಷದ ವರಿಷ್ಠರು ಸೂಚನೆ ಕೊಟ್ಟಿರಬಹುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ‘ಲೋಕಸಭಾ ಚುನಾವಣೆಯಲ್ಲಿ ಹರಿಹರ ಮತ್ತು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿವೆ. ಆದರೂ ಈ ಕ್ಷೇತ್ರದ ನಾಯಕರು ಪಕ್ಷನಿಷ್ಠರ ಬಗ್ಗೆ ಆರೋಪಿಸುತ್ತಿದ್ದಾರೆ. ಈ ಕುರಿತು ಸಮಯ ಬಂದಾಗ ಮಾತನಾಡುತ್ತೇವೆ. ನನಗೆ ವರಿಷ್ಠರು ಯಾವುದೇ ಸೂಚನೆ ಎಚ್ಚರಿಕೆ ನೀಡಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.