ADVERTISEMENT

ನಿರುದ್ಯೋಗ ಸಮಸ್ಯೆ ಬಗೆಹರಿಸದ ಬಿಜೆಪಿ: ರಮೇಶ ಬಾಬು

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 12:29 IST
Last Updated 13 ಅಕ್ಟೋಬರ್ 2020, 12:29 IST
ರಮೇಶ್ ಬಾಬು
ರಮೇಶ್ ಬಾಬು   

ಚಿತ್ರದುರ್ಗ: ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಲು ಧೈರ್ಯ ತೋರದ ಬಿಜೆಪಿ ನೇತೃತ್ವದ ಸರ್ಕಾರ ಪಲಾಯನ ಮಾಡಿದೆ. ಕೋವಿಡ್ ಹೆಸರಿನಲ್ಲಿ ಜನರನ್ನು ವಂಚಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ ಬಾಬು ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಬಿಜೆಪಿ ಅಧಿಕಾರಾವಧಿಯಲ್ಲಿಯೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಉದ್ಯೋಗ ಕೇಳಿದ ಯುವಜನರಿಗೆ ಪಕೋಡ್‌ ಮಾರಾಟ ಮಾಡುವಂತೆ ಸಲಹೆ ನೀಡಿದೆ. ಇಂತಹ ಪಕ್ಷವನ್ನು ಬೆಂಬಲಿಸುವ ಮುನ್ನ ಆಲೋಚಿಸಿ’ ಎಂದು ಸಲಹೆ ನೀಡಿದರು.

‘ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸರ್ಕಾರದ ನಡೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್‌ ವಿರೋಧಿಸಿದೆ. ರಾಜಕೀಯವಾಗಿ ಕಾಂಗ್ರೆಸ್‌ಗೆ ಇದು ಮಹತ್ತರ ಚುನಾವಣೆಯಾಗಿದೆ. ಕ್ಷೇತ್ರ ವ್ಯಾಪ್ತಿಯ 1.09 ಲಕ್ಷ ಮತದಾರರನ್ನು ಭೇಟಿಯಾಗಲು ಸಾಧ್ಯವಿಲ್ಲ. ಪ್ರಜ್ಞಾವಂತಿಕೆ ಹೊಂದಿರುವ ಪ್ರತಿಯೊಬ್ಬರು ಆಲೋಚಿಸಿ ಮತ ಚಲಾಯಿಸಿ’ ಎಂದು ಮನವಿ ಮಾಡಿದರು.

ADVERTISEMENT

‘ಉಪಚುನಾವಣೆಯಲ್ಲಿ ಗೆದ್ದು 15 ತಿಂಗಳು ಕ್ಷೇತ್ರವನ್ನು ಪ್ರತಿನಿಧಿಸಿದ ಅನುಭವ ಇದೆ. ₹ 3 ಕೋಟಿ ಅನುದಾನವನ್ನು ಸಮರ್ಥವಾಗಿ ಬಳಸಿ ಶಿಕ್ಷಣ ಕ್ಷೇತ್ರದ ಏಳಿಗೆಗೆ ಶ್ರಮಿಸಿದ್ದೇನೆ. ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗೆ ಪ್ರಯತ್ನಿಸಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 6ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಸುಳ್ಳು ಹೇಳುವ ಬಿಜೆಪಿ–ಜೆಡಿಎಸ್‌’
ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸುಳ್ಳು ಹೇಳುವುದಲ್ಲಿ ನೈಪುಣ್ಯತೆ ಪಡೆದುಕೊಂಡಿವೆ. ಜಾತಿ ಹಾಗೂ ಆಮಿಷ ಬಳಸಿ ಮತದಾರರನ್ನು ಓಲೈಕೆ ಮಾಡುತ್ತಿವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದರು.

‘ನೂತನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿ ನೌಕರರನ್ನು ಸಂಕಷ್ಟಕ್ಕೆ ದೂಡಿದ್ದು ಬಿಜೆಪಿ. ಅಧಿಕಾರಕ್ಕೆ ಬಂದ ಕ್ಷಣಾರ್ಧದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಅನುಷ್ಠಾನಗೊಳಿಸುವುದಾಗಿ ನೀಡಿದ ಆಶ್ವಾಸನೆಯನ್ನು ಬಿಜೆಪಿ ಮರೆತಿದೆ. ವಿಧಾನಪರಿಷತ್ತಿನ ಸದಸ್ಯರು ಸರಿಯಾಗಿ ಕ್ಷೇತ್ರಕ್ಕೂ ಭೇಟಿ ನೀಡುತ್ತಿಲ್ಲ. ರಮೇಶ ಬಾಬು ಅವರಂತಹ ಪ್ರಬುದ್ಧರು ಮೇಲ್ಮನೆಯಲ್ಲಿದ್ದರೆ ಜನರಿಗೆ ಅನುಕೂಲವಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ವಿಧಾನಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ ಬಾಬು, ಕಾಂಗ್ರೆಸ್‌ ಮುಖಂಡರಾದ ರಾಮಪ್ಪ, ಬಾಲಕೃಷ್ಣ ಯಾದವ್‌ ಇದ್ದರು.

*
ಬಿಜೆಪಿ ಸರ್ಕಾರದ ವೈಫಲ್ಯಗಳು ಕಣ್ಣೆದುರೇ ಇವೆ. ಪ್ರಬುದ್ಧ ಪದವೀಧರ ಮತದಾರರು ಇವನ್ನು ಗಮನಿಸಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು.
-ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

*
ಕೋವಿಡ್‌ ನೆಪದಲ್ಲಿ ಸತ್ತ ಹೆಣಗಳ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಆರೋಗ್ಯ ಸಚಿವರ ಅಸಮರ್ಥತೆ ಜನರಿಗೆ ಗೊತ್ತಾಗಿದೆ. ಪದವೀಧರರ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸದು.
-ನೇರಲಗುಂಟೆ ತಿಪ್ಪೇಸ್ವಾಮಿ, ಮಾಜಿ ಶಾಸಕ, ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.