ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕನನ್ನು ಹುಬ್ಬಳ್ಳಿ ಪೊಲೀಸರು 31 ವರ್ಷಗಳ ಬಳಿಕ ಬಂಧಿಸಿರುವ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಹಿಂದೂ ಸಮುದಾಯದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
‘1992ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಕಾಂಗ್ರೆಸ್ ರಾಮಮಂದಿರದ ವಿರುದ್ಧವಾಗಿದೆ ಎಂಬುದು ಈ ಮೂಲಕ ಬಹಿರಂಗವಾಗಿದೆ. ಹಿಂದೂಗಳ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಹಿಂದೂ ವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್, ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು ಕಾಂಗ್ರೆಸ್‌ಗೆ ಇಷ್ಟವಾಗಿಲ್ಲ ಎಂಬುದು ಇದರಿಂದ ದೃಢವಾಗುತ್ತಿದೆ. ರಾಮಮಂದಿರವನ್ನು ಕಟ್ಟುವ ಸಂಕಲ್ಪದೊಂದಿಗೆ ಹುಟ್ಟಿದ ಬಿಜೆಪಿ, ಕೊಟ್ಟ ಮಾತನ್ನು ಸಾಕಾರಗೊಳಿಸಿದೆ. ಇದನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಆಕ್ರೋಶ ವ್ಯಕ್ತಪಡಿಸಿದರು.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದೇ 22ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಇಡೀ ದೇಶ ರಾಮಮಂದಿರ ಉದ್ಘಾಟನೆಯ ಸಮಾರಂಭವನ್ನು ಕಾತುರದಿಂದ ಕಾಯುತ್ತಿದೆ. ಸಂಭ್ರಮ, ಸಡಗರವನ್ನು ಹಾಳು ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ’ ಎಂದು ದೂರಿದರು.
‘ಕಾಂಗ್ರೆಸ್ ಅಧಿಕಾರ ಹಿಡಿದಾಗ ಹಿಂದೂ ವಿರೋಧಿಯಾಗಿ ವರ್ತಿಸಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುವಾಗ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಸೇಡಿನ ಕ್ರಮ ಜರುಗಿಸುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ರೈತರು ಹಾಗೂ ಕನ್ನಡಪರ ಹೋರಾಟಗಾರರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರು. ಜನರ ಗಮನ ಬೇರೆಡೆ ಸೆಳೆಯಲು ಕರಸೇವಕರನ್ನು ಬಂಧಿಸಲಾಗಿದೆ. ಅಭಿವೃದ್ಧಿ ಕಾರ್ಯ ಮರೆತು ಜನರನ್ನು ವಂಚಿಸುತ್ತಿದೆ’ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡರಾದ ಟಿ.ಜಿ.ನರೇಂದ್ರ, ಟಿ.ವೆಂಕಟೇಶ್ ಯಾದವ್, ಮಲ್ಲಿಕಾರ್ಜುನ್, ಸಂಪತ್ ಕುಮಾರ್, ಡಾ.ಮಂಜುನಾಥ್, ಪಾಲಯ್ಯ, ನವೀನ್ ಚಾಲುಕ್ಯ, ಸುರೇಶ್ ಸಿದ್ದಾಪುರ, ಕಲ್ಲೇಶಯ್ಯ, ನಂದಿ ನಾಗರಾಜ್, ಶಿವಣ್ಣಾಚಾರ್ ಇದ್ದರು.
ಅಯೋಧ್ಯೆಯ ಮಂತ್ರಾಕ್ಷತೆ ರಾಜ್ಯದ ಪ್ರತಿ ಮನೆ ತಲುಪುತ್ತಿದೆ. ರಾಮ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿವೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ.ಡಾ.ಸಿದ್ಧಾರ್ಥ ಗುಂಡಾರ್ಪಿ, ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.