ADVERTISEMENT

ಪ್ರಧಾನಿಗೆ ಅವಮಾನ: ಬಿಜೆಪಿ ಪ್ರತಿಭಟನೆ

ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್‌.ಮಂಜುನಾಥ್‌ ವಜಾಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 14:15 IST
Last Updated 12 ಮಾರ್ಚ್ 2024, 14:15 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ಜಿ.ಎಸ್‌.ಮಂಜುನಾಥ್‌ ಅವರನ್ನು ಕಾರ್ಮಿಕ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು. ಆಡಿರುವ ಮಾತುಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

‘ಹಿರಿಯೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ವಿರುದ್ಧ ಕಾಂಗ್ರೆಸ್‌ ನಾಯಕರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಎದುರೇ ಪ್ರಧಾನಿ ವಿರುದ್ಧ ನಾಲಿಗೆ ಹರಿಬಿಡಲಾಗಿದೆ. ಇದು ಕಾಂಗ್ರೆಸ್‌ ಸಂಸ್ಕೃತಿ, ಸಂಸ್ಕಾರವನ್ನು ತೋರಿಸುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಎಚ್.ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ, ‘ಮೋದಿ ಅವರ ಕಾರ್ಯವೈಖರಿಯನ್ನು ಇಡೀ ವಿಶ್ವ ಮೆಚ್ಚಿಕೊಂಡಿದೆ. ಇದನ್ನು ಸಹಿಸದ ಕಾಂಗ್ರೆಸ್, ಅವಹೇಳನ ಮಾಡುವ ಹುನ್ನಾರ ನಡೆಸುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪ್ರಧಾನಿ ಅವರನ್ನು ಅವಹೇಳನ ಮಾಡುವುದು ದೇಶಕ್ಕೆ ಶೋಭೆ ತರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮೋದಿ ಅಲೆ ಸೃಷ್ಟಿಯಾಗಿದೆ. ಇದನ್ನು ಕಂಡು ದಿಗಿಲಾಗಿರುವ ಕಾಂಗ್ರೆಸ್‌ ನಾಯಕರು ಹೀಗೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವ ಮಟ್ಟಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಬೆಳೆದಿದ್ದಾರೆ. ಇಂತಹ ದೇಶ ವಿರೋಧಿ ಕೃತ್ಯಗಳನ್ನು ಬಿಜೆಪಿ ಸಹಿಸುವುದಿಲ್ಲ’ ಎಂದರು.

ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ಕರಿಕೇರೆ ತಿಪ್ಪೇಸ್ವಾಮಿ, ನಾಗರಾಜ್ ಬೇದ್ರೆ, ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.