ADVERTISEMENT

ಲೋಕಸಭೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಎಂ.ಕೆ. ಶ್ರೀರಂಗಯ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 14:41 IST
Last Updated 28 ಫೆಬ್ರುವರಿ 2024, 14:41 IST
ಎಂ.ಕೆ.ಶ್ರೀರಂಗಯ್ಯ
ಎಂ.ಕೆ.ಶ್ರೀರಂಗಯ್ಯ   

ಚಿತ್ರದುರ್ಗ: ‘ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದೇನೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು.

‘ಅಧಿಕಾರಿಯಾಗಿ ರಾಜ್ಯದ ವಿವಿಧೆಡೆ ಕೆಲಸ ಮಾಡಿದ ಅನುಭವ ಇದೆ. ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಹಿತೈಷಿಗಳ ಅಪೇಕ್ಷೆ, ಮತದಾರರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದೇನೆ. ಶೀಘ್ರದಲ್ಲೇ ಬಿಜೆಪಿಗೆ ಅಧಿಕೃತವಾಗಿ ಸೇರಲಿದ್ದೇನೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಚ್‌. ಮೇಲನಹಳ್ಳಿ ಗ್ರಾಮದವನಾಗಿದ್ದು, ಬಾಲ್ಯದಿಂದಲೂ ಚಿತ್ರದುರ್ಗ ಜಿಲ್ಲೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಹೊಸದುರ್ಗ ತಾಲ್ಲೂಕಿನ ಗಡಿಯಲ್ಲಿ ನೆಲೆಸಿ ಜಿಲ್ಲೆಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ತಾಲ್ಲೂಕುಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ನಾನು ಕೂಡ ಸ್ಥಳೀಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಕ್ಷೇತ್ರ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಹೇಳಿಕೆ ನೀಡಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸದೇ ಇದ್ದರೆ ಪರ್ಯಾಯ ಅಭ್ಯರ್ಥಿ ಅಗತ್ಯ ಬಿಜೆಪಿಗೆ ಇದೆ. ಕ್ಷೇತ್ರದಲ್ಲಿ ಎಡಗೈ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿರುವ ಕಾರಣಕ್ಕೆ ನನ್ನನ್ನು ಪರಿಗಣಿಸುವಂತೆ ಬಿಜೆಪಿ ವರಿಷ್ಠರನ್ನು ಕೋರಿಕೊಂಡಿದ್ದೇನೆ. ಕ್ಷೇತ್ರ ಸುತ್ತಿ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೋಹನ್‌, ರಂಗಯ್ಯ ಇದ್ದರು.

ಅಧಿಕಾರಿಯಾಗಿ ಆಡಳಿತಾತ್ಮಕ ಅನುಭವ ಹೊಂದಿದ್ದೇನೆ. ನಿವೃತ್ತಿಯ ಬಳಿಕ ರಾಜಕಾರಣ ಪ್ರವೇಶಿಸುವುದರಿಂದ ಜನಸೇವೆಗೆ ಅನುಕೂಲವಾಗಲಿದೆ.
ಎಂ.ಕೆ.ಶ್ರೀರಂಗಯ್ಯ, ನಿವೃತ್ತ ಐಎಎಸ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.