ಚಿತ್ರದುರ್ಗ: ಕಾದಂಬರಿಕಾರ ಬಿ.ಎಲ್.ವೇಣು ಅವರು ಚಿತ್ರದುರ್ಗದ ಆಸ್ತಿ ಮಾತ್ರವಲ್ಲ. ಕಾಲಘಟ್ಟದ ಚರಿತ್ರೆಗೆ ಧ್ಯೋತಕವಾಗಿರುವ ಅವರು ಲೋಕಮಾನ್ಯರು ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ಇಲ್ಲಿನ ತರಾಸು ರಂಗಮಂದಿರದಲ್ಲಿ ಬಿ.ಎಲ್.ವೇಣು ಅವರ ಸಾಹಿತ್ಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
‘ಬಹುಮುಖಿ ಪ್ರತಿಭೆಯ ವೇಣು ಅವರ 16 ಕಾದಂಬರಿ ಸಿನಿಮಾ ಆಗಿರುವುದು ಹೆಮ್ಮೆಯ ಸಂಗತಿ. ಸಾಹಿತ್ಯ ಹಾಗೂ ಸಿನಿಮಾ ಮೂಲಕ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಪ್ರತಿಯೊಬ್ಬ ವ್ಯಕ್ತಿಯೂ ನಾಳೆಗೆ ಕೊಡುಗೆ ನೀಡುವಂತೆ ವೇಣು ಅವರು ಚಿರಸ್ಮರಣೀಯ ಕೆಲಸ ಮಾಡಿದ್ದಾರೆ’ ಎಂದು ಪ್ರತಿಪಾದಿಸಿದರು.
‘ಸಾರ್ವಕಾಲಿಕ ಸಾಂಸ್ಕೃತಿಕ ಅಸ್ಮಿತೆ ಕಟ್ಟುವುದು ಸುಲಭವಲ್ಲ. ವೇಣು ಅವರು ತಮ್ಮ ಮನಸ್ಸಿನ ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ನನ್ನ ಸಿನಿಮಾ ಪಯಣದಲ್ಲಿ ವೇಣು ಅವರ ಕೊಡುಗೆ ಅಪಾರ’ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಕೆ.ರವಿ, ‘ವೇಣು ಕಥೆಗಾರ ಆಗಿದ್ದು ವಿಸ್ಮಯ. ಅವರ ಕಥೆ, ಕಾದಂಬರಿ ವಿಭಿನ್ನ. ಸಾಕಷ್ಟು ಸಂಶೋಧನೆ ಮಾಡಿ ಕಾದಂಬರಿ ರಚಿಸಿದ್ದಾರೆ. ಅವರ ನಿರೂಪಣಾ ಶೈಲಿ ವಿಶಿಷ್ಟ. ಕಥೆ ಓದಿದರೆ ಸಿನಿಮಾ ನೋಡುವುದೇ ಬೇಡ. ಕಲ್ಲರಳಿ ಹೂವಾಗಿ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿರುವುದು ಅವರ ಕಥೆಯ ಕಾರಣಕ್ಕೆ’ ಎಂದು ಬಣ್ಣಿಸಿದರು.
***
ಜಾತಿ, ಅಧಿಕಾರ ಹಾಗೂ ಹಣದ ಹಂಗಿಲ್ಲದೆ ಬರೆದ ವೇಣು, ಈ ನೆಲದ ನಿಜವಾದ ಧ್ವನಿ. ಕಾಲಗರ್ಭದಲ್ಲಿ ಮರೆಯಾಗುತ್ತಿದ್ದ ಚರಿತ್ರೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
–ಕರಿಯಪ್ಪ ಮಾಳಿಗೆ, ಕನ್ನಡ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.