ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ರಕ್ತನಿಧಿ ಕೇಂದ್ರ ಪರವಾನಗಿ ನವೀಕರಣದ ಸಮಸ್ಯೆಗೆ ಸಿಲುಕಿದೆ. ಇದರಿಂದ ತನ್ನ ಕಾರ್ಯ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ರೋಗಿಗಳು ಪರದಾಡುವಂತೆ ಆಗಿದೆ.
ಅಗತ್ಯ ಸೌಲಭ್ಯ, ನಿರ್ವಹಣೆ ಕೊರತೆ ಕಾರಣಕ್ಕೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕೇಂದ್ರದ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಈ ಕಾರಣಕ್ಕೆ 2 ವಾರಗಳಿಂದ ರಕ್ತ ಸಂಗ್ರಹಣೆ ನಡೆಯುತ್ತಿಲ್ಲ. ಈಗಾಗಲೇ ಸಂಗ್ರಹಿಸಿದ್ದ ರಕ್ತವನ್ನು ಮೇ ಮೊದಲ ವಾರದವರೆಗೂ ವಿತರಿಸಲಾಗಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತ ದೊರೆಯುತ್ತಿಲ್ಲ.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ 500ರಿಂದ 600 ಯೂನಿಟ್ ರಕ್ತ ಸಂಗ್ರಹ ಸಾಮರ್ಥ್ಯವಿದೆ. ಪ್ರತಿ ತಿಂಗಳು ಅಂದಾಜು 350ರಿಂದ 400 ಯೂನಿಟ್ ರಕ್ತ ನೀಡಲಾಗುತ್ತದೆ.
ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ಹಾಗೂ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯ ರಕ್ತ ಸಂಗ್ರಹ ಕೇಂದ್ರಗಳಿಗೆ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, ಎಸ್‌ಜೆಎಂ ರಕ್ತನಿಧಿ ಕೇಂದ್ರ, ವಾಸವಿ ರಕ್ತನಿಧಿ ಕೇಂದ್ರ ಹಾಗೂ ಚಳ್ಳಕೆರೆಯಲ್ಲಿ ಬಾಲಾಜಿ ರಕ್ತನಿಧಿ ಕೇಂದ್ರಗಳಲ್ಲಿ ಮಾತ್ರ ರಕ್ತ ಸಂಗ್ರಹ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆ.
ಜಿಲ್ಲಾ ಆಸ್ಪತ್ರೆಯ ಕೇಂದ್ರ ಸ್ಥಗಿತಗೊಂಡ ಕಾರಣ ಗರ್ಭಿಣಿಯರು, ರಕ್ತಹೀನತೆ, ಹಿಮೊಫಿಲಿಯಾ ಸೇರಿ ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳು ಖಾಸಗಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ದುಪ್ಪಟ್ಟು ಹಣ ನೀಡಿ ರಕ್ತ ಪಡೆದು ಜೀವ ಉಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸಾವು ಬದುಕಿನ ನಡುವೆ ಹೋರಾಟ ನಡೆಸುವ ವೇಳೆ ತರ್ತಾಗಿ ರೋಗಿಗಳಿಗೆ ರಕ್ತ ದೊರೆತು ಅವರ ಜೀವ ಉಳಿಯಲಿ ಎಂಬ ಕಾರಣಕ್ಕಾಗಿಯೇ ರಕ್ತನಿಧಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಉದ್ದೇಶ ಮಾತ್ರ ಈಡೇರುತ್ತಿಲ್ಲ. ಕೇಂದ್ರದಲ್ಲಿ ರಕ್ತ ಸಿಗದ ಕಾರಣ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿತ್ಯವು ಚಿಕಿತ್ಸೆಗಾಗಿ ನೂರಾರು ಸಂಖ್ಯೆಯ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಬಂದವರಿಗೆಲ್ಲಾ ರಕ್ತದ ಅವಶ್ಯಕತೆ ಇರುವುದಿಲ್ಲ. ಅಪಘಾತವಾಗಿ ಅಧಿಕ ರಕ್ತಸ್ರಾವ ಆಗಿರುವವರು, ರಕ್ತಹೀನತೆಯಿಂದ ಬಳಲುವವರು, ಗರ್ಭಿಣಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ರಕ್ತ ಬೇಕಾಗುತ್ತದೆ. ಅಲ್ಲದೆ ಪ್ರಸವ ವೇಳೆ ಹೆಚ್ಚಿನ ರಕ್ತಸ್ರಾವ ಆಗಿದ್ದರೆ ರಕ್ತ ನೀಡುವ ಅವಶ್ಯಕತೆ ಇರುತ್ತದೆ. ಆದರೆ ರಕ್ತದ ಲಭ್ಯತೆ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
‘ಪ್ರತಿ 5 ವರ್ಷಕ್ಕೊಮ್ಮೆ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ ನಡೆಯುತ್ತದೆ. ಕೆಲ ತಾಂತ್ರಿಕ ಹಾಗೂ ಅಗತ್ಯ ಸೌಲಭ್ಯದ ಕೊರತೆ ಕಾರಣಕ್ಕೆ ರಕ್ತ ಸಂಗ್ರಹ, ವಿತರಣೆ ಸ್ಥಗಿತಗೊಳಿಸುವಂತೆ ಔಷಧ ನಿಯಂತ್ರಣ ಇಲಾಖೆ ಸೂಚಿಸಿದೆ. ರೋಗಿಗಳಿಗೆ ಪರಿಸ್ಥಿತಿ ಬಗ್ಗೆ ತಿಳಿಸುತ್ತಿದ್ದೇವೆ’ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.
‘ಆಸ್ಪತ್ರೆಯಲ್ಲಿ ರಕ್ತ ದೊರೆಯದ ಕಾರಣ ಹಲವು ಸಮಸ್ಯೆಗಳು ಉಂಟಾಗಿವೆ. ರಕ್ತದ ಕೊರತೆಯ ನೆಪವೊಡ್ಡಿ ಸರ್ಕಾರಿ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿಲ್ಲ. ಬದಲಾಗಿ ದಾವಣಗೆರೆಗೂ, ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೂ ಕಳುಹಿಸುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ.
ಈ ನಡುವೆ ಚುನಾವಣೆ, ಬಿಸಿಲು ಹಾಗೂ ಕಾಲೇಜುಗಳ ರಜೆ ಕಾರಣಕ್ಕೆ ರಕ್ತದಾನ ಶಿಬಿರಗಳು ಸಹ ನಿರೀಕ್ಷೆಯಂತೆ ನಡೆದಿಲ್ಲ. ಜನವರಿಯಿಂದ ಏಪ್ರಿಲ್‌ವರೆಗೆ 13 ಶಿಬಿರಗಳು ಮಾತ್ರ ನಡೆದಿವೆ. ಇದರ ನಡುವೆ ಪರವಾನಗಿ ನವೀಕರಣ ಸಮಸ್ಯೆ ರೋಗಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.
ಅಗತ್ಯ ಯಂತ್ರೋಪಕರಣಗಳಿಲ್ಲದ ಕಾರಣ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ ವಿಳಂಬವಾಗಿದೆ. ಇಲಾಖೆ ಸೂಚಿಸಿದ ನ್ಯೂನತೆ ಸರಿಪಡಿಸಿ ಪತ್ರ ಬರೆಯಲಾಗಿದೆ. ಮೇ 21ಕ್ಕೆ ಅಧಿಕಾರಿಗಳ ತಂಡ ಪರಿಶೀಲಿಸಲಿದೆ. ಅಲ್ಲಿಯವರೆಗೂ ಕೇಂದ್ರದ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿದೆ.ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ
ರಕ್ತನಿಧಿ ಕೇಂದ್ರ ಬಾಗಿಲು ಹಾಕಿರುವುದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಆಗಿದೆ. ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ಪತ್ನಿಗೆ ಅಗತ್ಯ ರಕ್ತ ಪಡೆಯಲು ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ಸಮಸ್ಯೆ ಎದುರಿಸುವಂತಾಯಿತು.ಕೆ.ಇಮಾಮ್ ಸಾಬ್, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.