ಚಿತ್ರದುರ್ಗ: ಉಚ್ಚಂಗಿ ಯಲ್ಲಮ್ಮ ದೇಗುಲದ ಮಂಟಪ ದುರಸ್ತಿ ಕಾಮಗಾರಿಯಲ್ಲಿಯೂ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಮಿಷನ್ ಕೇಳಿದರು. ದೇಗುಲದ ವಿಚಾರದಲ್ಲಿಯಾದರೂ ಕೊಂಚ ಉದಾರತೆ ತೋರುವಂತೆ ಕೇಳಿಕೊಂಡರೂ ಶಾಸಕರು ಪಟ್ಟು ಸಡಿಲಿಸಲಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಆರೋಪಿಸಿದರು.
‘ಕೆಲ ವರ್ಷಗಳ ಹಿಂದೆ ದೇಗುಲದ ಮಂಟಪ ಕುಸಿದಿತ್ತು. ಇದರ ದುರಸ್ತಿ ನಿಜಕ್ಕೂ ಸವಾಲಾಗಿತ್ತು. ತಮಿಳುನಾಡಿನಿಂದ ತಜ್ಞರನ್ನು ಕರೆಸಿ ಕಾಮಗಾರಿ ಪೂರ್ಣಗೊಳಿಸಿದೆ. ಉಚ್ಚಂಗಿ ಯಲ್ಲಮ್ಮ ನಮ್ಮ ಮನೆ ದೇವರಾಗಿರುವ ಕಾರಣಕ್ಕೆ ಕಾಳಜಿ ಹಾಗೂ ಪ್ರಾಮಾಣಿಕತೆ ಯಿಂದ ಕಾಮಗಾರಿ ಪೂರ್ಣಗೊಳಿಸಿದೆ. ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯ ಆರೋಪ ಹೊರಿಸಿದರು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಈ ಮೊದಲು ತಿಪ್ಪಾರೆಡ್ಡಿ ಹೀಗೆ ಕಮಿಷನ್‌ಗೆ ಪಟ್ಟು ಹಿಡಿಯುತ್ತಿರಲಿಲ್ಲ. ಶೇ 10ರಷ್ಟು ಅನುದಾನವನ್ನು ನಾವು ಉಳಿಸಿಕೊಂಡು ಅದರಲ್ಲಿಯೇ ಜನಪ್ರತಿನಿಧಿಗಳನ್ನು ಸಂತೃಪ್ತಿಗೊಳಿಸುತ್ತಿದ್ದೆವು. ನಾಲ್ಕು ವರ್ಷಗಳಿಂದ ಶಾಸಕರ ವರ್ತನೆ ಬದಲಾಗಿದೆ. ಕಾಮಗಾರಿ ಮಂಜೂರಾಗುತ್ತಿದ್ದಂತೆಯೇ ಕಮಿಷನ್ ಕೇಳುತ್ತಾರೆ. ಇದರಲ್ಲಿ ಕೊಂಚ ವಿಳಂಬ ಮಾಡಿದರೆ ಭೂಮಿ ಪೂಜೆ
ನೆರವೇರಿದ ಕಾಮಗಾರಿಯನ್ನೂ ತಡೆಯುತ್ತಾರೆ. ಲೋಕೋಪಯೋಗಿ ಇಲಾಖೆಯ ಕಟ್ಟಡ ನಿರ್ಮಾಣವಾಗಿ ಒಂದೂವರೆ ವರ್ಷ ಕಳೆದರೂ
ಅಂತಿಮ ಬಿಲ್ ಪಾವತಿಸಲು ಶಾಸಕರು ಅವಕಾಶ ನೀಡಿಲ್ಲ’ ಎಂದರು.
‘ಶಾಸಕರ ಈ ವರ್ತನೆಯಿಂದ ಅನೇಕ ಗುತ್ತಿಗೆದಾರರು ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ದೊಡ್ಡ ಕಂಪೆನಿಗಳನ್ನು ಕರೆಸಿ ಗುತ್ತಿಗೆ ನೀಡಲಾಗುತ್ತಿದೆ. ಪ್ಯಾಕೇಜ್ ಟೆಂಡರ್‌ನಿಂದ ಶಾಸಕರಿಗೆ ಇಡುಗಂಟು ಸಿಗುತ್ತಿದೆ. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವರ್ಗಾಯಿಸಿಕೊಂಡು ಶೇ 25ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದರು.
‘ಟೆಂಡರ್ ಪ್ರಕ್ರಿಯೆ ತುಂಬಾ ಪಾರದರ್ಶಕವಾಗಿ ನಡೆಯುತ್ತದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಪ್ರತ್ಯೇಕ ಸಮಿತಿಗಳಿದ್ದು, ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುತ್ತದೆ. ಶಾಸಕರು ಯಾರೊಬ್ಬರಿಗೂ ಟೆಂಡರ್ ಕೊಡಿಸಲು ಸಾಧ್ಯವಿಲ್ಲ. ಅವರ ಪ್ರಭಾವದಿಂದ ಟೆಂಡರ್ ತಪ್ಪಿಸಲು ಆಗದು. ಟೆಂಡರ್ ಕೊಡಿಸದಿರುವುದಕ್ಕೆ ಹೀಗೆ ಆರೋಪ ಮಾಡಲಾಗುತ್ತಿದೆ ಎಂಬ ಶಾಸಕರ ಹೇಳಿಕೆ ಬಾಲಿಷವಾಗಿದೆ’ ಎಂದು ಕುಟುಕಿದರು.
ಗುತ್ತಿಗೆದಾರ ಸಂಘದ ಪ್ರಮುಖ ರಾದ ಶ್ರೀನಿವಾಸ್, ಜಗದೀಶ್, ಸಿ.ಎಂ.ಅಕ್ಬರ್, ಮಹೇಶ್, ತಿಮ್ಮಣ್ಣ, ಕರಿಯಪ್ಪ, ಮೈಲಾರಪ್ಪ ಇದ್ದರು.
ಜೀವಬೆದರಿಕೆ: ಗುತ್ತಿಗೆದಾರ ದೂರು
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಭಯ ಎದುರಾಗಿದೆ ಎಂದು ಆರ್.ಮಂಜುನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
‘ಕಾಮಗಾರಿಗೆ ಮಂಜೂರಾದ ಅನುದಾನದಲ್ಲಿ ಶಾಸಕರು ಕಮಿಷನ್ ಪಡೆಯುತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದೇನೆ. ಇದರಿಂದ ಶಾಸಕರು ಹಗೆ ಸಾಧಿಸುವ ಸಾಧ್ಯತೆ ಇದೆ. ಅವರ ವಿರುದ್ಧ ಆರೋಪ ಮಾಡಿದ ಅನೇಕರಿಗೆ ಕಿರುಕುಳ ನೀಡಿದ ನಿದರ್ಶನಗಳಿವೆ. ನನಗೆ ಅಥವಾ ಕುಟುಂಬದ ಸದಸ್ಯರಿಗೆ ತೊಂದರೆಯಾದರೆ ಶಾಸಕರೇ ಹೊಣೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.