ADVERTISEMENT

ನಾಯಕನಹಟ್ಟಿ | ಕೆರೆ ಕೋಡಿ ನೀರು ಹರಿದು ಕುಸಿದ ಸೇತುವೆ: ಅಪಾಯಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 5:02 IST
Last Updated 23 ನವೆಂಬರ್ 2024, 5:02 IST
ನಾಯಕನಹಟ್ಟಿ ಪಟ್ಟಣದಿಂದ ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿರುವುದು
ನಾಯಕನಹಟ್ಟಿ ಪಟ್ಟಣದಿಂದ ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿರುವುದು   

ನಾಯಕನಹಟ್ಟಿ: ಸಮೀಪದ ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿ ರಸ್ತೆಯ ಸೇತುವೆ ಶಿಥಿಲಗೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ.

ಕಳೆದ ತಿಂಗಳು ಕೆರೆ ಕೋಡಿ ಬಿದ್ದು, ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಗೆ ಇಲ್ಲಿನ ಚಿಕ್ಕಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಹರಿಯಿತು. ಪಟ್ಟಣದಿಂದ ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿಗೆ ತೆರಳುವ ಮಾರ್ಗದಲ್ಲಿರುವ ಈ ಸೇತುವೆಯ ಮೇಲೆ ನೀರು ಹರಿದ ಕಾರಣ ಸೇತುವೆ ಕೊಚ್ಚಿಹೋಗಿದೆ. ಅಕ್ಟೋಬರ್‌ 21ರಂದು ಕೆರೆ ಕೋಡಿ ಬಿದ್ದ ರಾತ್ರಿಯೇ ಈ ಸೇತುವೆ ಮಾರ್ಗದಲ್ಲಿ ತೆರಳುತ್ತಿದ್ದ ಕಾರೊಂದು ಕೊಚ್ಚಿ ಹೋಗಿತ್ತು. ಅದರಲ್ಲಿದ್ದ ನಾಲ್ವರು ಯುವಕರೂ ಕೊಚ್ಚಿಹೋಗಿದ್ದರು. ಅದೃಷ್ಟವಶಾತ್ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರದ 15 ದಿನಗಳವರೆಗೂ ಸೇತುವೆ ಮೇಲೆ ನಿರಂತರವಾಗಿ ನೀರು ಹರಿದು ಸಂಚಾರಕ್ಕೆ ಅಡ್ಡಿಯಾಯಿತು.

ADVERTISEMENT

ಪಟ್ಟಣಕ್ಕೆ ಬರುವ ರೈತರು, ಹಾಲು, ಮೊಸರು, ಸೊಪ್ಪು ತರಕಾರಿ ಮಾರುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಬೋಸೆದೇವರಹಟ್ಟಿ, ಮಾಳಪ್ಪನಹಟ್ಟಿ, ನೆಲಗೇತನಹಟ್ಟಿ, ರಾಮದುರ್ಗ, ಸರೋಜವ್ವನಹಳ್ಳಿ ಭಾಗದಿಂದ ನಿತ್ಯ 80ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಟ್ಟಣದ ವಿವಿಧ ಶಾಲೆಗಳಿಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಕೋಳಿ ಫಾರಂ ಸೇರಿದಂತೆ ಕೃಷಿ ಜಮೀನು ಇರುವ ಕಾರಣ ಈ ಮಾರ್ಗದಲ್ಲಿ ಲಾರಿ., ಟ್ರ್ಯಾಕ್ಟರ್‌, ಕಾರು ಸೇರಿದಂತೆ ವಾಹನಗಳ ಓಡಾಟ ಹೆಚ್ಚು.

ಸೇತುವೆ ಕೊಚ್ಚಿಹೋಗಿರುವ ಪ್ರಯುಕ್ತ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅನಾಹುತ ಸಂಭವಿಸುವ ಮುನ್ನ ಸಮಸ್ಯೆಯ ಗಂಭೀರತೆ ಅರಿತು ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ಬೋಸೆದೇವರಹಟ್ಟಿ-ಮಾಳಪ್ಪನಹಟ್ಟಿಯಿಂದ ನಾಯಕನಹಟ್ಟಿಗೆ ಬಂದುಹೋಗಲು ಅತಿ ಸಮೀಪದ ರಸ್ತೆ ಇದಾಗಿದೆ. ಸೇತುವೆ ಕೊಚ್ಚಿಹೋಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಪರ್ಯಾಯ ಮಾರ್ಗದಲ್ಲಿ 3 ಕಿ.ಮೀ. ಕ್ರಮಿಸಿ ಊರು ಸೇರುವ ಪರಿಸ್ಥಿತಿ ಎದುರಾಗಿದೆ
ಪಿ.ಓಬಯ್ಯ ಬೋಸೆದೇವರಹಟ್ಟಿ
ಸೇತುವೆ ಕೊಚ್ಚಿಹೋದ ಪರಿಣಾಮ ನಿತ್ಯ ನೂರಾರು ಜನರು ಕಡಿದಾದ ಜಾಗದಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ ಇದೆ. ಸೇತುವೆ ಕೊಚ್ಚಿಹೋಗಿ ತಿಂಗಳಾದರೂ ಜನಪ್ರತಿನಿಧಿಯಾಗಲಿ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿಲ್ಲ
ಎಂ.ಡಿ. ಮನ್ಸೂರ್ ಕೋಶಾಧ್ಯಕ್ಷ ಕೆರೆ ಬಳಕೆದಾರರ ಸಂಘದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.