ಚಿತ್ರದುರ್ಗ: ಜಿಲ್ಲೆಯಲ್ಲಿ ಶಾಲೆ–ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯತ್ತ ಗಮನ ಹರಿಸಿದ್ದಾರೆ. ಕೋವಿಡ್ ಕಾರಣಕ್ಕೆ ಬದಲಾದ ತರಗತಿಯ ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಎದುರಾಗಿದೆ.
ಎಸ್ಸೆಸ್ಸೆಲ್ಸಿ, ಪಿಯು ಹಾಗೂ ಅಂತಿಮ ವರ್ಷದ ಪದವಿ ತರಗತಿಗಳು ಶುರುವಾದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ. 6ರಿಂದ 9ನೇ ತರಗತಿವರೆಗಿನ ‘ವಿದ್ಯಾಗಮ’ಕ್ಕೂ ಎಲ್ಲ ವಿದ್ಯಾರ್ಥಿಗಳು ಬರುತ್ತಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಎಲ್ಲ ಬಸ್‌ಗಳು ಸೇವೆ ಒದಗಿಸುತ್ತಿವೆ. ಖಾಸಗಿ ಬಸ್‌ಗಳಲ್ಲಿ ಶೇ 80ರಷ್ಟು ಬಸ್‌ಗಳು ರಸ್ತೆಗೆ ಇಳಿದಿವೆ. ಆದರೂ, ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಕೆಲ ಹಳ್ಳಿಗಳಲ್ಲಿ ಇನ್ನೂ ಪುನರಾರಂಭವಾಗಿಲ್ಲ. ದಿನಕ್ಕೆ ಒಂದು ಅಥವಾ ಎರಡು ಬಸ್‌ಗಳು ಸಂಚರಿಸುವ ಬಹುತೇಕ ಹಳ್ಳಿಗಳು ಜಿಲ್ಲೆಯಲ್ಲಿವೆ. ಇಂತಹ ಹಳ್ಳಿಯ ವಿದ್ಯಾರ್ಥಿಗಳು ತರಗತಿಯ ಸಮಯಕ್ಕೆ ಶಾಲೆ–ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಿಷಯವಾರು ಸಮಯ ನಿಗದಿ ಮಾಡಲಾಗಿದೆ. ಪಿಸಿಎಂ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಿಬಿಝಡ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ತರಗತಿಗಳು ನಡೆಯುತ್ತಿವೆ. ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ಬೆಳಿಗ್ಗೆ ತರಗತಿ ನಡೆದರೆ, ವಿದ್ಯಾಗಮದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಸಮಯ ಮೀಸಲಿಡಲಾಗಿದೆ. ಶಾಲೆ–ಕಾಲೇಜುಗಳಲ್ಲಿರುವ ಸ್ಥಳಾವಕಾಶದ ಆಧಾರದ ಮೇರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಸಮಯಕ್ಕೆ ಅನುಗುಣವಾಗಿ ಬಸ್ ಸೇವೆ ಲಭ್ಯವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.
ತರಗತಿಗಳನ್ನು ಮೂರು ಗಂಟೆ ಮಾತ್ರ ನಡೆಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ತರಗತಿ ಪೂರ್ಣಗೊಂಡ ತಕ್ಷಣ ಮನೆಗೆ ಪ್ರಯಾಣ ಬೆಳೆಸಲು ಹಳ್ಳಿ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನ ತರಗತಿ ಮುಗಿದರೂ ಬಸ್‌ಗಾಗಿ ಸಂಜೆಯವರೆಗೂ ಕಾಯುವುದು ಅನಿವಾರ್ಯವಾಗಿದೆ. ಬದಲಾದ ತರಗತಿಯ ಸಮಯಕ್ಕೆ ಬಸ್ ವೇಳಾಪಟ್ಟಿ ಹೊಂದಿಸುವುದು ಕೆಎಸ್‌ಆರ್‌ಟಿಸಿಗೂ ಸವಾಲಾಗಿ ಪರಿಣಮಿಸಿದೆ.
***
ಬಸ್‌ಪಾಸ್‌ಗೆ ಆನ್‌ಲೈನ್ ಅರ್ಜಿ
ಶಾಲೆ–ಕಾಲೇಜು ಆರಂಭವಾಗುತ್ತಿದ್ದಂತೆ ಬಸ್ ಪಾಸ್ ಸಮಸ್ಯೆ ತಲೆದೋರಿತ್ತು. ಸಮಸ್ಯೆ ಇತ್ಯರ್ಥಪಡಿಸಲು ಮುಂದಾದ ಕೆಎಸ್‌ಆರ್‌ಟಿಸಿ, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕೋವಿಡ್ ಕಾರಣಕ್ಕೆ ಮುದ್ರಿತ ಅರ್ಜಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬೇಕು. ಅಂತಿಮವಾಗಿ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಪಾಸ್ ಪಡೆಯಬೇಕು. ಪಾಸ್ ವಿತರಣೆಯ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪಾಸ್ ಪಡೆಯಲು ಜ.30ರವರೆಗೆ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.