ADVERTISEMENT

ಪರಶುರಾಂಪುರ: ಬರದ ನಾಡಲ್ಲಿ ಗೋಡಂಬಿ ಘಮ

ಜೆ.ತಿಮ್ಮಯ್ಯ
Published 6 ಮಾರ್ಚ್ 2024, 5:57 IST
Last Updated 6 ಮಾರ್ಚ್ 2024, 5:57 IST
ಚಿಕ್ಕಚೆಲ್ಲೂರು ಗ್ರಾಮದ ರೈತ ನಾಗರಾಜ ಅವರ ತೋಟದಲ್ಲಿ ಬೆಳದಿರುವ ಗೋಡಂಬಿ ಫಸಲಿಗೆ ಬಂದಿರುವುದು
ಚಿಕ್ಕಚೆಲ್ಲೂರು ಗ್ರಾಮದ ರೈತ ನಾಗರಾಜ ಅವರ ತೋಟದಲ್ಲಿ ಬೆಳದಿರುವ ಗೋಡಂಬಿ ಫಸಲಿಗೆ ಬಂದಿರುವುದು   

ಪರಶುರಾಂಪುರ: ಬರದ ನಾಡು, ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಗುರುತಿಸಿಕೊಂಡಿರುವ ಚಳ್ಳಕೆರೆ ತಾಲ್ಲೂಕು, ಇತ್ತೀಚೆಗೆ ಹೊಸ ತೋಟಗಾರಿಕೆ ಬೆಳೆಯಿಂದ ಸದ್ದು ಮಾಡುತ್ತಿದೆ. ಅಡಿಕೆ, ತೆಂಗು, ದಾಳಿಂಬೆ ಬೆಳೆಗಳ ಜೊತೆಗೆ, ಗೋಡಂಬಿ ಬೆಳೆಯಲು ಈ ಭಾಗದ ರೈತರು ಮುಂದಾಗಿದ್ದಾರೆ. ಈ ಹವಾಗುಣಕ್ಕೆ ಹೊಂದಿಕೊಳ್ಳುವ ಗೋಡಂಬಿ ತಳಿಯನ್ನು ಆಯ್ಕೆ ಮಾಡಿ, ಯಶಸ್ಸು ಸಾಧಿಸುತ್ತಿದ್ದಾರೆ. 

ಹೋಬಳಿಯ ಚಿಕ್ಕಚೆಲ್ಲೂರು ಗ್ರಾಮದ ರೈತ ನಾಗರಾಜ ತಮ್ಮ ಮೂರು ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಹಾಕಿದ್ದ ಗೋಡಂಬಿ ಫಸಲಿಗೆ ಬಂದಿದ್ದು, ಬರದ ನಾಡಲ್ಲಿ ಘಮ ಹರಡುತ್ತಿದೆ. 

ಕಡಿಮೆ ಖರ್ಚು, ನಿರಂತರ ಆದಾಯ

ADVERTISEMENT

ಒಂದು ಎಕೆರೆಗೆ ₹20 ಸಾವಿರ ಖರ್ಚು ಮಾಡಿ, ಮೂರು ವರ್ಷಗಳ ಕಾಲ ಆರೈಕೆ ಮಾಡಿದರೆ ಗೋಡಂಬಿ ಗಿಡಗಳು ಫಸಲಿಗೆ ಬರುತ್ತವೆ. ಫಸಲಿಗೆ ಬಂದ ನಂತರ ಒಂದು ಎಕೆರೆಗೆ ₹1 ಲಕ್ಷ ಆದಾಯ ಗಳಿಸಬಹುದು. ಮೊದಲ ಎರಡು, ಮೂರು ವರ್ಷ ಇಳುವರಿ ಕಡಿಮೆ ಇರುತ್ತದೆ. ನಂತರದ ವರ್ಷಗಳಲ್ಲಿ  ಇಳುವರಿ ಹೆಚ್ಚುತ್ತದೆ. 60 ವರ್ಷಗಳವರೆಗೂ ನಿರಂತರ ಆದಾಯ ತಂದುಕೊಡುತ್ತದೆ ಎನ್ನುತ್ತಾರೆ ರೈತ ನಾಗರಾಜ.

ಉಳ್ಳಾಲ 1,2,3 ಮತ್ತು ವಿ-4, ವಿ-6, ವಿ-7 ಹಾಗೂ ಯು.ಎನ್. 50 ಎಂಬ ತಳಿಗಳು ಈ ಭಾಗದ ಬಿಸಿಲಿನ ಹವಾಗುಣಕ್ಕೆ ಹೊಂದಿಕೊಳ್ಳುತ್ತವೆ. ಗಿಡದಿಂದ ಗಿಡಕ್ಕೆ 20 ರಿಂದ 24 ಅಡಿ ಅಂತರದಲ್ಲಿ, ಜೂನ್ ತಿಂಗಳಿಂದ ಅಗಸ್ಟ್ ತಿಂಗಳ ನಡುವೆ ನಾಟಿ ಮಾಡಬೇಕು. ಒಂದು ಎಕೆರೆಗೆ 110 ಗಿಡಗಳಂತೆ ಮೂರು ಎಕೆರೆಗೆ 330 ಗಿಡಗಳನ್ನು ನೆಡಬಹುದು.

ಕಡಿಮೆ ನೀರು, ಕೀಟ ಬಾಧೆ ವಿರಳ:

ಬಿಸಿಲಿನ ವಾತಾವರಣಕ್ಕೂ ಹೊಂದಿಕೊಳ್ಳುವ ಗೋಡಂಬಿಗೆ ಕಡಿಮೆ ನೀರು ಸಾಕಾಗುತ್ತದೆ. ಇದಕ್ಕೆ ಕೊಳವೆಬಾವಿಯ ನೀರೂ ಬೇಕಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಮಾತ್ರ 15 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಯಿಸಿದರೆ, ಸಾಕು ಗಿಡಗಳು ಫಲವತ್ತಾಗಿ ಬೆಳೆಯುತ್ತವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ನೀರಿನ ಅವಶ್ಯಕತೆ ಇರುವುದಿಲ್ಲ ಎನ್ನುವುದು ರೈತ ನಾಗರಾಜ ಅವರ ಅಭಿಪ್ರಾಯ. 

ತಾಲ್ಲೂಕಿನಲ್ಲಿ ಈಗಾಗಲೇ 64 ಹೆಕ್ಟೇರ್‌ನಲ್ಲಿ ಗೋಡಂಬಿ ಬೆಳೆಯುತ್ತಿದ್ದು, ಅಸಕ್ತಿ ಇರುವ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರೆ ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತದೆ. ಜತೆಗೆ ನರೇಗಾದಡಿಯಲ್ಲಿ ಪ್ರೋತ್ಸಹಧನವನ್ನೂ ನೀಡಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎನ್ನುತ್ತಾರೆ ಚಳ್ಳಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ. 

ರೈತರು ಅಡಿಕೆ ದಾಳಿಂಬೆ ಟೊಮೊಟೊ ಬೆಳೆಗಳ ಹಿಂದೆ ಬೀಳುವುದನ್ನು ಬಿಟ್ಟು ಕಡಿಮೆ ಖರ್ಚಿನ ನಿರಂತರ ಆದಾಯ ಕೊಡುವ ಗೋಡಂಬಿಯಂತಹ ಬೆಳೆ ಬೆಳೆಯಲು ಮುಂದಾಗಬೇಕು
ಎನ್.ನಾಗರಾಜ, ರೈತ, ಚಿಕ್ಕಚೆಲ್ಲೂರು
ಗೋಡಂಬಿ ಗಿಡಗಳಿಗೆ ಟೀ (ಚಹಾ) ಸೊಳ್ಳೆ ಎನ್ನುವ ಕೀಟಬಾಧೆ ಬಿಟ್ಟರೆ ಬೇರಾವ ರೋಗಗಳೂ ಹರಡುವುದಿಲ್ಲ. ಅದರಲ್ಲೂ ಈ ಕೀಟ ಬಾಧೆ ಕರಾವಳಿ ಭಾಗದಲ್ಲಿ ಹೆಚ್ಚಾಗಿದ್ದು ಈ ಭಾಗದಲ್ಲಿ ಕಡಿಮೆ
ಮಹಾಂತೇಶ ಪಿ.ಎಸ್., ಸಹಾಯಕ ಪ್ರಾಧ್ಯಾಪಕ, ಬಬ್ಬೂರು ಕೃಷಿ ಕೇಂದ್ರ
ಚಿಕ್ಕಚೆಲ್ಲೂರು ಗ್ರಾಮದ ರೈತ ನಾಗರಾಜ ಅವರ ಗೋಡಂಬಿ ತೋಟ
ಚಿಕ್ಕಚೆಲ್ಲೂರು ಗ್ರಾಮದ ರೈತ ನಾಗರಾಜ ಅವರ ತೋಟದಲ್ಲಿ ಬೆಳದಿರುವ ಗೋಡಂಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.