ಹೊಳಲ್ಕೆರೆ: ಜಾತಿ ಗಣತಿ ಮಾಡಿ ಜಾತಿವಾರು ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಪರಿಶಿಷ್ಟರಿಗೆ ನ್ಯಾಯ ಸಿಗುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಹಾಗೂ ಮದಕರಿ ನಾಯಕ ಜಯಂತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಮೊನ್ನೆ ಪೇಜಾವರ ಶ್ರೀಗಳು ‘ನಮ್ಮದು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಜಾತಿಗಣತಿ ಬೇಡ’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ದೇಶದಲ್ಲಿ ಹಿಂದುಳಿದ ಜಾತಿಗಳ ಜನರೇ ಹೆಚ್ಚಿದ್ದು, ಈಗಲೂ ಮುಖ್ಯವಾಹಿನಿಗೆ ಬಂದಿಲ್ಲ. ಜಾತಿಗಣತಿಯಿಂದ ಮಾತ್ರ ಸಾಮಾಜಿಕ ಸ್ಥಿತಿಗತಿಗಳು ತಿಳಿಯಲಿದ್ದು, ಸೌಲಭ್ಯ ನೀಡಲು ಅನುಕೂಲ ಆಗುತ್ತದೆ. ಕೆಳವರ್ಗದ ಮತ ಪಡೆದು ಅಧಿಕಾರಕ್ಕೆ ಬರುವ ಮೇಲ್ವರ್ಗದವರು ನಮ್ಮನ್ನು ಮರೆಯುತ್ತಾರೆ. ಆದ್ದರಿಂದ ಕೆಳ ವರ್ಗದವರೆಲ್ಲ ಪಕ್ಷ ಬೇಧ ಮರೆತು ಒಂದಾಗಿ ಸಂಘಟಿತರಾಗಬೇಕು’ ಎಂದು ಹೇಳಿದರು.
‘ಬೇರೆ ವರ್ಗದವರು ನಾವು ತಳವಾರಿಕೆ ಮಾಡಿಕೊಂಡು ಬಂದಿದ್ದೇವೆ ಎಂದು ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಾಯಕ ಜನಾಂಗದ ಸೌಲಭ್ಯ ಕಸಿದುಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಪರಿಶಿಷ್ಟರು ಹಿಂದಿನಿಂದಲೂ ತುಳಿತಕ್ಕೆ ಒಳಗಾಗಿದ್ದಾರೆ. ನಾಯಕ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಸಮುದಾಯದ ವಿದ್ಯಾರ್ಥಿಗಳಿಗಾಗಿ ಬೊಮ್ಮನಕಟ್ಟೆಯಲ್ಲಿ ₹ 30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಪಿಯು ಕಾಲೇಜು ನಿರ್ಮಿಸಿದ್ದು, ಇದು ರಾಜ್ಯದಲ್ಲಿಯೇ ಸುಂದರ ಕಟ್ಟಡವಾಗಿದೆ. ಪಟ್ಟಣದಲ್ಲಿ ದೊಡ್ಡ ವಾಲ್ಮೀಕಿ ಭವನ ನಿರ್ಮಿಸಲಾಗಿದೆ. ಸಮುದಾಯಕ್ಕೆ ಅಗತ್ಯವಾದ ಹಲವು ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.
ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬುಡಕಟ್ಟು ಸಂಶೋಧಕಿ ಕೆ.ಬಿ.ಜಯಲಕ್ಷ್ಮಿ ಉಪನ್ಯಾಸ ನೀಡಿದರು. ಎಸ್ಎಸ್ಎಲ್‌ಸಿ, ಪಿಯುನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿಜೆಯೊಂದಿಗೆ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಸೂರೇಗೌಡ, ಮುಖಂಡರಾದ ಎಂ.ಬಿ.ತಿಪ್ಪೇಸ್ವಾಮಿ, ಲೋಹಿತ್ ಕುಮಾರ್, ರಾಜವಂಶಸ್ಥ ರಾಜಾ ಮದಕರಿ ನಾಯಕ, ಪುಟ್ಟಸ್ವಾಮಿ, ರಾಜಣ್ಣ ಹಿರೇಕಂದವಾಡಿ, ಮಂಜುನಾಥ, ಶಿವಪುರ ಎಸ್.ಆರ್.ಅಜ್ಜಯ್ಯ, ಗೌರಿ ರಾಜಕುಮಾರ್, ಆರ್.ಎ.ಅಶೋಕ್, ಸಂಗನಗುಂಡಿ ಮಂಜುನಾಥ್, ಗೋವಿಂದ ಸ್ವಾಮಿ, ರಾಜಪ್ಪ, ಪಿ.ಹನುಮಂತಪ್ಪ, ಮಧು ಪಾಲೇಗೌಡ, ರಂಗಸ್ವಾಮಿ, ಅಂಬಿಕಾ, ಸರಸ್ವತಿ, ಕೃಷ್ಣಮೂರ್ತಿ ಹಾಗೂ ನಾಯಕ ಸಮಾಜದವರು ಇದ್ದರು.
ಮದಕರಿ ನಾಯಕ ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ ಕಟ್ಟಿಸಿದ. ಆ ಬೃಹತ್ ಕೋಟೆ ಕಟ್ಟಿದವರು ವಡ್ಡರು. ಆದ್ದರಿಂದ ವಡ್ಡರು ನಾಯಕರು ಸಹೋದರರಿದ್ದಂತೆಎಂ.ಚಂದ್ರಪ್ಪ ಶಾಸಕ
‘2008ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಿತ್ರದುರ್ಗಕ್ಕೆ ಬಂದಿದ್ದಾಗ ಮದಕರಿ ನಾಯಕ ಥೀಮ್ ಪಾರ್ಕ್ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಶಾಸಕ ಎಂ.ಚಂದ್ರಪ್ಪ ಸಂಸದ ಗೋವಿಂದ ಕಾರಜೋಳ ಅವರು ಮತ್ತೊಮ್ಮೆ ಈ ವಿಷಯವನ್ನು ಅಮಿತ್ ಷಾ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸಬೇಕು’ ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.