ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಮಹಾ ವಂಚನೆ: ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:28 IST
Last Updated 24 ಜುಲೈ 2024, 16:28 IST
ಬಿ.ಎನ್‌.ಚಂದ್ರಪ್ಪ
ಬಿ.ಎನ್‌.ಚಂದ್ರಪ್ಪ   

ಚಿತ್ರದುರ್ಗ: ‘ಬಿಜೆಪಿಯ ಕೇಂದ್ರ ನಾಯಕರ ಪಾಲಿಗೆ ಕರ್ನಾಟಕ ರಾಜ್ಯವು ಚುನಾವಣೆಯ ಫಲವತ್ತಾದ ಭೂಮಿಯಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ರಾಜ್ಯ ತೀವ್ರ ಕಡೆಗಣನೆಗೆ ಒಳಗಾಗುತ್ತಿದೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಸಾಕ್ಷಿಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎನ್‌.ಚಂದ್ರಪ್ಪ ಆರೋಪಿಸಿದ್ದಾರೆ.

ಚಿತ್ರದುರ್ಗ, ತುಮಕೂರು ಜಿಲ್ಲೆಯ ಜನರ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದಿನ ಬಜೆಟ್ ನಲ್ಲಿ ₹ 5300 ಕೋಟಿ ಘೋಷಿಸಿ, ಇಲ್ಲಿಯವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ಯೋಜನೆಗೆ ಮನ್ನಣೆ ನೀಡಿಲ್ಲ. ಈ ಬಜೆಟ್‌ನಲ್ಲಿ ಕೂಡ ನಿರಾಸೆಗೊಳಿಸಲಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಪದೇ ಪದೆ ಭೇಟಿ ನೀಡಿ ಭರವಸೆಗಳ ಮಹಾಪುರವನ್ನೇ ಹರಿಸಿದ್ದ ಬಿಜೆಪಿ ನಾಯಕರಿಗೆ ಬಜೆಟ್ ಮಂಡನೆ ಸಂದರ್ಭದಲ್ಲಿ ಕನ್ನಡ ಜನರೇ ನೆನಪಾಗಿಲ್ಲ. ಇದೊಂದು ಕರ್ನಾಟಕ ಜನರ ಪಾಲಿಗೆ ಮಹಾ ವಂಚನೆ ಬಜೆಟ್ ಆಗಿದೆ ಎಂದು ಆರೋಪಿಸಿದ್ದಾರೆ.

‘ಮದಕರಿನಾಯಕ ಥೀಮ್ ಪಾರ್ಕ್ ಸೇರಿ ಅನೇಕ ಯೋಜನೆಗಳನ್ನು ಘೋಷಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆಯನ್ನೇ ಬೃಂದಾವನ ಮಾಡುವುದಾಗಿ ಆಸೆ ಹುಟ್ಟಿಸಿ ಮೋಸಗೊಳಿಸಲಾಗಿದೆ. ಅದರಲ್ಲೂ ಚಿತ್ರದುರ್ಗ, ತುಮಕೂರು ಜಿಲ್ಲೆಗೆ ತೀವ್ರ ಅನ್ಯಾಯ ಮಾಡಲಾಗಿದೆ. ಆದ್ದರಿಂದ ರಾಜ್ಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ಅವರು ವಂಚನೆ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೇ ರಾಜ್ಯ ಬಿಜೆಪಿಗರು ಕೇಂದ್ರ ನಾಯಕರ ಜೀತದಾಳು ಎಂದು ಭಾವಿಸಬೇಕಾಗುತ್ತದೆ’ ಎಂದು ಬಿ.ಎನ್.ಚಂದ್ರಪ್ಪ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.