ಚಳ್ಳಕೆರೆ (ಚಿತ್ರದುರ್ಗ): ಉತ್ತರ ಭಾರತದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಬಯಲುಸೀಮೆಯಲ್ಲಿ ಬೆಳೆದ ಕರಬೂಜವನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ ಹಣ್ಣುಗಳು ಬಳ್ಳಿಯಲ್ಲೇ ಕೊಳೆತು ಮಣ್ಣುಪಾಲಾಗುತ್ತಿವೆ.
ಮಹಾರಾಷ್ಟ್ರ, ದೆಹಲಿ ಮುಂತಾದೆಡೆ ಕರಬೂಜಕ್ಕೆ ಭಾರಿ ಬೇಡಿಕೆ ಇದೆ. ತಾಲ್ಲೂಕಿನ ಗಡಿ ಭಾಗದ ಕಾಟಂದೇವರಕೋಟೆ, ಬೂದಿಹಳ್ಳಿ, ಬೋಗನಹಳ್ಳಿ, ಬಸಾಪುರ, ಓಬಳಾಪುರ, ಬಂಡೆತಿಮ್ಮಲಾಪುರ ಮುಂತಾದ ಗ್ರಾಮಗಳ ಬೆಳೆಗಾರರು, ಕೊಳವೆಬಾವಿಯಲ್ಲಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಮಲ್ಚಿಂಗ್ ಪೇಪರ್ ವಿಧಾನದಲ್ಲಿ ಒಟ್ಟು 13 ಎಕರೆಯಲ್ಲಿ ಕರಬೂಜ ಬೆಳೆದಿದ್ದರು.
ಉತ್ತಮ ಇಳುವರಿ ಬಂದಿದ್ದ ಹಣ್ಣನ್ನು ದೆಹಲಿಯ ಮಾರುಕಟ್ಟೆಗೆ ರಫ್ತು ಮಾಡಿ ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಉತ್ತರ ಭಾರತದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ರಫ್ತು ಮಾಡಲು ಸಾರಿಗೆ ಸಮಸ್ಯೆ ಎದುರಾಗಿದೆ. ಬೇರೆ ದಾರಿ ಕಾಣದೆ ಅವರು ಬೆಳೆದ ಹಣ್ಣುಗಳನ್ನೆಲ್ಲಾ ಬಳ್ಳಿಯಲ್ಲೇ ಬಿಟ್ಟಿದ್ದಾರೆ.
ಹದಗೊಳಿಸಿದ ಭೂಮಿಗೆ ಒಂದು ಲೋಡ್ ಕುರಿಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಕಲಾಗಿತ್ತು. ಪ್ರತಿ ಕೆ.ಜಿ.ಗೆ ₹ 25,000ದಂತೆ 2 ಕೆ.ಜಿ. ಕೊಹಿನೂರ್ ತಳಿಯ ಕರಬೂಜ ಬೀಜವನ್ನು ರಾಯದುರ್ಗದಿಂದ ತಂದು ಬಿತ್ತಿದ್ದೆವು. ಅಗತ್ಯಕ್ಕೆ ತಕ್ಕಂತೆ ಬಳ್ಳಿಗೆ ನೀರು ಹಾಯಿಸಿ ನಿರ್ವಹಣೆ ಮಾಡಿದ್ದರಿಂದ ಬಿತ್ತಿದ 58 ದಿನಕ್ಕೆ ಫಲ ಕೊಟ್ಟಿತ್ತು. ನಾಲ್ಕು ಎಕರೆಯಲ್ಲಿ ಕನಿಷ್ಠ 4–5 ಟನ್ ಕರಬೂಜ ಹಣ್ಣು ದೊರೆಯುತ್ತಿತ್ತು. ₹7 ಲಕ್ಷದಿಂದ ₹ 8 ಲಕ್ಷ ಆದಾಯ ನಿರೀಕ್ಷಿಸಲಾಗಿತ್ತು. ರಫ್ತು ವಹಿವಾಟಿಗೆ ಮಳೆ ಸಮಸ್ಯೆ ಎದುರಾಗಿರುವ ಕಾರಣ ಹಣ್ಣು ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಕಾಟಂದೇವರಕೋಟೆ ಗ್ರಾಮದ ಬೆಳೆಗಾರ ಒ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.
‘ಬೀಜ, ಗೊಬ್ಬರ ಹಾಗೂ ಬೇಸಾಯ ಸೇರಿ ನಾಲ್ಕು ಎಕರೆಯಲ್ಲಿ ಕರಬೂಜ ಬೆಳೆಯಲು ₹ 3 ಲಕ್ಷ ವೆಚ್ಚ ಮಾಡಲಾಗಿತ್ತು. ಬೆಳೆಗೆ ಹಾಕಿದ್ದ ಬಂಡವಾಳದಲ್ಲಿ ಈಗ ಬಿಡಿಗಾಸೂ ಸಿಗದಂತಾಗಿದೆ. ಮುಂದೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ನೊಂದು ನುಡಿದರು.
‘ಮಾರುಕಟ್ಟೆ ಸಮಸ್ಯೆಯಿಂದ ನಷ್ಟ ಸಂಭವಿಸಿದರೆ ಇಲಾಖೆಯಿಂದ ಬೆಳೆಗಾರರಿಗೆ ಪರಿಹಾರ ನೀಡಲು ಬರುವುದಿಲ್ಲ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.