ಚಿತ್ರದುರ್ಗ: ಅಮಾಯಕರ ಹೆಸರಿನಲ್ಲಿ ಕಾಂಗ್ರೆಸ್ ಮಾಡಿದ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣದ ಪರಿಣಾಮವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ನಡೆಸಲಾಗಿದೆ. ಪೊಲೀಸ್ ವ್ಯವಸ್ಥೆ ಕುಸಿದು ಬಿದ್ದಿದ್ದು, ರಾಜ್ಯವನ್ನು ಭಗವಂತನೇ ಕಾಪಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
‘ಸಾವಿರಾರು ಜನರು ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ಮಾಡಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾದಗೆಟ್ಟಿದೆ. ಪೊಲೀಸರ ರಕ್ಷಣೆಗೆ ಪೊಲೀಸರೇ ಬರಬೇಕಾದ ಧಾರುಣ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಹಾಗೂ ಗೃಹ ಸಚಿವರು ಇದ್ದಾರೆಯೇ’ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಪೊಲೀಸ್ ವ್ಯವಸ್ಥೆಯ ಕುರಿತು ಯಾರೊಬ್ಬರಿಗೂ ಭಯ ಇಲ್ಲವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಾಲುಪ್ರಸಾದ್ ಯಾದವ್ ಆಡಳಿತದ ಬಿಹಾರವಾಗಿ ಕರ್ನಾಟಕ ಪರಿವರ್ತನೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯ ಡಿ.ಜೆ.ಹಳ್ಳಿ ಪ್ರಕರಣವನ್ನು ಇದು ನೆನಪಿಸಿದೆ’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.