ADVERTISEMENT

ಚಿತ್ರದುರ್ಗ: ಕೆಳಗೋಟೆ ಚನ್ನಕೇಶವ ಸ್ವಾಮಿಯ ಅದ್ದೂರಿ ರಥೋತ್ಸವ

ಮೆರಗು ತಂದ ನಾದಸ್ವರ ತಂಡ; ಬಾಳೆಹಣ್ಣು ಹೂವು ಅರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 15:53 IST
Last Updated 24 ಫೆಬ್ರುವರಿ 2024, 15:53 IST
ಚಿತ್ರದುರ್ಗ ನಗರದ ಕೆಳಗೋಟೆ ಸಿ.ಕೆ.ಪುರದಲ್ಲಿ ಶನಿವಾರ ಸಾಗಿದ ಚನ್ನಕೇಶವ ಸ್ವಾಮಿಯ ರಥೋತ್ಸವ
ಚಿತ್ರದುರ್ಗ ನಗರದ ಕೆಳಗೋಟೆ ಸಿ.ಕೆ.ಪುರದಲ್ಲಿ ಶನಿವಾರ ಸಾಗಿದ ಚನ್ನಕೇಶವ ಸ್ವಾಮಿಯ ರಥೋತ್ಸವ   

ಚಿತ್ರದುರ್ಗ: ಇಲ್ಲಿನ ಕೆಳಗೋಟೆ ಸಿ.ಕೆ.ಪುರದ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಶನಿವಾರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಬ್ರಹ್ಮ ರಥದಲ್ಲಿ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ದಾಸಯ್ಯಗಳು ಗಂಟೆ, ಜಾಗಟೆ, ಶಂಖಗಳನ್ನು ಮೊಳಗಿಸಿದರು. ಭಕ್ತರು ಬಾಳೆಹಣ್ಣು ಹೂವುಗಳನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಚನ್ನಕೇಶವಸ್ವಾಮಿ ದೇವಸ್ಥಾನದಿಂದ ಕೆಳಗೋಟೆ ಅಡ್ಡರಸ್ತೆಯವರೆಗೆ ರಥವನ್ನು ಎಳೆದು ಮೂಲ ಸ್ಥಾನಕ್ಕೆ ಕರೆತರಲಾಯಿತು. ಈ ವೇಳೆ ಸಿ.ಕೆ.ಪುರ ಬಡಾವಣೆ, ಕೆಳಗೋಟೆ, ಆಕಾಶವಾಣಿ ಸುತ್ತಲಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಮೂರ್ತಿಯ ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿತರಿಸಲಾಯಿತು. ತಿಪಟೂರಿನ ವಿನಾಯಕ ನಾದಸ್ವರದ ಮಂಜುಳ ಬಸವರಾಜ್ ಮತ್ತು ತಂಡದವರ ನಾದಸ್ವರ ಹಾಗೂ ತಬಲ ರಥೋತ್ಸವಕ್ಕೆ ಮೆರುಗು ನೀಡಿತು.

ADVERTISEMENT

ರಥೋತ್ಸವದ ಅಂಗವಾಗಿ ಫೆ.23 ರಂದು ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ ಸೇರಿದಂತೆ ಮತ್ತಿತರ ಪೂಜಾ ಕೈಂಕರ್ಯಗಳು ಜರುಗಿದವು.

ಅಂದು ಮಧ್ಯಾಹ್ನ ಕೆಳಗೋಟೆ ಮತ್ತು ಸಿ.ಕೆ.ಪುರ ಬಡಾವಣೆಗಳಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ ವೈಭವದಿಂದ ಸಾಗಿತ್ತು. ಸ್ವಾಮಿಯ ಕಲ್ಯಾಣೋತ್ಸವ, ಅಷ್ಠಾವಧಾನ ಪೂರ್ವಕವಾಗಿ ಉಯ್ಯಾಲೋತ್ಸವಕ್ಕೆ ಭಕ್ತರು ಸಾಕ್ಷಿಯಾದರು.

ಮಾಜಿ ಶಾಸಕ ಎಸ್‌.ಕೆ.ಬಸವರಾಜನ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಸಂಚಾಲಕ ಫಾತ್ಯರಾಜನ್‌, ಮಾರುತೇಶ್‌ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಡಿ.ಪ್ರಕಾಶ್‌ ಇದ್ದರು.

ರೇಣುಕಾಯಲ್ಲಮ್ಮ ದೇವಿ

ರೇಣುಕಾಯಲ್ಲಮ್ಮ ದೇವಿ ಜಾತ್ರೆ

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಭರತ ಹುಣ್ಣಿಮೆ ಅಂಗವಾಗಿ 77ನೇ ವರ್ಷದ ರೇಣುಕಾಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ರೇಣುಕಾಯಲ್ಲಮ್ಮ ದೇವಿಗೆ (ಜಡೇಯಲ್ಲಮ್ಮ) ಪಂಚಾಮೃತ ಅಭಿಷೇಕ ಸಹಸ್ರ ಬಿಲ್ವಾರ್ಚನೆ ಪುಷ್ಪ ಅಲಂಕಾರದೊಂದಿಗೆ ವಿಶೇಷ ದರ್ಶನ ಹಾಗೂ ಶ್ರೀದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ತುಂಬಿಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾಧಿಗಳು ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.