ಚಿತ್ರದುರ್ಗ: ‘ಚೆಕ್‌ಡ್ಯಾಂ ನಿರ್ಮಾಣದ ಹೆಸರಲ್ಲಿ ತಾಲ್ಲೂಕಿನ ಇಂಗಳದಾಳು ಗ್ರಾಮ ಪಂಚಾಯತಿಯಲ್ಲಿ ₹ 6 ರಿಂದ
₹ 7 ಕೋಟಿ ಅವ್ಯವಹಾರ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಕಡತಗಳನ್ನು ಸುಟ್ಟು ಹಾಕಿದ್ದಾರೆ’ ಎಂಬ ಮಾಹಿತಿಯನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬಹಿರಂಗಗೊಳಿಸಿದರು.
ಇಲ್ಲಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು. ‘ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದ ಚೆಕ್‌ಡ್ಯಾಂಗಳಿಗೆ ಸುಣ್ಣ ಬಳಿದು ದಾಖಲೆ ಸಲ್ಲಿಸಿ ಬಿಲ್ ಮಾಡಿಸಿಕೊಂಡಿದ್ದಾರೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ಮಾಹಿತಿ ಪಡೆದಾಗ ಅವ್ಯವಹಾರ ನಡೆದಿರುವುದು ಸ್ಪಷ್ಟವಾಯಿತು. ಅಧಿಕಾರಿಗಳು ಪರಿಶೀಲನೆಗೆ ಮುಂದಾಗುತ್ತಿದ್ದಂತೆ ಕಡತಗಳು ಸಿಗದಂತೆ ಸುಟ್ಟು ಹಾಕಲಾಗಿದೆ’ ಎಂದು ತಿಳಿಸಿದರು.
‘ಈ ಅವ್ಯವಹಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಅಧಿಕಾರಗಳ ತಂಡ ರಚಿಸಿ ವಿಶೇಷ ಆಡಿಟ್ ನಡೆಸಿ ವರದಿಯನ್ನು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇತೃತ್ವದ ವಿಶೇಷ ತಂಡಕ್ಕೆ ಎಲ್ಲ ಕಡತಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು.
‘ಅಕ್ರಮ ಎಸಗಿದವರು ನಮ್ಮನ್ನು ಏನೂ ಮಾಡಲು ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ತಂಡಕ್ಕೆ ಸರಿಯಾದ ಮಾಹಿತಿ, ಕಡತಗಳನ್ನು ಒದಗಿಸದಿದ್ದರೆ ಇಡೀ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸುತ್ತೇನೆ. ಆಗ ಭಾಗಿಯಾದರು ಬಲೆಗೆ ಬೀಳುತ್ತಾರೆ’ ಎಂದು ಎಚ್ಚರಿಸಿದರು.
‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ ಸಿ.ಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ರಸ್ತೆ ನಡುವೆ ಕಾರಿನ ಚಕ್ರ ಇಳಿಯುವಷ್ಟು ಅಂತರವನ್ನು ಬಿಟ್ಟಿದ್ದೀರಾ? ನೀವು ಮಾಡಿರುವ ಎಡವಟ್ಟಿಗೆ ಜನರಿಂದ ದೂರು ಕೇಳಿ ಸಾಕಾಗಿದೆ. ಮೊದಲು ರಸ್ತೆಗಳನ್ನು ಸಂಪೂರ್ಣ ಪೂರ್ಣಗೊಳಿಸಿ’ ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ಶಾಸಕರು ಸೂಚಿಸಿದರು.
‘ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗೂ ರಸ್ತೆ ವಿಭಜಕಕ್ಕೆ ಬಳಿದ ಬಣ್ಣ ಮಳೆ, ಬಿಸಿಲಿಗೆ ಕಾಣದಂತಾಗಿದೆ. ಗುತ್ತಿಗೆ ಪಡೆದವರಿಂದ ಹೊಸದಾಗಿ ಕೆಲಸ ಮಾಡಿಸಿ ಬಳಿಕ ಹಣ ಪಾವತಿಸಿ. ಒಂದು ವೇಳೆ ಕಾಮಗಾರಿ ಕಳಪೆಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.
‘ಕನಕ ವೃತ್ತದಿಂದ ಎಸ್‌ಜೆಎಂ ಕಾಲೇಜು, ಭೀಮಸಮುದ್ರ ಮಾರ್ಗದ ರಸ್ತೆ ಕಾಮಗಾರಿ ನಡೆಯುತ್ತಿದೆ. ಎಲ್ಲ ಒತ್ತುವರಿ ತೆರವುಗೊಳಿಸಿ ಕಾಮಗಾರಿ ನಡೆಸಬೇಕು. ಜತೆಗೆ ಮೇದೇಹಳ್ಳಿ ರಸ್ತೆಯಲ್ಲಿಯ ಕಾಮಗಾರಿಯ ಲೋಪ ಸರಿಪಡಿಸಬೇಕು. ಸೆಪ್ಟೆಂಬರ್
ಅಂತ್ಯಕ್ಕೆ ಎಲ್ಲವೂ ಪೂರ್ಣವಾಗಿ ವಿದ್ಯುತ್ ದೀಪಗಳು ಬೆಳಗಬೇಕು’ ಎಂದರು.
‘ಹಣ ಪಾವತಿಸಿದ್ದರೂ ರಸ್ತೆಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಏಕೆ ವಿಳಂಬ ಎಂದು ಬೆಸ್ಕಾಂ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಮಾಡುವ ಕೆಲಸಕ್ಕೆ ಜನರಿಂದ ನಾನು ಮಾತು ಹೇಳಬೇಕಿದೆ. ತಡಮಾಡದೇ ರಸ್ತೆ ಕಾಮಗಾರಿ ಸ್ಥಳದಲ್ಲಿಯೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ’ ಎಂದು ಹೇಳಿದರು.
‘ಸಂಚಾರ ಠಾಣೆ ಪೊಲೀಸರೊಂದಿಗೆ ಸಭೆ ನಡೆಸಿ ನಗರ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಬಸ್ ಸಂಚಾರದ ವೇಳಾಪಟ್ಟಿ ಸೇರಿದಂತೆ ಅಗತ್ಯ ಸಿದ್ಧತೆ ನಡೆಸಿ ಜನತೆಗೆ ಅನುಕೂಲ ಮಾಡಿ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ವ್ಯವಸ್ಥಾಪಕರಿಗೆ ತಿಳಿಸಿದರು.
ಆರೋಗ್ಯ ಇಲಾಖೆಯ ವಾಹನಗಳ ದುರಸ್ತಿ ಕಾರ್ಯವನ್ನು ‘ಶಿರಾ’ದಲ್ಲಿ ಏಕೆ ಮಾಡಿಸುತ್ತಿದ್ದೀರಾ. ಈ ಊರಿನಲ್ಲಿ ಯಾರು ಮೆಕ್ಯಾನಿಕ್ ಇಲ್ಲವೇ? ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಿರೀಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ.ಕೆ.ನಂದಿನಿದೇವಿ, ತಾಲೂಕು ಪಂಚಾಯತಿ ಇಒ ಹನುಮಂತಪ್ಪ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.
ಗೈರಾದವರ ಮೇಲೆ ಕ್ರಮ ವಹಿಸಿ
ತಾಲ್ಲೂಕು ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆಗೆ ಗೈರಾಗಿದ್ದ ಅಧಿಕಾರಿಗಳನ್ನು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡರು.
ಸಭೆ ಆರಂಭವಾಗುತ್ತಿದ್ದಂತೆ ಹಾಜರಾತಿ ಪುಸ್ತಕ ತರಿಸಿ ಅಧಿಕಾರಿಗಳಿಗೆ ಕಾರಣ ಕೇಳಿದರು. ಬಹುತೇಕರು ಚಳ್ಳಕೆರೆ ಶಾಸಕರು ಕರೆದಿದ್ದ ಸಭೆಗೆ ತೆರಳಿದ ಕಾರಣ ನೀಡಿದರು.
ಆಹಾರ ಇಲಾಖೆ ಅಧಿಕಾರಿ ಮೈಲಾರಪ್ಪ ಎಂಬುವವರನ್ನು ಅಮಾನತುಗೊಳಿಸಿ ಇತರ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಸೂಚಿಸಿದರು.
ದೂರು ದಾಖಲಿಸುತ್ತೇನೆ
ನಗರದ ಒನಕೆ ಓಬವ್ವ ಕ್ರೀಡಾಂಗಣದ ಈಜುಗೊಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿ ಪುನಃ ಕೆಲಸಕ್ಕೆ ತೆಗೆದುಕೊಂಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮಿ ಬಾಯಿ ವರ್ತನೆಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
‘ಮಹಿಳಾ ಸಿಬ್ಬಂದಿ ಮಗಳನ್ನು ನಿಮ್ಮ ಮನೆಗೆಲಸಕ್ಕೆ ಕಳಿಸಲಿಲ್ಲ ಎಂಬ ಕಾರಣ ಕೆಲಸದಿಂದ ವಜಾಗೊಳಿಸುತ್ತೀರಾ. ನಿಮ್ಮ ಮೇಲೆ ಪೋಕ್ಸೊ ಪ್ರಕರಣ ದಾಖಲಿಸುತ್ತೇನೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.