ಹಿರಿಯೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿಗೆ ಇದ್ದ 16,570 ಹೆಕ್ಟೇರ್ ಕಡಲೆ ಬಿತ್ತನೆ ಗುರಿ ಮಳೆಯಾಗದ ಕಾರಣ 11,638 ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದೆ.
ಹವಾಮಾನದಲ್ಲಿನ ಏರುಪೇರಿನಿಂದ ನಿರೀಕ್ಷಿತ ಇಳುವರಿ ಬರುವುದಿಲ್ಲ ಎಂಬ ಚಿಂತೆ ರೈತರನ್ನು ಕಾಡತೊಡಗಿದೆ.
ಐಮಂಗಲ ಹೋಬಳಿಯಲ್ಲಿ 8550 ಹೆಕ್ಟೇರ್, ಕಸಬಾ ಹೋಬಳಿಯಲ್ಲಿ 2543, ಜೆ.ಜಿ. ಹಳ್ಳಿ ಹೋಬಳಿಯಲ್ಲಿ 495 ಹಾಗೂ ಧರ್ಮಪುರ ಹೋಬಳಿಯಲ್ಲಿ 50 ಹೆಕ್ಟೇರ್ ಕಡಲೆ ಬಿತ್ತನೆ ಆಗಿದೆ. ಜೆಜಿ–11 ತಳಿಯ 4383 ಕ್ವಿಂಟಲ್, ಜಾಕಿ–9218 ತಳಿಯ 3864 ಕ್ವಿಂಟಲ್ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ಪೂರೈಸಲಾಗಿತ್ತು. ಅಕ್ಟೋಬರ್–ನವೆಂಬರ್ ತಿಂಗಳ ವಾಡಿಕೆ ಮಳೆ 264.9 ಮಿ.ಮೀ. ಇತ್ತು. ಆದರೆ 210.75 ಮಿ.ಮೀ. ಮಾತ್ರ ಮಳೆಯಾಗಿದೆ. 35–40 ದಿನಗಳಿಂದ ಶುಷ್ಕವಾತಾವರಣ ಇರುವ ಕಾರಣ ಈ ಬಾರಿ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿ ಉಷಾರಾಣಿ ಮಾಹಿತಿ ನೀಡಿದರು.
ಸಕಾಲದಲ್ಲಿ ಮಳೆಯಾದರೆ ಮೇಲೆ ತಿಳಿಸಿರುವ ಎರಡೂ ತಳಿಯ ಬೀಜ ಬಿತ್ತನೆ ಮಾಡಿದಾಗ ಹೆಕ್ಟೇರ್ ಗೆ ಕನಿಷ್ಠ 6–8 ಕ್ವಿಂಟಲ್ ಇಳುವರಿ ಬರಬೇಕು. ಆದರೆ ಈ ಬಾರಿ 2.50 ಕ್ವಿಂಟಲ್ ಬರುವ ಸಾಧ್ಯತೆ ಇದೆ. ಡಿ. 30 ರಿಂದ ಶೀತದ ವಾತಾವರಣವಿದ್ದು, ಇದೇ ವಾತಾವರಣ 25–30 ದಿನದ ಹಿಂದಿದ್ದರೆ ಉತ್ತಮ ಇಳುವರಿ ಬರುವ ಸಾಧ್ಯತೆ ಇತ್ತು. ಬಿಸಿಲು ಹೆಚ್ಚಿದ ಕಾರಣಕ್ಕೆ ಬಹಳಷ್ಟು ಕಡೆ ಬೆಳೆ ಒಣಗಿದೆ. ಒಂದು ಕಡಲೆ ಬುಡ್ಡಿನಲ್ಲಿ (ಕಾಯಿ) ಕಾಳು ದಪ್ಪಗೆ ಬಲಿಯುವ ಬದಲು ಸೊರಗಿದೆ. ಬಹಳಷ್ಟು ಬುಡ್ಡುಗಳಲ್ಲಿ ಒಂದು ಕಾಳು ಮಾತ್ರ ಇರುವ ಕಾರಣ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ಮುಂಗಾರು ಮಳೆ ಸಕಾಲದಲ್ಲಿ ಆಗದ ಕಾರಣ ಉಳುಮೆ ಮಾಡಿದ್ದ ಭೂಮಿಯನ್ನು ಖಾಲಿ ಬಿಟ್ಟಿದ್ದ ರೈತರು ಹಿಂಗಾರು ಮಳೆ ಬಂದಿದ್ದರಿಂದ ಕಡಲೆ ಬಿತ್ತನೆ ಮಾಡಿದ್ದರು. ವಿಚಿತ್ರವೆಂದರೆ ಹಿಂಗಾರು ಮಳೆ ತಾಲ್ಲೂಕಿನ ಎಲ್ಲ ಭಾಗದಲ್ಲೂ ಒಂದೇ ರೀತಿ ಬೀಳದ ಕಾರಣ ಕಡಲೆ ಬೆಳೆಯಲ್ಲೂ ವ್ಯತ್ಯಾಸವಾಗಿದೆ.
‘ಹಿಂದಿನ ವರ್ಷ ಹಿಂಗಾರು ಹಂಗಾಮಿಗೆ ಕುಸುಬೆ ಹಾಕಿದ್ದೆವು. ಕುಸುಬೆ ಬೆಲೆ ಕೈಕೊಟ್ಟ ಕಾರಣ ಈ ಬಾರಿ ಕಡಲೆ ಬಿತ್ತನೆ ಮಾಡಿದ್ದೇವೆ. ಭೂಮಿಯಲ್ಲಿ ಉತ್ತಮ ತೇವಾಂಶವಿದ್ದರೆ ಬೆಳೆ ಮೂರು ತಿಂಗಳಿಗೇ ಬರುತ್ತದೆ. ಪ್ರತಿ ಎಕರೆಗೆ 30 ಕೆ.ಜಿ. ಬೀಜ ಬಿತ್ತನೆ ಮಾಡಿದ್ದು, 50 ಕೆ.ಜಿ.ಯ ಒಂದು ಪಾಕೆಟ್ ರಸಗೊಬ್ಬರ ಹಾಕಿದ್ದೇನೆ. ಗೊಬ್ಬರ, ಔಷಧ ಖರ್ಚು ಎಕರೆಗೆ ₹ 3,500 ದಾಟುತ್ತದೆ. ಸರ್ಕಾರ ಈಗಲೇ ಬೆಂಬಲ ಬೆಲೆ ಘೋಷಿಸಬೇಕು. ಶೇ 50 ಕ್ಕಿಂತ ಕಡಿಮೆ ಇಳುವರಿ ಬರುವ ರೈತರಿಗೆ ಪರಿಹಾರ ನೀಡಬೇಕು’ ಎಂದು ಐಮಂಗಲ ಗ್ರಾಮದ ರೈತ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
*
ದುಬಾರಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಮೂರು ಬಾರಿ ಔಷಧ ಸಿಂಪರಣೆ ಸೇರಿ ಕೃಷಿ ಇಲಾಖೆ ತಿಳಿಸಿದ್ದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ಕಡಲೆ ಇಳುವರಿ ಕುಂಠಿತವಾಗಿದೆ.
–ಬಿ.ರಾಜಶೇಖರ್, ರೈತ, ಗನ್ನಾಯಕನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.