ADVERTISEMENT

ಚಿತ್ರದುರ್ಗ | ನೂರು ಶಾಲೆಗೆ 10,000 ಪುಸ್ತಕ ವಿತರಣೆ: ನಿಡಸಾಲೆ ಪುಟ್ಟಸ್ವಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 16:17 IST
Last Updated 4 ಅಕ್ಟೋಬರ್ 2024, 16:17 IST
ನಿಡಸಾಲೆ ಪುಟ್ಟಸ್ವಾಮಯ್ಯ
ನಿಡಸಾಲೆ ಪುಟ್ಟಸ್ವಾಮಯ್ಯ   

ಚಿತ್ರದುರ್ಗ: ‘ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತಲಾ 100 ಪುಸ್ತಕಗಳಂತೆ 10,000 ಪುಸ್ತಕಗಳನ್ನು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ವಿತರಿಸಲಾಗುತ್ತಿದೆ. ಆರು ತಾಲ್ಲೂಕಿನ ಶಾಲೆಗಳ ಪಟ್ಟಿ ಸಿದ್ಧವಾಗಿದೆ’ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ತಿಳಿಸಿದರು.

‘ಮಕ್ಕಳ ಪುಸ್ತಕ ಪ್ರೀತಿ ಬೆಳೆಸುವ ಸಲುವಾಗಿ ಕಳೆದ 8 ವರ್ಷಗಳಿಂದ ಪುಸ್ತಕ ವಿತರಣೆ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ, ಧಾರವಾಡ, ಚಾಮರಾಜನಗರ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುಸ್ತಕ ನೀಡಲಾಗಿದೆ. ಚಿತ್ರದುರ್ಗ 9ನೇ ಜಿಲ್ಲೆಯಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಮತ್ತು ಚಿನ್ಮೂಲಾದ್ರಿ ರೋಟರಿ ಕ್ಲಬ್‌ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಅ. 5ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿ ಸಿ.ಬಿ.ಶೈಲಾ ಜಯಕುಮಾರ್‌ ಪುಸ್ತಕ ಅನಾವರಣಗೊಳಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಕ್ಲಬ್‌ ಅಧ್ಯಕ್ಷ ಮಂಜುನಾಥ ಭಾಗವತ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರು ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್‌ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ್‌, ಸಂಘದ ಚಂದ್ರಕೀರ್ತಿ, ವಿಜಯ್‌, ಪ್ರವೀಣ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.