ಜಿ.ಬಿ.ನಾಗರಾಜ್
ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಕಲ್ಲಿನ ಕೋಟೆ. ಐತಿಹಾಸಿಕ ಹಿನ್ನೆಲೆಯ ಈ ಕೋಟೆ ಚಿತ್ರದುರ್ಗದ ಗತವೈಭವದ ಪಳಯುಳಿಕೆಯ ಸಾಕ್ಷಿ ಎಂಬಂತೆ ಗೋಚರವಾಗುತ್ತಿದೆ. ಏಳು ಸುತ್ತಿನ ಕೋಟೆಯ ಆರಂಭದ ಸುತ್ತುಗಳನ್ನು ನಗರ ಅಪೋಷನಕ್ಕೆ ಪಡೆದರೂ ಇತಿಹಾಸವನ್ನು ಸಾರುತ್ತಿದೆ. ದೇಶ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರವಾಸೋದ್ಯಮಕ್ಕೆ ಕೋಟೆ ಇಂಬು ನೀಡಿದೆ.
ಚಿತ್ರದುರ್ಗ ಆಳ್ವಿಕೆ ಮಾಡಿದ ಪಾಳೆಗಾರರು ನಿರ್ಮಿಸಿದ ಕೋಟೆ ‘ನಾಗರಹಾವು’ ಚಿತ್ರದ ಮೂಲಕ ಜನರ ಮನಸಿನಲ್ಲಿ ಅಚ್ಚೊತ್ತಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಲ್ಲಿನ ಕೋಟೆಯನ್ನು ಅದ್ಭುತವಾಗಿ ಚಿತ್ರಿಸಿದ ಬಳಿಕ ಕೋಟೆ ವೀಕ್ಷಿಸುವ ಹಂಬಲ ಜನರಲ್ಲಿ ಮೂಡಿದೆ. ಸ್ಥಳೀಯರು ಹೆಮ್ಮೆ ಪಡುವಂತಹ ಹಲವು ಸಂಗತಿಗಳು ಕೋಟೆಯಲ್ಲಿವೆ. ಇದರ ರಚನೆ, ದೇಗುಲ, ನೀರಿನ ವ್ಯವಸ್ಥೆ ಅಧ್ಯಯನಕ್ಕೂ ಪೂರಕವಾಗಿದೆ. ಈ ಕೋಟೆಯನ್ನು ಕಣ್ತುಂಬಿಕೊಳ್ಳಲು ಶಾಲ ಮಕ್ಕಳು ಸೇರಿ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಿದ್ದಾರೆ.
ಕ್ರಿ.ಪೂ.3ನೇ ಶತಮಾನದ ಇತಿಹಾಸ:
ಭೌಗೋಳಿಕವಾಗಿ ಸುರಕ್ಷಿತ ತಾಣವೆನಿಸಿದ ಚಿತ್ರದುರ್ಗ ಹಲವು ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಯ ಆಡಳಿತಕ್ಕೆ ಸೇರಿದ್ದ ಚಿತ್ರದುರ್ಗ, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿತ್ತು. ಈ ಊರಿಗೆ ಮುಕುಟಪ್ರಾಯವಾಗಿರುವ ಏಳು ಸುತ್ತಿನ ಕೋಟೆ ಹೆಬ್ಬಂಡೆಗಳಿಂದ ನಿರ್ಮಾಣವಾಗಿದೆ. ಶೌರ್ಯ, ಪರಾಕ್ರಮಕ್ಕೆ ಹೆಸರಾಗಿರುವ ಕೋಟೆಯ ಇತಿಹಾಸ 11ನೇ ಶತಮಾನದಿಂದ ಆರಂಭವಾಗುತ್ತದೆ. ಪಾಳೆಗಾರರು ಅವನತಿಹೊಂದಿ ಎರಡು ಶತಮಾನ ಕಳೆದರೂ ಕೋಟೆ ಮಾತ್ರ ಸುಸ್ಥಿತಿಯಲ್ಲಿದೆ. ಶತ್ರುಗಳಿಗೆ ಉಕ್ಕಿನ ಕೋಟೆಯಾಗಿದ್ದ ಇದು ನಿಸರ್ಗದ ಸವಾಲುಗಳನ್ನು ಮೆಟ್ಟಿನಿಂತಿದೆ.
ಕಾಮಗೇತಿ ವಂಶದ ಅರಸರ ಕಾಲದಲ್ಲಿ ಚಿತ್ರದುರ್ಗ ಶೌರ್ಯಕ್ಕೆ ಹೆಸರು ಪಡೆಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಪಾಳೆಗಾರರು ಕಾಲಾನಂತರ ಸ್ವತಂತ್ರ ರಾಜ್ಯ ಕಟ್ಟಿದರು. ಆಗಲೇ ಏಳು ಸುತ್ತಿನ ಕೋಟೆ ಸ್ಪಷ್ಟ ರೂಪು ಪಡೆಯಿತು. ನಾಯಕ ಅರಸರ ಕೊಡುಗೆಯೇ ಫಲವಾಗಿ ಕೋಟೆ ಇಂದಿಗೂ ಕಣ್ಮನ ಸೆಳೆಯುತ್ತಿದೆ. ಏಳು ಶಿಖರಗಳನ್ನು ಸೇರಿಸಿ ಸಾಮ್ರಾಜ್ಯ ರಕ್ಷಣೆಗೆ ನಿರ್ಮಿಸಿದ ಕೋಟೆ ಅಭೇದ್ಯವಾಗಿದೆ. ಬೃಹತ್ತಾದ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಪೇರಿಸಿಟ್ಟು ಕಟ್ಟಿದ ಗೋಡೆಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಏಳು ಸುತ್ತಿನ ಕೋಟೆಯ ಆರಂಭದ ಕೆಲ ಸುತ್ತುಗಳು ಕಾಲಗರ್ಭದಲ್ಲಿ ಹೂತು ಹೋಗಿವೆ.
ಪ್ರಮುಖ ಪ್ರವಾಸಿ ತಾಣ:
ರಾಜ್ಯದ 319 ಪ್ರವಾಸಿ ತಾಣಗಳಲ್ಲಿ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಪ್ರಮುಖ. ಚಂದ್ರವಳ್ಳಿ, ಜೋಗಿಮಟ್ಟಿ, ವಿ.ವಿ.ಸಾಗರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲ, ಹಾಲುರಾಮೇಶ್ವರ ಹಾಗೂ ಹೊಳಲ್ಕೆರೆಯ ಗಣೇಶ ದೇವಸ್ಥಾನಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವರ್ಷಕ್ಕೆ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಇವರಲ್ಲಿ ಬಹುತೇಕರ ಮೊದಲ ಆಯ್ಕೆ ಏಳು ಸುತ್ತಿನ ಕೋಟೆ.
ಏಳು ಸುತ್ತಿನ ಕೋಟೆಗೆ ಗಿರಿದುರ್ಗ, ಜಲದುರ್ಗದ ಲಕ್ಷಣಗಳಿವೆ. 38 ದಿಡ್ಡಿ ಬಾಗಿಲು, 35 ಕಳ್ಳ ಕಿಂಡಿ, 19 ಅಗಸೆ ಬಾಗಿಲು, 4 ಗುಪ್ತದ್ವಾರಗಳಿದ್ದವು. ಪ್ರಕೃತಿದತ್ತವಾದ ಶಿಖರಗಳನ್ನು ಬಳಸಿಕೊಂಡು ಕೋಟೆಯನ್ನು ವಿನ್ಯಾಸ ಮಾಡಲಾಗಿದೆ. ಬೃಹತ್ ಬಂಡೆಗಳ ಶಿಖರಗಳಲ್ಲಿ ಬುರುಜು, ಬತೇರಿಗಳಿವೆ. ಹೆಬ್ಬಾಗಿಲು, ದಿಡ್ಡಿ ಬಾಗಿಲು, ಕಳ್ಳಕಿಂಡಿ, ವೀಕ್ಷಣಾ ಗೋಪುರ, ಫಿರಂಗಿ ವೇದಿಕೆ, ಬಂದೂಕು ಹಾರಿಸಲು ನಿರ್ಮಿಸಿದ ಕಿಂಡಿಗಳು ಗತಕಾಲದ ವೈಭವವನ್ನು ಸಾರಿ ಹೇಳುತ್ತಿವೆ.
ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾದ ಬಾಗಿಲೇ ಕೋಟೆಯ ಪ್ರವೇಶದ್ವಾರ. ಏಳು ಹೆಡೆಯ ಸರ್ಪ, ಗಂಡಭೇರುಂಡದ ಶಿಲ್ಪಗಳಿವೆ. ಕಾಮನಬಾವಿ ಸಮೀಪದಲ್ಲೇ ಬನಶಂಕರಿ ದೇಗುಲವಿದೆ. ಅನತಿ ದೂರದಲ್ಲಿ ಮದ್ದುಬೀಸುವ ಕಲ್ಲು, ಪಕ್ಕದಲ್ಲಿ ಅಗಳು ಕಾಣುತ್ತದೆ. ಚಿಕ್ಕ ಅರಮನೆಯ ಬಾಗಿಲು ಬಳಿ ಕಲ್ಲಿನಲ್ಲಿ ಕೊರೆದ ಎರಡು ಕೊಳಗಳಿವೆ. ಇವನ್ನು ಎಣ್ಣೆ ಕೊಳ ಎಂದು ಕರೆಯುವುದುಂಟು. ಬೊಂಬೆ ಛಾವಡಿ ಮಂಟಪ, ಫಿರಂಗಿ ಕೋಟೆ ಕಣ್ಮನ ಸೆಳೆಯುತ್ತವೆ.
ಟೀಕಿನ ಬಾಗಿಲು ಕೋಟೆಯ ಅತ್ಯುತ್ತಮ ರಚನೆಯಲ್ಲೊಂದು. ಮತ್ತಿ ತಿಮ್ಮಣ್ಣನಾಯಕ 15ನೇ ಶತಮಾನದಲ್ಲಿ ಕಟ್ಟಿಸಿದ ಏಕನಾಥೇಶ್ವರಿ ದೇವಾಲಯವಿದೆ. ಇದಕ್ಕೆ ಕೋಟೆನಾಡಿನ ಅಧಿದೇವತೆ ಎಂತಲೂ ಪ್ರತೀತಿ ಇದೆ. ದೇಗುಲದ ಮುಂಭಾಗದಲ್ಲಿಯೇ ಎತ್ತರವಾದ ದೀಪಕಂಬ ಹಾಗೂ ಉಯ್ಯಾಲೆ ಕಂಬಗಳಿವೆ. ಬಿಚ್ಚುಗಟ್ಟಿ ಭರಮಣ್ಣನಾಯಕ ನಿರ್ಮಿಸಿದ ಮರುಘಾ ಮಠದ ಮೂಲವಾದ ಬೃಹನ್ಮಠವಿದೆ. ಇದು 300 ಅಂಕಣಗಳಿಂದ ಕೂಡಿದ್ದು, ಸಮೀಪದಲ್ಲೇ ಸಂಪಿಗೆ ಸಿದ್ದೇಶ್ವರ ಗುಹಾಂತರ ದೇಗುಲವಿದೆ. ಬೌದ್ಧ ಮಂದಿರವಾಗಿದ್ದ ಹಿಡಿಂಬೇಶ್ವರ ದೇವಸ್ಥಾನವೂ ಮೇಲುದುರ್ಗದಲ್ಲಿದೆ.
ಕೋಟೆಯ ಪ್ರಮುಖ ತಾಣಗಳು * ಕಾಮನಬಾವಿ * ಬನಶಂಕರಿ ದೇವಾಲಯ * ಮದ್ದು ಬೀಸುವ ಕಲ್ಲು * ಎಣ್ಣೆ ಕೊಳ * ಬೊಂಬೆ ಚಾವಡಿ ಮಂಟಪ * ಫಿರಂಗಿ ಕೋಟೆ * ತುಪ್ಪದ ಕೊಳ * ಹಿಡಿಂಬಗಿರಿ * ಝಂಡಾ ಬತೇರಿ * ಕಹಳೆ ಬತೇರಿ * ಲಾಲ್ ಬತೇರಿ * ನೆಲ್ಲಿಕಾಯಿ ಬತೇರಿ * ಗಾಳಿ ಮಂಟಪ * ಉಯ್ಯಾಲ ಕಂಬ * ಮುರುಘಾ ಮಠ * ಟೀಕಿನ ಬಾಗಿಲು * ಏಕನಾಥೇಶ್ವರಿ ದೇವಾಲಯ * ಹಿಡಿಂಬೇಶ್ವರ ದೇಗುಲ * ಒನಕೆ ಓಬವ್ವ ಕಿಂಡಿ * ಗೋಪಾಲಸ್ವಾಮಿ ಹೊಂಡ * ಅಕ್ಕ–ತಂಗಿಯರ ಹೊಂಡ * ತಣ್ಣೀರು ದೋಣಿ * ಒನಕೆ ಓಬವ್ವನ ಕಿಂಡಿ * ಸಂಪಿಗೆ ಸಿದ್ದೇಶ್ವರ ದೇಗುಲ * ಅರಮನೆ ಆವರಣ * ಟಂಕಸಾಲೆ * ಒಂಟಿಕಂಬದ ಬಸವಣ್ಣ
ಓಬವ್ವನ ಕಿಂಡಿ ಆಕರ್ಷಣೆ ಬೆಟ್ಟದ ತುದಿಯಲ್ಲಿ ತುಪ್ಪದ ಕೊಳ ಮತ್ತೊಂದು ಬದಿಗೆ ಗೋಪಾಲಸ್ವಾಮಿ ಹೊಂಡವಿದೆ. ಟಂಕಸಾಲೆ ದಾಟಿದರೆ ಅಕ್ಕ–ತಂಗಿಯರ ಹೊಂಡ ಗೋಚರಿಸುತ್ತದೆ. ಸದಾಕಾಲ ನೀರು ಹಿಡಿದಿಡುವ ಜಲಮೂಲಗಳು ಕೋಟೆಯ ಒಳಭಾಗದಲ್ಲಿವೆ. ತಣ್ಣೀರು ದೋಣಿಯಿಂದ ಕೆಳಗೆ ಇಳಿದರೆ ಒನಕೆ ಓಬವ್ವನ ಕಿಂಡಿ ಸಿಗುತ್ತದೆ. ಕರುವರ್ತೀಶ್ವರ ದೇವಸ್ಥಾನ ಕೋಟೆಯ ಸಮೀಪದಲ್ಲೇ ಇದೆ. ಪ್ರಾಚ್ಯವಸ್ತು ಸಂಗ್ರಹಾಲಯ ಕೂಡ ಇತಿಹಾಸದ ವೈಭವ ಸಾರುತ್ತದೆ. ಪಾಳೆಗಾರರ ಮನೆದೇವತೆ ರಾಜಾ ಉತ್ಸವಾಂಬ ದೇವಸ್ಥಾನ ಕೋಟೆಗೆ ಸಾಗುವ ಮಾರ್ಗದಲ್ಲೇ ಇದೆ. ತಿಮ್ಮಣ್ಣನಾಯಕ ಕೆರೆಯ ಸಮೀಪ ಲಾಲ್ ಬತೇರಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.