ADVERTISEMENT

ನಾಯಕನಹಟ್ಟಿ | ಒಂದೇ ಸೂರಿನಡಿ ಮೂರು ತರಗತಿ

ಮಾದಯ್ಯನಹಟ್ಟಿ ಸರ್ಕಾರಿ ಶಾಲೆ ದುಃಸ್ಥಿತಿ; 55 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿ

ವಿ.ಧನಂಜಯ
Published 3 ಜೂನ್ 2024, 7:51 IST
Last Updated 3 ಜೂನ್ 2024, 7:51 IST

ನಾಯಕನಹಟ್ಟಿ ಪಟ್ಟಣದ ಮಾದಯ್ಯನಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರನೋಟ

ನಾಯಕನಹಟ್ಟಿ ಪಟ್ಟಣದ ಮಾದಯ್ಯನಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರನೋಟ

ನಾಯಕನಹಟ್ಟಿ: ಹಳೆಯ ಗೋಡೆಗಳು, ಒಡೆದುಹೋದ ಹೆಂಚುಗಳು, ಬಿಸಿಲು, ಮಳೆ ನೀರು ಸರಾಗವಾಗಿ ಒಳಪ್ರವೇಶಿಸಿ ಪಾಠ– ಪ್ರವಚನಕ್ಕೆ ಅಡ್ಡಿಯಾಗುವುದು, ಇನ್ನೇನು ಕುಸಿದು ಬೀಳಲು ಕಾಯುತ್ತಿರುವ ಚಾವಣಿ...

ADVERTISEMENT

ಇದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿ ಕಾಣಸಿಗುವ ಸರ್ಕಾರಿ ಶಾಲೆಯ ಚಿತ್ರಣ.

ಪುಟ್ಟ ಗ್ರಾಮದ ಶಾಲೆಯಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಶಿಕ್ಷಕರಿದ್ದಾರೆ. ಆದರೆ, ಅಧ್ಯಯನಕ್ಕೆ ಸುಸಜ್ಜಿತವಾದ ಕೊಠಡಿಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ.

ಮಾದಯ್ಯನಹಟ್ಟಿ ಗ್ರಾಮದಲ್ಲಿ ಅಂದಾಜು 100 ಮನೆಗಳಿದ್ದು, 800ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 1962ರಲ್ಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರ ಶಾಲೆಯನ್ನು ತೆರೆಯಿತು. ಅಂದು ಗ್ರಾಮದ ಹೃದಯ ಭಾಗದಲ್ಲಿ ಎರಡು ಕೊಠಡಿಗಳಲ್ಲಿ ಕೇವಲ 6–8 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆಯು ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ.

ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪೂರೈಸಿ ಸರ್ಕಾರದ ಹಲವು ಹುದೆಗಳನ್ನು ಪಡೆದಿದ್ದಾರೆ. ಇಂದಿಗೆ 62 ವರ್ಷಗಳ ಇತಿಹಾಸ ಇರುವ ಶಾಲೆಗೆ ಕಳೆದ ಎರಡು ವರ್ಷಗಳಿಂದ ಹಲವು ಸಂಕಷ್ಟಗಳು ಎದುರಾಗಿದೆ. ದಿನನಿತ್ಯದ ಪಾಠ–ಪ್ರವಚನಕ್ಕೆ ಕೊಠಡಿಗಳ ಸಮಸ್ಯೆ ಎದುರಾಗಿದೆ.

1962ರಲ್ಲಿ ಕಟ್ಟಿದ ಒಂದು ಕೊಠಡಿ ಹಳೆಯದಾಗಿದ್ದು, ಚಾವಣಿ ಕುಸಿದು ಹೆಂಚುಗಳು ಬಿದ್ದಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಗಾಳಿ– ಮಳೆ ಬಂತೆಂದರೆ ಕೊಠಡಿಯಲ್ಲಿರುವ ಸರ್ವ ಶಿಕ್ಷಣ ಅಭಿಯಾನದ ಚಾರ್ಟ್‌ಗಳು, ಕಲಿಕಾ ಉಪಕರಣಗಳು ಕೆಳಗೆ ಬೀಳುತ್ತವೆ. ವಿದ್ಯಾರ್ಥಿಗಳು ನಿರ್ಭಯವಾಗಿ ಕೂತು ಪಾಠ ಕೇಳದಷ್ಟು ಶಿಥಿಲಾವಸ್ಥೆಗೆ ತಲುಪಿದ ಕೊಠಡಿಯು ಯಾವುದೇ ಕ್ಷಣದಲ್ಲಿ ಬೀಳಲು ಕಾಯುತ್ತಿದೆ. ಸಮಸ್ಯೆಯ ತೀವ್ರತೆ ಅರಿತ ಶಿಕ್ಷಕರಿಗೆ, ವಿದ್ಯಾರ್ಥಿಗಳು ಈ ಕೊಠಡಿಯತ್ತ ಸುಳಿಯದಂತೆ ನಿತ್ಯವೂ ಕಾಯುವುದೇ ಕಾಯಕವಾಗಿದೆ. ಉಳಿದ ಮತ್ತೊಂದು ಕೊಠಡಿಯೇ ಸದ್ಯದ ಆಸರೆ.

ಪರಿಸ್ಥಿತಿ ಗಂಭೀರವಾಗಿರುವ ಕಾರಣಕ್ಕೆ ಪಾಲಕರು ಮಕ್ಕಳನ್ನು ಸಮೀಪದ ನಾಯಕನಹಟ್ಟಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ನೂರಾರು ಸಮಸ್ಯೆಗಳ ಮಧ್ಯೆ ಸರ್ಕಾರಿ ಶಾಲೆಯ ಮಕ್ಕಳು ಉನ್ನತ ಸಾಧನೆ ತೋರುತ್ತಿರುವ ಸಂಗತಿಗಳು ಕಣ್ಣಮುಂದಿವೆ. ಆದರೆ ಅಂತಹ ಸರ್ಕಾರಿ ಶಾಲೆಯ ಮಕ್ಕಳಿಗೆ ನೆಮ್ಮದಿಯಿಂದ ಕೂತು ಪಾಠ ಕೇಳಲು ಸೂಕ್ತ ಕೊಠಡಿಯ ವ್ಯವಸ್ಥೆಯಿಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎದಂದು ಗ್ರಾಮಸ್ಥರು ದೂರಿದ್ದಾರೆ.

ಅಡುಗೆ ಕೋಣೆಯೇ ತರಗತಿ

ಈ ಶಾಲೆಯಲ್ಲಿ ಓದುತ್ತಿರುವ 55 ವಿದ್ಯಾರ್ಥಿಗಳಿಗೆ ಸುಸಜ್ಜಿತವಾಗಿ ಇರುವುದು ಕೇವಲ ಒಂದೇ ಕೊಠಡಿ. ಅದರಲ್ಲೇ ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳು ಜಂಟಿಯಾಗಿ ಕೂತು ಪಾಠ ಕೇಳಬೇಕು.

ಇನ್ನುಳಿದ ಮೂರು, ನಾಲ್ಕು ಮತ್ತು ಐದನೇ ತರಗತಿಯ ಮಕ್ಕಳು ಅಡುಗೆ ಕೊಣೆಯಲ್ಲೋ ಅಥವಾ ಶಾಲೆಯ ಆವರಣದಲ್ಲೋ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಬಿಗಡಾಯಿಸುತ್ತದೆ. ಒಂದು ಸಿಮೆಂಟ್ ಶೀಟಿನ ಕೊಠಡಿಯಲ್ಲಿ ಸ್ವಲ್ಪ ವಿದ್ಯಾರ್ಥಿಗಳು, ಮತ್ತು ಅಡುಗೆ ಕೋಣೆಯ ನೆಲದ ಮೇಲ ಇನ್ನುಳಿದ ವಿದ್ಯಾರ್ಥಿಗಳು ಕೂರಬೇಕಾದು ದುಃಸ್ಥಿತಿ ಇದೆ.

ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಹೋರಾಟ ನಡೆಸಲಾಗಿದೆ. ಶಿಥಿಲಗೊಂಡ ಕೊಠಡಿಯ ಜಾಗದಲ್ಲಿ ಹೊಸ ಕೊಠಡಿ ಕಟ್ಟಿಸಿಕೊಡಲು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಮನವಿಪತ್ರ ಸಲ್ಲಿಸಿದರೂ ನಿರ್ಲಕ್ಷಿಸಲಾಗುತ್ತಿದೆ

-ಟಿ.ಬಸಣ್ಣ, ಮಾದಯ್ಯನಹಟ್ಟಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.