ಚಳ್ಳಕೆರೆ: ಆಯುಧ ಪೂಜೆ ಮತ್ತು ವಿಜಯ ದಶಮಿ ಪ್ರಯುಕ್ತ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮದ ಆರಾಧ್ಯ ದೇವರಾದ ಯಲ್ಲಮ್ಮ, ದ್ಯಾಮಲಾಂಬಾ ಮತ್ತು ನರಸಿಂಹಸ್ವಾಮಿ, ಮೈಲಾರಲಿಂಗೇಶ್ವರ ದೇವರ ಹೊಳೆ ಪೂಜೆ ನೆರವೇರಿತು.
ಗ್ರಾಮದ ಹೊರವಲಯದಲ್ಲಿ ಪೂಜಾರಿಗಳು ಮುಖಂಡರ ಸಮ್ಮುಖದಲ್ಲಿ ಬನ್ನಿ ಮುಡಿದು, ಅಂಬುಛೇದನ ನಡೆಸಿದರು.
ವಿವಿಧ ಕಲಾ ತಂಡಗಳೊಂದಿಗೆ ದೇವರ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಿತು.
ಗಮನ ಸೆಳೆದ ಗೊರವರ ಕುಣಿತ:
ದಸರಾ ಅಂಗವಾಗಿ ಭಾನುವಾರ ದ್ಯಾಮಲಾಂಬಾ ದೇವಸ್ಥಾನದ ಆವರಣದಲ್ಲಿ ಕೆಂಡಾರ್ಚನೆ ನಡೆಯಿತು. ಈ ವೇಳೆ ನಡೆದ ಗೊರವರ ಕುಣಿತ ಗಮನ ಸೆಳೆಯಿತು.
ಹಣೆಗೆ ಭಂಡಾರ ಧರಿಸಿ ಮಡಿಯಿಂದ ಬಂದ ಗೊರವರ ವೇಷ ಧರಿಸಿದ ನೂರಾರು ಭಕ್ತರು, ಕೈಯಲ್ಲಿ ಡಮರುಗ ಹಿಡಿದು ‘ಏಳುಕೋಟಿ ಮೈಲಾರ ಲಿಂಗ ಛಾಂಗಲೋ’ ಎಂದು ಕೂಗುತ್ತ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಬಂದರು.
ನಂತರ ಹಾಸಿದ ಕರಿಕಂಬಳಿ ಮೇಲೆ ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲದ ಚೂರಿನ ಪ್ರಸಾದದ ಸುತ್ತ ಡಮರುಗದ ತಾಳಕ್ಕೆ ಹೆಜ್ಜೆ ಹಾಕುತ್ತ ಕುಣಿದ ಗೊರವರು ಮೂರು ಸುತ್ತು ಪ್ರದಕ್ಷಣೆ ಹಾಕಿದರು. ಪ್ರಸಾದ ಸ್ವೀಕರಿಸುವ ಮೂಲಕ ದೋಣಿ ಸೇವೆ ಆಚರಣೆಗೆ ತೆರೆ ಎಳೆದರು.
ಚಿತ್ರದುರ್ಗದ ಮಾಳಪ್ಪನಹಟ್ಟಿ, ಬುಡರಕುಂಟೆ, ಹಿರೇಮಧುರೆ, ಬೇಡರಹಳ್ಳಿ, ಗೋಪನಹಳ್ಳಿ, ಗಂಜಿಗುಂಟೆ ಗ್ರಾಮಗಳ ನೂರಾರು ಗೊರವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.