ಚಿತ್ರದುರ್ಗ: ತನ್ನ ವಿರುದ್ಧ ಸಾಕ್ಷ್ಯನುಡಿದ ಮೂರೂವರೆ ವರ್ಷದ ಪುತ್ರನನ್ನು ಜೀವಾವಧಿ ಶಿಕ್ಷೆಗೆ ಗುರಿಯಾದ ತಂದೆ ನ್ಯಾಯಾಲಯದಲ್ಲಿ ಸೋಮವಾರ ಕೊನೆಯ ಬಾರಿಗೆ ಮುದ್ದಾಡಿದ. ತಲೆ ಮೇಲೆ ಕಲ್ಲು ಎತ್ತಿಹಾಕಿ ತಾಯಿಯನ್ನು ಬರ್ಬರವಾಗಿ ಕೊಲೆಗೈದ ದೃಶ್ಯವನ್ನು ಕಂಡಿದ್ದ ಬಾಲಕ ಮಾತ್ರ ತಂದೆಯ ಮುಖವನ್ನು ಕಣ್ಣೆತ್ತಿಯೂ ನೋಡಲಿಲ್ಲ.
ಸಿನಿಮೀಯ ಮಾದರಿಯ ಈ ದೃಶ್ಯ ಕಂಡುಬಂದಿದ್ದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ. ಪತ್ನಿ ಹಂತಕನ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರು ಮಕ್ಕಳನ್ನು ಎತ್ತಿಕೊಳ್ಳಲು ಅಪರಾಧಿಗೆ ನೀಡಿದ ಅವಕಾಶ ಅನೇಕರ ಕಣ್ಣಾಲಿಗಳನ್ನು ಒದ್ದೆ ಮಾಡಿತು.
ತುರುವನೂರು ಠಾಣಾ ವ್ಯಾಪ್ತಿಯ ಬಗ್ಗಲರಂಗವ್ವನಹಳ್ಳಿಯಲ್ಲಿ ಜೂನ್ 27ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ನ್ಯಾಯಾಧೀಶರು ಸೋಮವಾರಕ್ಕೆ ಕಾಯ್ದಿರಿಸಿದ್ದರು. ಘಟನೆ ನಡೆದ 13ನೇ ದಿನಕ್ಕೆ ಆದೇಶ ಹೊರಬೀಳುವುದನ್ನು ನೋಡುವ ಕುತೂಹಲ ಹಲವರನ್ನು ನ್ಯಾಯಾಲಯಕ್ಕೆ ಕರೆತಂದಿತ್ತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಅಪ್ಪ–ಮಗನ ನಡುವೆ ನಡೆದ ಮೌನ ಸಂವಹನ ನ್ಯಾಯಾಲಯವನ್ನು ಸ್ತಬ್ಧವಾಗಿಸಿತ್ತು.
ಪತ್ನಿ ಸಾಕಮ್ಮ (26) ಅವರನ್ನು ಕೊಲೆ ಮಾಡಿದ ಹಂತಕ ಪತಿ ಶ್ರೀಧರ್ (28) ನ್ಯಾಯಾಲಯ ಪ್ರವೇಶಿಸುತ್ತಿದ್ದಂತೆ ಎಲ್ಲರ ನೋಟ ಕಟಕಟೆಯತ್ತ ಹೊರಳಿತು. ನ್ಯಾಯಪೀಠದಲ್ಲಿ ಆಸೀನರಾಗಿದ್ದ ವಸ್ತ್ರಮಠ ಅವರು, ‘ಏನಾದರೂ ಹೇಳಲು ಇದೆಯೇ?’ ಎಂದು ಪ್ರಶ್ನಿಸಿದರು. ಇಲ್ಲವೆಂದು ಅಪರಾಧಿ ತಲೆ ಆಡಿಸುತ್ತಿದ್ದಂತೆ ನ್ಯಾಯಾಧೀಶರು ಆದೇಶ ಓದಿದರು.
‘ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ. ನೆರೆಹೊರೆಯವರು ಹಾಗೂ ಪುತ್ರ ನುಡಿದ ಸಾಕ್ಷ್ಯ ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಹೀಗಾಗಿ ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಲಾಗುತ್ತಿದೆ’ ಎಂದಾಗ ಅಪರಾಧಿ ತಲೆತಗ್ಗಿಸಿ ಮೌನಕ್ಕೆ ಶರಣಾಗಿದ್ದನು.
‘ಇಬ್ಬರೂ ನಿನ್ನ ಮಕ್ಕಳೇ. ಮಕ್ಕಳನ್ನು ದ್ವೇಷ ಮಾಡಬೇಡ. ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದ ಮಾಸಿಕ ₹ 1 ಸಾವಿರ ಪರಿಹಾರ ನೀಡುವಂತೆ ಶಿಫಾರಸು ಮಾಡುತ್ತೇನೆ’ ಎಂದು ನ್ಯಾಯಾಧೀಶರು ಆಡಿದ ಮಾತಿಗೆ ಅಪರಾಧಿ ತಲೆ ಅಲ್ಲಾಡಿಸಿದ.
‘ಸರಿ ಕರೆದುಕೊಂಡು ಹೊರಡಿ’ ಎಂದು ನ್ಯಾಯಾಧೀಶರು ಹೇಳುತ್ತಿದ್ದಂತೆ ಕಣ್ಣಾಲಿಗಳನ್ನು ತುಂಬಿಕೊಂಡು ಏನನ್ನೋ ಹೇಳಲು ತಡಬಡಿಸಿದ. ಕೊಂಚ ಸುಧಾರಿಸಿಕೊಂಡು ‘ಮಕ್ಕಳನ್ನು ನೋಡಲು ಅವಕಾಶ ಕೊಡಿ’ ಎಂದು ಮನವಿ ಮಾಡಿಕೊಂಡ. ‘ಮಕ್ಕಳಿಗೆ ಮುತ್ತುಕೊಡಲು ಮಾತ್ರ ಅವಕಾಶ ನೀಡುತ್ತೇನೆ’ ಎನ್ನುತ್ತಿದ್ದಂತೆ ಮೂರೂವರೆ ವರ್ಷದ ಧನುಷ್ ಹಾಗೂ ಒಂದೂವರೆ ವರ್ಷದ ಮೈಲಾರಿಯನ್ನು ಸಂಬಂಧಿಕರು ನ್ಯಾಯಾಲಯಕ್ಕೆ ಕರೆತಂದರು.
ಮುಖದಲ್ಲಿ ದುಗುಡ ತುಂಬಿಕೊಂಡಿದ್ದ ಧನುಷ್ ‘ನೀನೆ...’ ಎಂದು ತಂದೆಯತ್ತ ಬೊಟ್ಟು ಮಾಡಿದಾಗ ನ್ಯಾಯಾಲಯದಲ್ಲಿ ಸಂಚಲನವುಂಟಾಯಿತು. ಅಪರಾಧಿ ಸ್ಥಾನದಲ್ಲಿದ್ದ ತಂದೆ ಅಂಗಲಾಚಿದರೂ ಮಗ ಅಜ್ಜಿಯ ಸೆರಗು ಬಿಟ್ಟು ಹೋಗಲಿಲ್ಲ. ಮೈಲಾರಿಯನ್ನು ಎತ್ತಿಕೊಂಡು ಮುತ್ತುಕೊಟ್ಟ ಶ್ರೀಧರ್, ಕೊಂಚ ಒತ್ತಾಯಪೂರ್ವಕವಾಗಿಯೇ ಧನುಷ್‌ನನ್ನು ಹೆಗಲಿಗೆ ಹಾಕಿಕೊಂಡು ಕಣ್ಣೀರು ಸುರಿಸಿದನು. ಆದರೆ, ಪುತ್ರ ಮಾತ್ರ ತಂದೆಯ ಮುಖ ನೋಡಲಿಲ್ಲ.
ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಜಯರಾಮ್ ಸರ್ಕಾರದ ಪರ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.