ಚಿತ್ರದುರ್ಗ: ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಸ್ಥಾನಗಳು ಮಂಗಳವಾರ ಬಾಗಿಲು ಮುಚ್ಚಲಿವೆ. ಆದರೆ ಚಿತ್ರದುರ್ಗದ ನೀಲಕಂಠೇಶ್ವರ ದೇಗಲು ಮಾತ್ರ ಇದಕ್ಕೆ ಹೊರತಾಗಿದೆ. ಗ್ರಹಣ ಕಾಲದಲ್ಲೂ ತೆರೆದಿರುವುದು ಈ ದೇವಾಲಯದ ವಿಶೇಷ.
ಗ್ರಹಣದ ಕಾರಣಕ್ಕೆ ಈಗಾಗಲೇ ದೇಗುಲಗಳಲ್ಲಿ ನಿತ್ಯದ ಪೂಜಾ ಸಮಯವನ್ನು ಬದಲಾಯಿಸಿ ಭಕ್ತರಿಗೆ ಪ್ರಚುರಪಡಿಸಲಾಗಿದೆ. ಕೆಲವು ಕಡೆ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿ 7ರವರೆಗೂ ಪೂಜೆ ಸ್ಥಗಿತಗೊಳಿಸಲಾಗಿದೆ. ದೀಪಾವಳಿ ಕಾರಣಕ್ಕೆ ಕೆಲ ಭಾಗದ ದೇಗುಲಗಳು ಬೆಳಿಗ್ಗೆ ಎಂದಿನಂತೆ ಪೂಜೆ ಸಲ್ಲಿಸಿ ಮಧ್ಯಾಹ್ನ 12ರ ವೇಳೆಗೆ ಬಾಗಿಲು ಮುಚ್ಚುತ್ತಿವೆ.
ನಗರದ ಹೊಳಲ್ಕೆರೆ ರಸ್ತೆಯ ಐತಿಹಾಸಿಕ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಾತ್ರ ಎಂದಿನಂತೆ ಪೂಜಾ ಕಾರ್ಯಗಳು ನಡೆಯಲಿವೆ. ಮುಂಜಾನೆ 5ರಿಂದ ಅಭಿಷೇಕ ಪ್ರಾರಂಭವಾಗಿಲಿದ್ದು, 8ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಮಧ್ಯಾಹ್ನ 1ಕ್ಕೆ ಪೂಜೆ ಸಲ್ಲಿಸಿ ಬಾಗಿಲು ಮುಚ್ಚಲಾಗುತ್ತದೆ. ಪುನಃ ಸಂಜೆ 4.30ಕ್ಕೆ ಬಾಗಿಲು ತೆರೆದು 8.30ರವರೆಗೆ ದೇವರ ದರ್ಶನಕ್ಕೆ ಸಮಯ ನಿಗದಿಗೊಳಿಸಲಾಗಿದೆ. ಈ ಪ್ರಕ್ರಿಯೆ ವರ್ಷದ 365 ದಿನವೂ ನಡೆಯುವುದು
ವಿಶೇಷ.
300 ವರ್ಷಗಳ ಇತಿಹಾಸವಿರುವ ಹೊಂದಿರುವ ಈ ದೇವಸ್ಥಾನವನ್ನು ದೈವ ಭಕ್ತನಾದ ದೊರೆ ಭರಮಣ್ಣನಾಯಕನ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಇತಿಹಾಸ ತಜ್ಞರು.
ಅಂದಿನಿಂದ ಈವರೆಗೂ ಸಂಭವಿಸಿದ ಗ್ರಹಣಗಳ ಸಮಯದಲ್ಲಿ ದೇವಸ್ಥಾನದ ಬಾಗಿಲು ಹಾಕದೆ ಪೂಜೆ ಸಲ್ಲಿಸುವ ಸಂಪ್ರದಾಯ ಬೆಳೆದು ಬಂದಿದೆ.
‘ದೇವಸ್ಥಾನದ ಬಾಗಿಲು ಮುಚ್ಚಿ ಪೂಜೆ ಸ್ಥಗಿತಗೊಳಿಸುವ ಸಂಪ್ರದಾಯ ಮೊದಲಿನಿಂದಲೂ ಇಲ್ಲಿ ನಡೆದುಕೊಂಡು ಬಂದಿಲ್ಲ. ಗ್ರಹಣ ಸಮಯದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ಕೆಲವರು ಒಳಾಂಗಣದಲ್ಲಿ ದೇವರ ಧ್ಯಾನ ಮಾಡುತ್ತಾರೆ. ಅಲ್ಲದೇ ಗ್ರಹಣ ಮುಗಿದ ಬಳಿಕ ದೇಗುಲವನ್ನು ಸಹ ಸ್ವಚ್ಛಗೊಳಿಸುವುದಿಲ್ಲ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಾಂತಮೂರ್ತಿ ತಿಳಿಸಿದರು.
***
ಗ್ರಹಣ ಪ್ರಕೃತಿ ಸಹಜ ಪ್ರಕ್ರಿಯೆ. ಈ ಕಾರಣಕ್ಕೆ ದೇವಸ್ಥಾನದ ಬಾಗಿಲು ಮುಚ್ಚಿ ಪೂಜೆ ಸ್ಥಗಿತಗೊಳಿಸುವ ಸಂಪ್ರದಾಯ ಮೊದಲಿನಿಂದಲೂ ಇಲ್ಲಿ ನಡೆದುಕೊಂಡು ಬಂದಿಲ್ಲ.
–ಶಾಂತಮೂರ್ತಿ, ಪ್ರಧಾನ ಅರ್ಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.