ADVERTISEMENT

ಚಿತ್ರದುರ್ಗ: ಖಾಲಿ ನಿವೇಶನ ಸ್ವಚ್ಛತೆಗೆ ಡೆಡ್‌ಲೈನ್‌

ಕೆ.ಪಿ.ಓಂಕಾರಮೂರ್ತಿ
Published 30 ಸೆಪ್ಟೆಂಬರ್ 2024, 7:19 IST
Last Updated 30 ಸೆಪ್ಟೆಂಬರ್ 2024, 7:19 IST
ಚಿತ್ರದುರ್ಗ ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಗಿಡಗಂಟೆಗಳಿಂದ ಆವೃತವಾಗಿರುವ ಖಾಲಿ ನಿವೇಶನ 
ಚಿತ್ರದುರ್ಗ ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಗಿಡಗಂಟೆಗಳಿಂದ ಆವೃತವಾಗಿರುವ ಖಾಲಿ ನಿವೇಶನ    

ಚಿತ್ರದುರ್ಗ: ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟಿ ತೆರವು ಹಾಗೂ ಕಸ ವಿಲೇವಾರಿಗೆ ನಗರಸಭೆ ಅಕ್ಟೋಬರ್‌ 31ರ ಡೆಡ್‌ಲೈನ್‌ ವಿಧಿಸಿದೆ. ನವೆಂಬರ್‌ 1 ರಿಂದ ಜೆಸಿಬಿಗಳ ಕಾರ್ಯಾಚರಣೆ ನಡೆಸಿ ಎರಡು ಪಟ್ಟು ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಲು ಸಿದ್ಧತೆ ನಡೆದಿದೆ.

ಖಾಲಿ ನಿವೇಶನದ ವಿಚಾರದಲ್ಲಿ ಬರುತ್ತಿರುವ ನಿರಂತರ ದೂರಿಗೆ ನಗರಸಭೆ ಅಧಿಕಾರಿಗಳು ಹೈರಾಣಾಗಿದ್ದಾರೆ. ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ನಾಮಫಲಕ ಅಳವಡಿಸಿಕೊಳ್ಳಬೇಕೆಂದು ನಗರಸಭೆ ಹಲವು ಬಾರಿ ಸೂಚಿಸಿದೆ. ಆದರೆ ಮಾಲೀಕರು ಮಾತ್ರ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇರುವುದೇ ಸಮಸ್ಯೆಗೆ ಮೂಲ ಕಾರಣ.

ನಗರದ ಬಹುತೇಕ ಬಡಾವಣೆಗಳಲ್ಲಿ ಖಾಲಿ ನಿವೇಶನಗಳು ಹೆಚ್ಚಾಗಿವೆ. ನಿರ್ವಹಣೆ ಕೊರತೆಯಿಂದಾಗಿ ಕಳೆ ಸಸ್ಯಗಳು ಬೆಳೆದು ನಿವೇಶನಗಳೇ ಕಾಣದಂತಾಗಿವೆ. ಜತೆಗೆ ಸುತ್ತಲಿನ ನಿವಾಸಿಗಳು ನಗರಸಭೆಯಿಂದ ಬರುವ ಕಸದ ಗಾಡಿಗೆ ಕಸ ಹಾಕದೆ ಖಾಲಿ ನಿವೇಶನಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡಿದ್ದಾರೆ. ನಿವೇಶನ ಖರೀದಿಸುವ ಬಹುತೇಕರು ವರ್ಷಗಳೇ ಉರುಳಿದರೂ  ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಅವುಗಳ ನಿರ್ವಹಣೆಗೆ ಗಮನ ಹರಿಸದಿರುವುದು ನಗರಸಭೆಗೆ ಸಮಸ್ಯೆ ತಂದೊಡ್ಡಿದೆ.

ADVERTISEMENT

ಬ್ಯಾಂಕ್‌ ಕಾಲೊನಿ, ಐಯುಡಿಪಿ ಲೇಔಟ್‌, ಕೆಎಚ್‌ಬಿ ಕಾಲೊನಿ, ಸಾದಿಕ್‌ ನಗರ, ಸರಸ್ವತಿಪುರಂ, ಸಹ್ಯಾದ್ರಿ ಬಡಾವಣೆ, ಕೆಎಸ್‌ಆರ್‌ಟಿಸಿ ಬಡಾವಣೆ, ಮಾಸ್ತಮ್ಮ ಬಡಾವಣೆ, ಟೀಚರ್ಸ್‌ ಕಾಲೊನಿ, ಪುಟ್ಟಗೌರಿ ಲೇಔಟ್‌, ಜಯಲಕ್ಷ್ಮಿ ಬಡಾವಣೆ, ಗಾರೇಹಟ್ಟಿ, ಸಂಗಮೇಶ್ವರ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಹೆದ್ದಾರಿಯ ಎರಡೂ ಬದಿ ಬಡಾವಣೆಗಳು, ಭೀಮಸಮುದ್ರ ರಸ್ತೆ, ಹೊಳಲ್ಕೆರೆ ರಸ್ತೆ ಸೇರಿ ನಗರದ ಬಹುತೇಕ ಕಡೆ ಸಮಸ್ಯೆ ಸಾಮಾನ್ಯವಾಗಿದೆ.

ಹೊಸ ಬಡಾವಣೆಗಳಲ್ಲಿ ಮದ್ಯವ್ಯಸನಿಗಳು ಹಾಗೂ ಗಿಡಗಂಟಿಗಳ ಸಮಸ್ಯೆ ಹೆಚ್ಚು. ಆದರೆ ಹಳೇ ಬಡಾವಣೆಗಳಲ್ಲಿ ಕಳೆ, ಜಾಲಿಗಿಡದ ಜತೆಗೆ ಕಸದ ಸಮಸ್ಯೆ ಸೃಷ್ಟಿಯಾಗಿದೆ. ಬೈಪಾಸ್‌ ರಸ್ತೆಗೆ ಹೊಂದಿಕೊಂಡಿರುವ ಖಾಲಿ ನಿವೇಶನಗಳು ಹೋಟೆಲ್‌, ಬೀದಿ ಬದಿಯ ವ್ಯಾಪಾರಿಗಳು ರಾತ್ರಿ ವೇಳೆ ಉಳಿದ ಆಹಾರ ಪದಾರ್ಥ, ತ್ಯಾಜ್ಯ ಹಾಕುವ ಸ್ಥಳಗಳನ್ನಾಗಿ ಮಾಡಿಕೊಂಡಿದ್ದಾರೆ. ನಗರದ ಬಡಾವಣೆಗಳಲ್ಲಿ ಖಾಲಿ ಜಾಗಗಳು ಕಸದ ತೊಟ್ಟಿಗಳಾಗಿವೆ. ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್‌ ಕಸ ಕಣ್ಣಿಗೆ ರಾಚುತ್ತಿವೆ.

‘ಖಾಲಿ ನಿವೇಶನಗಳ ಮಾಲೀಕರಲ್ಲಿ ಬಹುತೇಕರು ಹೊರ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ವರ್ಷಕೊಮ್ಮೆ ಬಂದು ಹೋಗುವ ಇವರಿಗೆ ಖಾಲಿ ನಿವೇಶನ ಪಕ್ಕದ ನಿವಾಸಿಗಳ ಸಮಸ್ಯೆ ಅರ್ಥವಾಗುತ್ತಿಲ್ಲ. ಕಳೆ ಸಸ್ಯಗಳನ್ನು ತೆರವುಗೊಳಿಸಿ ನಿವೇಶನವನ್ನು ಶುಚಿಯಾಗಿ ಇಟ್ಟುಕೊಳ್ಳಲು ಮುಂದಾಗುತ್ತಿಲ್ಲ’ ಎನ್ನುತ್ತಾರೆ ವಿದ್ಯಾನಗರದ ನಿವಾಸಿ ಜಗದೀಶ್‌.

ನಿವೇಶನ ಮಾಲೀಕರು ನಿವೇಶನಗಳನ್ನು ಸ್ವಚ್ಚಗೊಳಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳಬೇಕು. ನಿವೇಶನಕ್ಕೆ ಸಂಬಂಧಪಟ್ಟ ಮಾಲೀಕರ ಹೆಸರು, ವಿಳಾಸ, ಖಾತೆ ಅಥವಾ ಅಸೆಸ್‌ಮೆಂಟ್ ಸಂಖ್ಯೆ, ಪಿ.ಐ.ಡಿ ನಂ, ಮೊಬೈಲ್ ನಂಬರ್‌ಗಳನ್ನೊಳಗೊಂಡ ನಾಮಫಲಕ ಹಾಕಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ನ.1ರಿಂದ ನಗರಸಭೆಯಿಂದ ನಿವೇಶನ ಸ್ಚಚ್ಛಗೊಳಿಸಿ ದಂಡ ಪಾವತಿಯ ಫಲಕ ಆಳವಡಿಸಲಾಗುತ್ತದೆ. ದಂಡ ಪಾವತಿಸಿದ ಬಳಿಕ ಫಲಕ ತೆರವುಗೊಳಿಸಲಾಗುತ್ತದೆ. ಒಂದು ವೇಳೆ ಫಲಕಕ್ಕೆ ಹಾನಿಯಾದರೆ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ
ಎಂ.ರೇಣುಕಾ ಪೌರಾಯುಕ್ತೆ
ನಿವೇಶನ ಮಾಲೀಕರ ನಿರ್ಲಕ್ಷ್ಯದಿಂದ ನಿವಾಸಿಗಳು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಗಿಡಗಂಟಿ ಬೆಳೆದ ಕಾರಣ ವಿಷಜಂತುಗಳ ಕಾಟ ಹೆಚ್ಚಾಗಿದ್ದು ಮಕ್ಕಳು ಹಿರಿಯರು ಓಡಾಡುವುದು ಕಷ್ಟವಾಗಿದೆ. ರಾತ್ರಿ ವೇಳೆ ಕಸ ಸುರಿಯುವುದು ಮಾಮೂಲಿಯಾಗಿದೆ
ಎ.ತಿಪ್ಪೇಸ್ವಾಮಿ ಶಿಕ್ಷಕರು ಸರಸ್ವತಿಪುರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.