ADVERTISEMENT

ಚಿತ್ರದುರ್ಗ: ಹಾಳು ಸುರಿಯುತ್ತಿದೆ ಮಾಜಿ ಸಿಎಂ ನಿಜಲಿಂಗಪ್ಪ ನಿವಾಸ!

ನಾಶವಾದ ವಸ್ತ್ರ, ಪುಸ್ತಕ, ಪೀಠೋಪಕರಣ, ಈಗಲಾದರೂ ಸ್ಮಾರಕ ರೂಪ ಪಡೆಯುವುದೇ ಮನೆ?

ಎಂ.ಎನ್.ಯೋಗೇಶ್‌
Published 16 ನವೆಂಬರ್ 2024, 7:35 IST
Last Updated 16 ನವೆಂಬರ್ 2024, 7:35 IST
ಚಿತ್ರದುರ್ಗದ ವಿ.ಪಿ ಬಡಾವಣೆಯಲ್ಲಿರುವ ಎಸ್‌.ನಿಜಲಿಂಗಪ್ಪ ಅವರ ನಿವಾಸದ ಒಳಾಂಗಣದ ಸ್ಥಿತಿ 
ಚಿತ್ರದುರ್ಗದ ವಿ.ಪಿ ಬಡಾವಣೆಯಲ್ಲಿರುವ ಎಸ್‌.ನಿಜಲಿಂಗಪ್ಪ ಅವರ ನಿವಾಸದ ಒಳಾಂಗಣದ ಸ್ಥಿತಿ    

ಚಿತ್ರದುರ್ಗ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮನೆ ಖರೀದಿ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಶಿಥಿಲಗೊಂಡು ಹಾಳು ಸುರಿಯುತ್ತಿರುವ ಮನೆ ಈಗಲಾದರೂ ಸ್ಮಾರಕವಾಗಿ ಅಭಿವೃದ್ಧಿ ಕಾಣುವುದೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

ದೇಶದ ರಾಜಕಾರಣದಲ್ಲಿ ಮುತ್ಸದ್ಧಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಎಸ್‌.ನಿಜಲಿಂಗಪ್ಪ ಅವರು ವಿ.ಪಿ ಬಡಾವಣೆಯಲ್ಲಿರುವ ‘ವಿನಯ’ ನಿವಾಸದಲ್ಲಿ ಬಾಳಿ ಬದುಕಿದ್ದರು. 117 X 130 ಅಡಿ ಅಳತೆಯ ಮನೆ ಇಂದಿಗೂ ನಗರದಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ಕೂಗಳತೆ ದೂರದಲ್ಲಿರುವ ನಿವಾಸದಲ್ಲಿ ನಿಜಲಿಂಗಪ್ಪ ಅವರ ನೆನಪುಗಳು ಜೀವಂತವಾಗಿವೆ.

ಆದರೆ, ಮನೆ ಶಿಥಿಲಗೊಂಡು ದೂಳು ಹಿಡಿದಿದ್ದು ಆ ಸ್ಥಿತಿ ಕಂಡು ಸ್ಥಳೀಯರು ಮರುಗುತ್ತಾರೆ. ಸುಂದರವಾದ ಉದ್ಯಾನದ ನಡುವೆ ಅರಳಿದ್ದ ನಿವಾಸ ಈಗ ಪಾಳು ಬಂಗಲೆಯಂತಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಇಂದೋ, ನಾಳೆಯೋ ಬಿದ್ದು ಹೋಗುತ್ತದೆ ಎಂಬ ಸ್ಥಿತಿಯಲ್ಲಿದೆ.

ADVERTISEMENT

ಚಾವಣಿ ಸೋರುತ್ತಿರುವ ಕಾರಣ ನಿಜಲಿಂಗಪ್ಪ ಅವರು ಬಳಸುತ್ತಿದ್ದ ವಸ್ತುಗಳೆಲ್ಲವೂ ಹಾಳಾಗಿವೆ. ನಿಜಲಿಂಗಪ್ಪ ಅವರು ಸಂಗ್ರಹಿಸಿದ್ದ ಪುಸ್ತಕಗಳನ್ನು ಇಲಿಗಳು ತಿಂದು ಹಾಕಿವೆ. ರೇಡಿಯೊ, ವಸ್ತ್ರಗಳು, ಕನ್ನಡಕ, ಊರುಗೋಲು, ಪೀಠೋಪಕರಣ ಮುಂತಾದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಅವರಿಗೆ ಬಂದಿದ್ದ ಪ್ರಶಸ್ತಿ ಫಲಕಗಳನ್ನೂ ಜೋಪಾನ ಮಾಡಲಾಗಿತ್ತು.

ಆದರೆ, ಮನೆಯನ್ನು ಯಾರೂ ಸಂರಕ್ಷಣೆ, ನಿರ್ವಹಣೆ ಮಾಡದ ಕಾರಣ ಸಂಗ್ರಹಿಸಿದ್ದ ವಸ್ತುಗಳೆಲ್ಲವೂ ಹಾಳಾಗಿವೆ. ಮನೆಗೆ ಭದ್ರತೆ ವ್ಯವಸ್ಥೆಯೂ ಇಲ್ಲದ ಕಾರಣ ನಾಯಿಗಳು ವಾಸಿಸುತ್ತಿದ್ದವು. ಕಳ್ಳರು ಮನೆಗೆ ನುಗ್ಗಿ ಕೆಲ ಪದಕ, ಪ್ರಶಸ್ತಿಗಳನ್ನು ಹೊತ್ತೊಯ್ದಿದ್ದರು. ಇಷ್ಟೆಲ್ಲಾ ಆದರೂ, ಇದೂವರೆಗೆ ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರ ಅಭಿವೃದ್ಧಿಪಡಿಸದ ಕಾರಣ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಪ್ರಯತ್ನ ವಿಫಲ

18 ವರ್ಷಗಳಿಂದಲೂ ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ವತಿಯಿಂದಲೇ ಖರೀದಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ. ಆದರೆ, ವಿವಿಧ ಕಾರಣಗಳಿಂದ ಅದು ಇಲ್ಲಿಯವರೆಗೂ ಅಂತಿಮ ರೂಪ ಪಡೆದಿಲ್ಲ.

2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿವಾಸ ಖರೀದಿಸುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿತ್ತು. ಮನೆ ಖರೀದಿಗೆ ₹ 4.24 ಕೋಟಿ, ಸ್ಮಾರಕ ಅಭಿವೃದ್ಧಿಗೆ ₹ 76 ಲಕ್ಷ ಸೇರಿ ಒಟ್ಟು ₹ 5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಈಗಲೂ ಆ ಹಣ ಲೋಕೋಪಯೋಗಿ ಇಲಾಖೆಯ ಖಾತೆಯಲ್ಲಿದೆ.

ಆಸ್ತಿ ನೋಂದಣಿ ವಿಚಾರದಲ್ಲಿ ಗೊಂದಲಗಳು ಮೂಡಿದ ಕಾರಣ ಖರೀದಿ ಪ್ರಕ್ರಿಯೆ ಅಂತಿಮಗೊಳ್ಳಲಿಲ್ಲ. ಅಮೆರಿಕದಿಂದ ಬಂದಿದ್ದ ಆಸ್ತಿ ಮಾಲೀಕ, ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್‌ ಬೇಸರದಿಂದ ವಾಪಸ್‌ ತೆರಳಿದ್ದರು. ನಿಜಲಿಂಗಪ್ಪ ಅವರು ಮರಣಪೂರ್ವದಲ್ಲಿ ಮಾಡಿದ್ದ ಉಯಿಲು ಪತ್ರದ ಬಗ್ಗೆ ನೋಂದಣಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ನೋಂದಣಿಗೆ ಮಕ್ಕಳು, ಮೊಮ್ಮಕ್ಕಳ ಸಹಿ ಬೇಕು ಎಂದು ಕೋರಿದ್ದರು. ಇದರಿಂದಾಗಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ತಿಂಗಳೊಳಗೆ ಖರೀದಿ

ಅಧಿಕಾರಿಗಳ ಧೋರಣೆಯಿಂದ ಬೇಸತ್ತಿದ್ದ ನಿಜಲಿಂಗಪ್ಪ ಅವರ ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ಶಂಕರ್‌ ಈಚೆಗೆ ‘ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕಿದೆ’ ಎಂದು  ಜಾಹೀರಾತು ನೀಡಿದ್ದರು. ಸಾರ್ವಜನಿಕ ವಲಯದಲ್ಲಿ ಈ ವಿಚಾರ ಚರ್ಚೆಗೆ ಕಾರಣವಾಗಿತ್ತು, ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. 

ಎಚ್ಚೆತ್ತುಕೊಂಡ ಸರ್ಕಾರ ಅಧಿಕಾರಿಗಳ ಸಭೆ ನಡೆಸಿ ಮನೆ ಖರೀದಿಸುವ, ಸಂರಕ್ಷಿಸುವ, ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸುವ ನಿರ್ಧಾರ ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಅವರು ತಿಂಗಳೊಳಗೆ ನೋಂದಣಿ ಮಾಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರ ತರಾತುರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌.ನಿಜಲಿಂಗಪ್ಪ ಅವರ ನಿವಾಸದ ಹೊರನೋಟ

‘ಮೊದಲು ಸಂರಕ್ಷಣೆ ನಂತರ ಅಭಿವೃದ್ಧಿ’

‘ಎಸ್‌.ನಿಜಲಿಂಗಪ್ಪ ಅವರ ಮನೆಗೆ ಅವರ ಮೊಮ್ಮಗ ಎಸ್‌.ಕೆ.ವಿನಯ್‌ ಅವರೇ ಸಂಪೂರ್ಣ ಮಾಲೀಕ ಎಂಬ ಕಾನೂನು ಅಭಿಪ್ರಾಯ ಬಂದಿದ್ದು ಶೀಘ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಪತ್ರ ಬರೆಯಲಾಗಿದೆ. ವಿನಯ್‌ ಅವರು ಬರಲು ಸಾಧ್ಯವಾಗದಿದ್ದರೆ ಜಿಪಿಎ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದರು. ‘ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ಮೊದಲು ಸಂರಕ್ಷಣೆ ಮಾಡಲಾಗುವುದು. ನಂತರ ವಸ್ತುಸಂಗ್ರಹಾಲಯ ಸೇರಿದಂತೆ ಯಾವ ರೀತಿ ಕಟ್ಟಡವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ಮನೆ ಮೇಲೆ ಅತೀವ ಪ್ರೀತಿ

‘ನಿಜಲಿಂಗಪ್ಪ ಅವರು ತೀವ್ರ ಅನಾರೋಗ್ಯಕ್ಕೀಡಾದಾಗ ಮಕ್ಕಳು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ದುರ್ಗದ ಮನೆ ಮೇಲೆ ಅತೀವ ಪ್ರೀತಿ ಹೊಂದಿದ್ದ ಅವರು ವಾಪಸ್‌ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಮಕ್ಕಳು ದುರ್ಗದ ಮನೆಯ ಅವರ ಕೊಠಡಿ ರೀತಿಯಲ್ಲಿಯೇ ಪುಸ್ತಕ ರೇಡಿಯೊ ಜೋಡಿಸಿಟ್ಟು ದುರ್ಗಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಆದರೆ ನಿಜಲಿಂಗಪ್ಪ ಅವರು ‘ನಾನು ಅಷ್ಟು ದಡ್ಡ ಎಂದು ತಿಳಿದುಕೊಂಡಿದ್ದೀರಾ? ನನಗೆ ಎಲ್ಲವೂ ಗೊತ್ತಿದೆ ದುರ್ಗದ ಮನೆಗೆ ಕರೆದೊಯ್ಯಿರಿ’ ಎಂದು ತಾಕೀತು ಮಾಡಿದ್ದರಂತೆ. ಇದನ್ನು ಅವರ ಆಪ್ತರೇ ನನಗೆ ತಿಳಿಸಿದ್ದರು’ ಎಂದು ಹಿರಿಯ ಸಾಹಿತಿ ಎಂ.ಮೃತ್ಯುಂಜಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.