ADVERTISEMENT

ದುರ್ಗದ ಇತಿಹಾಸ ಸಾರುವ ಮೊಹಿದ್ದೀನ್‌ ಖಾನ್‌

ಪ್ರವಾಸಿ ಮಾರ್ಗದರ್ಶಿಗೆ ಸಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಎಂ.ಎನ್.ಯೋಗೇಶ್‌
Published 6 ನವೆಂಬರ್ 2024, 5:51 IST
Last Updated 6 ನವೆಂಬರ್ 2024, 5:51 IST
<div class="paragraphs"><p>ಶಿವರಾಜ್‌ಕುಮಾರ್‌ ಅವರೊಂದಿಗೆ ಬಿ.ಮೊಹಿದ್ದೀನ್‌ ಖಾನ್‌</p></div>

ಶಿವರಾಜ್‌ಕುಮಾರ್‌ ಅವರೊಂದಿಗೆ ಬಿ.ಮೊಹಿದ್ದೀನ್‌ ಖಾನ್‌

   

ಚಿತ್ರದುರ್ಗ: ನಗರದ ಐತಿಹಾಸಿಕ ಕಲ್ಲಿನಕೋಟೆ ಮುಂದೆ ನಿಂತು ‘ಮೊಹಿದ್ದೀನ್‌ ಖಾನ್‌’ ಎಂದು ಕೂಗಿದರೆ ಸಾಕು, ಕೋಟೆಯ ಪ್ರತಿ ಕಲ್ಲುಗಳು ಎಚ್ಚೆತ್ತುಕೊಳ್ಳುತ್ತವೆ, ಮಾತನಾಡುತ್ತವೆ ಎಂಬಷ್ಟು ದುರ್ಗದ ಕೋಟೆಗೂ ಮೊಹಿದ್ದಿನ್‌ ಖಾನ್‌ ನಡುವೆ ಅಪಾರ ನಂಟಿದೆ.

ಚಿತ್ರದುರ್ಗದ ಪರಂಪರೆಯನ್ನು ಸಾರಿ ಹೇಳುವ ಪ್ರವಾಸಿ ಮಾರ್ಗದರ್ಶಿ ಮೊಹಿದ್ದೀನ್‌ ಖಾನ್‌  21 ವರ್ಷಗಳಿಂದ ಕೋಟೆಯೊಂದಿಗೆ ಆಪ್ತ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ನಾಲಗೆ ತುದಿಯಲ್ಲಿಯೇ ಕೋಟಿಯ ಇತಿಹಾಸವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಕೋಟೆ ಮಾತ್ರವೇ ಅಲ್ಲ, ದುರ್ಗದ ಸುತ್ತಮುತ್ತಲೂ ಇರುವ ಸ್ಮಾರಕಗಳು, ದೇವಾಲಯಗಳು, ಕೆರೆ, ಕಟ್ಟೆ, ಹೊಂಡಗಳ ಬಗ್ಗೆ ಇವರ ಬಳಿ ಸಾಕಷ್ಟು ಮಾಹಿತಿ ಇದೆ. ಪ್ರತಿದಿನ ಮುಂಜಾನೆ ಕೋಟೆ ಎದುರು ಪ್ರತ್ಯಕ್ಷವಾಗುವ ಇವರು, ದೇಶ–ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮನಮುಟ್ಟುವ ರೀತಿಯಲ್ಲಿ ವಿವರಿಸುತ್ತಾರೆ.

ADVERTISEMENT

ಕನ್ನಡ ಚಿತ್ರರಂಗ ಹಾಗೂ ದುರ್ಗದ ಆಸುಪಾಸಿನಲ್ಲಿ ನಡೆಯುವ ಚಿತ್ರೀಕರಣಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರುವ ಮೊಹಿದ್ದೀನ್‌ ಖಾನ್‌, ಹಲವು ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಕತೆಗಾರರಿಗೆ ಆಪ್ತರಾಗಿದ್ದಾರೆ. ವಿಷ್ಣುವರ್ಧನ್‌ ಅಭಿನಯದ ‘ನಾಗರಹಾವು’ ಚಿತ್ರ ನೋಡಿ ಅದರ ಪ್ರೇರಣೆಯಿಂದಲೇ ಪ್ರವಾಸಿ ಮಾರ್ಗದರ್ಶಿಯಾದ ಅವರು ಈ ಕೆಲಸದಲ್ಲೇ ಸಂತಸ ಕಂಡುಕೊಂಡಿದ್ದಾರೆ.

‘ಹುಡುಗರು’, ‘ಕಲ್ಲರಳಿ ಹೂವಾಗಿ’, ‘ತನನಂ ತನನಂ’ ಮುಂತಾದ ಚಿತ್ರಗಳಲ್ಲಿ ಮೊಹಿದ್ದೀನ್‌ ಖಾನ್‌ ನಿರ್ಮಾಣ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿತ್ರೀಕರಣ ತಾಣಗಳ ಹುಡುಕಾಟ, ಅದರ ಸಂಪೂರ್ಣ ಮಾಹಿತಿ ಸಂಗ್ರಹ, ಚಿತ್ರೀಕರಣಕ್ಕೆ ಅನುಮತಿ ಪಡೆಯುವ ಕೆಲಸಗಳನ್ನು ನಿರ್ಮಾಪಕರಿಗೆ ಮಾಡಿಕೊಟ್ಟಿದ್ದಾರೆ. ಚಿತ್ರರಂಗದ ಒಡನಾಟಕ್ಕೆ ಹಿರಿಯ ಸಾಹಿತಿ ಬಿ.ಎಲ್‌. ವೇಣು ಅವರ ಪ್ರೀತಿಯೇ ಕಾರಣ ಎಂದು ಮೊಹಿದ್ದೀನ್‌ ಖಾನ್‌ ನೆನೆಯುತ್ತಾರೆ.

ಹಿಂದಿ ಶಿಕ್ಷಕ:

ಬಿ.ಎ, ಬಿ.ಇಡಿ (ಹಿಂದಿ) ಪದವಿ ಪಡೆದಿರುವ ಮೊಹಿದ್ದೀನ್‌ ಖಾನ್‌ ಅವರು ಪ್ರವಾಸಿ ಮಾರ್ಗದರ್ಶಿಯಾಗುವುದಕ್ಕೂ ಮೊದಲು ನಗರದ ಪೇಪರ್‌ ಮಾರಪ್ಪ ಅವರ ಮದಕರಿ ನಾಯಕ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಶಿಕ್ಷಕ ಹುದ್ದೆಗೆ ಅನುದಾನದ ಮಂಜೂರಾತಿ ದೊರೆಯದ ಕಾರಣ ಅವರು ಅನ್ಯ ಉದ್ಯೋಗ ಹುಡುಕಾಟದಲ್ಲಿದ್ದರು. ಆಗ ಅವರ ಕೈಬೀಸಿ ಕರೆದದ್ದು ಪ್ರವಾಸಿ ಮಾರ್ಗದರ್ಶಿ ಕಾಯಕ. ಅಂದಿನಿಂದ ಇಂದಿನವರೆಗೆ ಅವರು ಹಿಂದಿರುಗಿ ನೋಡಿಲ್ಲ.

ತಾಲ್ಲೂಕಿನ ನೆರೇನಹಾಳ್‌ ಗ್ರಾಮದ ಬುಡೇನ್‌ ಖಾನ್‌– ರಮಿಜಾಬಿ ದಂಪತಿಯ ಪುತ್ರರಾದ ಮೊಹಿದ್ದೀನ್‌ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಂದೆ ತೀರಿದ ನಂತರ ತಾಯಿಯೊಂದಿಗೆ ಚಿತ್ರದುರ್ಗಕ್ಕೆ ಬಂದು ನೆಲೆಸಿರುವ ಇವರಿದ್ದ ಕೊಳೆಗೇರಿಯಲ್ಲಿ ಜನರು ವಾಸಿಸುವ ಮನೆಗಳಿಗೆ ಹಕ್ಕು ಪತ್ರವೇ ಇರಲಿಲ್ಲ. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೊಹಿದ್ದೀನ್‌ ನಿವಾಸಿಗಳಿಗೆ ಕೊಳೆಗೇರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾದರು. ನಂತರ ಆ ಬಡಾವಣೆಗೆ ‘ಬುದ್ಧನಗರ’‍ ಎಂದು ನಾಮಕರಣ ಮಾಡಲಾಯಿತು.

ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಅವರು 6 ಕೃತಿಗಳನ್ನು ಹೊರತಂದಿದ್ದಾರೆ. ಅವರು ರಚಿಸಿದ ‘ಜೀವ’ ನೀಳ್ಗತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕವನ, ಕಥಾ ಸಂಕಲಗಳನ್ನು ಹೊರತಂದಿದ್ದಾರೆ. ಇವರ ‘ಜನಮನದಲ್ಲಿ ಡಾ.ರಾಜ್‌ಕುಮಾರ್‌’ ಕೃತಿಯನ್ನು ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. ಸಂಘಟಕರಾಗಿಯೂ ಗುರುತಿಸಿಕೊಂಡಿರುವ ಇವರು, ಕವಿಗೋಷ್ಠಿ, ಪುಸ್ತಕಬಿಡುಗಡೆ ಮುಂತಾದ ಸಮಾರಂಭಗಳನ್ನು ಆಯೋಜನೆ ಮಾಡುತ್ತಿದ್ದಾರೆ.‌

ಮೊಹಿದ್ದೀನ್‌ ಖಾನ್‌ ಅವರು ಪ್ರತಿಭೆ ಗುರುತಿಸಿ ಹಲವು ಸಂಘಟನೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಇದೀಗ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ.

ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಸಿ.ಟಿ.ರವಿ ಹಾಗೂ ಇತರರಿಗೆ ಮಾಹಿತಿ ನೀಡುತ್ತಿರುವ ಬಿ.ಮೊಹಿದ್ದೀನ್‌ ಖಾನ್‌

‘ಮದಕರಿ’ ಚಿತ್ರಕ್ಕೆ ಸಹಾಯ...

ಚಿತ್ರದುರ್ಗದ ಕೋಟೆಯನ್ನಾಳಿದ ವೀರ ಮದಕರಿ ನಾಯಕರ ಜೀವನವನ್ನಾಧಾರಿಸಿದ ಐತಿಹಾಸಿಕ ‘ಮದಕರಿ’ ಚಿತ್ರದ ನಿರ್ಮಾಣ ಕೆಲಸಗಳು ಪ್ರಗತಿಯಲ್ಲಿವೆ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಒಂದು ಸುತ್ತು ಕೋಟೆ ಹಾಗೂ ಸುತ್ತಮುತ್ತಲಿನ ಸ್ಮಾರಕಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದೆ. ಬಿ.ಮೊಹಿದ್ದೀನ್‌ ಖಾನ್‌ ಅವರೇ ಚಿತ್ರತಂಡಕ್ಕೆ ಸಹಾಯ ಮಾಡಿದ್ದಾರೆ ಚಿತ್ರೀಕರಣ ತಾಣಗಳನ್ನು ತಂಡಕ್ಕೆ ತೋರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.