ADVERTISEMENT

ಹೊಸದುರ್ಗ | ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 15:42 IST
Last Updated 13 ಮೇ 2024, 15:42 IST
ಹೊಸದುರ್ಗದ ರಂಗೈನೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಯಿತು
ಹೊಸದುರ್ಗದ ರಂಗೈನೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಯಿತು   

ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ರಂಗೈನೂರು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಿ ಮೆರವಣಿಗೆ ಮಾಡಲಾಯಿತು.

ಗ್ರಾಮದ ಕಟ್ಟೇರಂಗನಾಥ ಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ಚಪ್ಪರ ಹಾಕಲಾಯಿತು. ಎರಡು ಕತ್ತೆಗಳನ್ನು (ಗಂಡು, ಹೆಣ್ಣು) ಕರೆತಂದು ಮಧುಮಕ್ಕಳಂತೆ ಅಲಂಕರಿಸಲಾಯಿತು. ಊರಿನ ಹೆಬ್ಬಾಗಿಲ ಎದುರು ಅಕ್ಕಿ ಶಾಸ್ತ್ರ ಮಾಡಲಾಯಿತು. ನಂತರ ಕತ್ತೆಗಳನ್ನು ದೇವಾಲಯದ ಬಳಿ ಕರೆತಂದು ವಿವಿಧ ಶಾಸ್ತ್ರಗಳನ್ನು ನೇರವೇರಿಸಿದರು. ಪೂಜಾರಿಯವರು ಮಾಂಗಲ್ಯ ಧಾರಣೆ ನಡೆಸಿಕೊಟ್ಟರು. ಆರತಕ್ಷತೆ ಸಮಯದಲ್ಲಿ ಗ್ರಾಮಸ್ಥರು ಉಡುಗೊರೆಗಳನ್ನು ಸಹ ನೀಡಿದರು. ಮದುವೆಗೆ ಬಂದಿದ್ದವರಿಗೆ ದೇವಾಲಯದ ಸಮೀಪವೇ ಮುದ್ದೆ ಊಟ ಏರ್ಪಡಿಸಲಾಗಿತ್ತು.

ಮಳೆ ಬಾರದ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಕತ್ತೆಗಳಿಗೆ ಮದುವೆ ಮಾಡಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಕಳೆದ ಐದು ವರ್ಷ ಉತ್ತಮ ಮಳೆಯಾಗಿದ್ದರಿಂದ ಕತ್ತೆ ಮದುವೆ ಮಾಡಿರಲಿಲ್ಲ. ಕತ್ತೆಗಳಿಗೆ ಮದುವೆ ಮಾಡಿ ಊರಿನ ತುಂಬಾ ಮೆರವಣಿಗೆ ಮಾಡಿದ ನಂತರ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದೆ ಎಂದು ಗ್ರಾಮಸ್ಥ ವಸಂತ್ ಸಂತಸ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದ ಮುಖಂಡರಾದ ಪರಮೇಶ್ವರಪ್ಪ, ಚಂದ್ರಪ್ಪ, ಸಣ್ಣಪ್ಪ, ಪೂಜಾರಿ ಚಂದ್ರಪ್ಪ, ನಾಗರಾಜಪ್ಪ, ತಿಪ್ಪೇಶಪ್ಪ, ಜಗದೀಶ್, ರಂಗಪ್ಪ, ಹೇಮಾವತಿ, ಮಂಜುಳಾ, ಕರಿಯಮ್ಮ, ಚಿಕ್ಕಮ್ಮ ಸೇರಿ ಗ್ರಾಮಸ್ಥರೆಲ್ಲಾ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.