ADVERTISEMENT

ಹಿರಿಯೂರು|ಮದ್ಯ ಸಾಗಣೆ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 15:51 IST
Last Updated 4 ಆಗಸ್ಟ್ 2024, 15:51 IST
ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಭಾನುವಾರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ತಪ್ಪಿಸಿಕೊಳ್ಳದಂತೆ ಸುತ್ತುವರಿದಿರುವುದು
ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಭಾನುವಾರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ತಪ್ಪಿಸಿಕೊಳ್ಳದಂತೆ ಸುತ್ತುವರಿದಿರುವುದು   

ಹಿರಿಯೂರು: ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಹಾಡು ಹಗಲೇ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಹಿಳೆಯರು ಮತ್ತು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ಹಿರಿಯೂರಿನ ಮದ್ಯದಂಗಡಿಯಿಂದ ಚೀಲವೊಂದರಲ್ಲಿ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಬೈಕಿನಲ್ಲಿ ತರುತ್ತಿದ್ದ ಶಿವಪುರ ಗ್ರಾಮದ ಚಿದಾನಂದನನ್ನು ಮಹಿಳೆಯರು ತಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಚಿದಾನಂದ ಮಹಿಳೆಯರಿಗೆ ಉಡಾಫೆಯ ಉತ್ತರ ನೀಡಿದಾಗ ಗುಂಪು ಹೆಚ್ಚಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿ, ನಂತರದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ತಡೆಗಟ್ಟುವಂತೆ ಅಬಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೆವು. ತಾಲ್ಲೂಕು ಕಚೇರಿ ಮುಂದೆ ಈಚೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಕೂಡ ಸಲ್ಲಿಸಿದ್ದೆವು. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿತ್ತು. ಅಧಿಕಾರಿಗಳನ್ನು ನಂಬಿದರೆ ಪ್ರಯೋಜನವಿಲ್ಲ ಎಂದು ಮಹಿಳೆಯರು ಮದ್ಯ ಸಾಗಿಸುವವರ ಮೇಲೆ ನಿಗಾ ಇಟ್ಟಿದ್ದೆವು. ಭಾನುವಾರ ಒಬ್ಬರು ಸಿಕ್ಕಿ ಬಿದ್ದಿದ್ದಾರೆ ಎಂದು  ಮಹಿಳೆಯರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಗ್ರಾಮದ ಬಹುತೇಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮನೆಯ ಸಮೀಪದ ಅಂಗಡಿಗಳಲ್ಲೇ ಮದ್ಯ ಸಿಗುವ ಕಾರಣ ಬಹಳಷ್ಟು ಪುರುಷರು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಸುರಿಯುತ್ತಿದ್ದರು. ಕುಟುಂಬದ ನೆಮ್ಮದಿ ಹಾಳಾಗಿತ್ತು. ಈ ಬಾರಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದೇವೆ. ಇನ್ನೊಮ್ಮೆ ಯಾರಾದರೂ ಅಕ್ರಮ ಮದ್ಯ ಮಾರಲು ತಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಸಿದರು.

ಗ್ರಾಮದ ಅಂಜಿನಮ್ಮ, ಲಕ್ಷ್ಮಕ್ಕ, ಲತಮ್ಮ, ಕೆಂಚಮ್ಮ, ಬೃಂದಾ, ಚಂದ್ರಮ್ಮ, ಹನುಮಕ್ಕ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.