ADVERTISEMENT

ಚಿತ್ರದುರ್ಗ: ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರಿಗೆ ಅನ್ಯಾಯ

ಕೂಲಿ, ಸ್ಯಾಂಪಲ್‌, ಕಮಿಷನ್‌ ಹೆಸರಿನಲ್ಲಿ ಹಣ ವಸೂಲಿ, ಬೆಳೆ ಬೆಳೆದವನಿಗೆ ತೀವ್ರ ನಷ್ಟ

ಎಂ.ಎನ್.ಯೋಗೇಶ್‌
Published 25 ನವೆಂಬರ್ 2024, 7:39 IST
Last Updated 25 ನವೆಂಬರ್ 2024, 7:39 IST
ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಲೋಡಿಂಗ್‌ ನಡೆಯುತ್ತಿರುವುದು
ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಲೋಡಿಂಗ್‌ ನಡೆಯುತ್ತಿರುವುದು   

ಚಿತ್ರದುರ್ಗ: ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಶೇಂಗಾ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳ ಕಟಾವು ಆಗಿದ್ದು, ರೈತರು ಅಪಾರ ಪ್ರಮಾಣದ ಉತ್ಪನ್ನಗಳನ್ನು ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾರುಕಟ್ಟೆ (ಎಪಿಎಂಸಿ)ಗಳಿಗೆ ತರುತ್ತಿದ್ದಾರೆ. ಆದರೆ ಮಾರುಕಟ್ಟೆಗಳಲ್ಲಿ ವರ್ತಕರು, ದಲ್ಲಾಳಿಗಳು ವಿವಿಧ ಹಂತಗಳಲ್ಲಿ ಹಣ ವಸೂಲಿ ಮಾಡುತ್ತಿರುವುದರಿಂದ ಕಷ್ಟಪಟ್ಟು ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ ಎಂಬ ಆರೋಪ ಕೇಳಿದಬರುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದ ಪರಿಣಾಮ 1.2 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳದಲ್ಲಿ 5 ಲಕ್ಷ ಟನ್‌, 1.12 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಶೇಂಗಾದಲ್ಲಿ 1.2 ಲಕ್ಷ ಟನ್‌, 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿಯಲ್ಲಿ 8 ಸಾವಿರ ಟನ್‌ ಉತ್ಪನ್ನ ಬಂದಿದೆ.

ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಉತ್ಪನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಎಪಿಎಂಸಿ ಮಾರುಕಟ್ಟೆಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಇದೇ ಸಮಯವನ್ನು ‘ಸುಗ್ಗಿ’ ಎಂದುಕೊಂಡ ವರ್ತಕರು, ದಲ್ಲಾಳಿಗಳು, ಹಮಾಲಿಗಳು ಸ್ಯಾಂಪಲ್‌, ಕೂಲಿ, ಕಮಿಷನ್‌, ಬಡ್ಡಿ ಹೆಸರಿನಲ್ಲಿ ಬಡ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ದೂರುತ್ತಿದ್ದಾರೆ.

ADVERTISEMENT

‘ಎಪಿಎಂಸಿಗಳಲ್ಲಿ ರೈತರನ್ನು ನಿರಂತರವಾಗಿ ಶೋಷಿಸಲಾಗುತ್ತಿದ್ದರೂ ಆಡಳಿತ ಮಂಡಳಿಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ರೈತರಿಗೆ ಮುಂಗಡ ಹಣ ನೀಡಿ ಬಡ್ಡಿ ವಸೂಲಿ ಮಾಡುವುದಲ್ಲದೇ ವಿವಿಧ ಹಂತದಲ್ಲಿ ಹಣ ವಸೂಲಿ ಮಾಡಿ ಮೋಸ ಮಾಡುತ್ತಿದ್ದಾರೆ’ ಎಂದು ದೂರುತ್ತಾರೆ ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಗೆ ಮೆಕ್ಕೆಜೋಳ ತಂದಿದ್ದ ರೈತರೊಬ್ಬರು.

ಖರೀದಿ ಸ್ಯಾಂಪಲ್‌

‘ಮಾರುಕಟ್ಟೆಗೆ ಮಾಲು ತರುತ್ತಿದ್ದಂತೆಯೇ ಹಮಾಲರ ಕೂಲಿ ಹಣಕ್ಕಾಗಿ ಪ್ರತಿ ಚೀಲಕ್ಕೆ (60 ಕೆ.ಜಿ ಚೀಲ) ₹ 6 ಶುಲ್ಕವನ್ನು ವರ್ತಕರು ವಸೂಲಿ ಮಾಡುತ್ತಾರೆ. ಇದನ್ನು ನೀಡಿದ ನಂತರ ನಿಯಮಾನುಸಾರ ಬೇರೆ ಯಾವ ಶುಲ್ಕಗಳನ್ನೂ ಪಡೆಯಬಾರದು. ಹಮಾಲರ ಕೂಲಿ ಹಣ ಕೊಟ್ಟ ನಂತರವೂ ಹಮಾಲರು ಪ್ರತ್ಯೇಕವಾಗಿ ಖರೀದಿ ಸ್ಯಾಂಪಲ್‌ ಪಡೆಯುತ್ತಾರೆ. ಹಮಾಲರು 50 ಚೀಲ ತೂಕ ಮಾಡಿ ಮೂಟೆ ತುಂಬಿದರೆ 60 ಕೆ.ಜಿಯ ಮೆಕ್ಕೆಜೋಳವನ್ನು ರೈತರಿಂದ ಪಡೆಯುತ್ತಾರೆ. ಇದನ್ನು ಹಮಾಲರ ಸ್ಯಾಂಪಲ್‌ ಎಂದು ಕರೆಯಲಾಗುತ್ತದೆ. ಹಮಾಲರಿಗೆ ಮೆಕ್ಕೆಜೋಳ ನೀಡದಿದ್ದರೆ ರೈತರು ತಂದ ಮಾಲನ್ನು ಮುಟ್ಟುವುದಿಲ್ಲ. ಗರಿಷ್ಠ ಪ್ರಮಾಣದ ಮಾಲನ್ನು ಗಾಡಿಯಿಂದ ಕೆಳಗಿಳಿಸಿ, ತೂಕ ಮಾಡಿ, ಚೀಲ ಕಟ್ಟಲು ರೈತರಿಗೆ ಸಾಧ್ಯವಾಗುವುದಿಲ್ಲ. ದೂರದ ಊರುಗಳಿಂದ ಬರುವ ರೈತರಿಗೆ ಗಾಡಿ ಬಾಡಿಗೆ ಕೊಡುವುದೇ ಕಷ್ಟ. ಇನ್ನು ಮಾಲು ಇಳಿಸಿ ತೂಕ ಮಾಡಿ ಚೀಲ ಕಟ್ಟಿ ಲೋಡ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಉತ್ಪನ್ನವನ್ನು ಹಮಾಲರಿಗೆ ನೀಡಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

‘ಗಾಡಿಯಿಂದ ಮಾಲು ಕೆಳಗಿಳಿಸಿ, ತೂಕ ಮಾಡಿ, ಚೀಲ ಕಟ್ಟುವಾಗ ಸ್ವಲ್ಪ ಪ್ರಮಾಣದ ಧಾನ್ಯ ನೆಲಕ್ಕೆ ಬಿದ್ದು ಹಾಳಾಗುತ್ತದೆ. ಅದನ್ನೂ ರೈತರು ಮುಟ್ಟುವಂತಿಲ್ಲ, ಹಮಲರು ಅದನ್ನೂ ಬಾಚಿಕೊಳ್ಳುತ್ತಾರೆ. ಬೆಳೆದವರು ನಾವು, ಮಾಲು ಬಾಚಿಕೊಳ್ಳುವವರು ಹಮಾಲರು’ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕಮಿಷನ್‌ ಅನ್ಯಾಯ

ಕೃಷಿ ಉತ್ಪನ್ನ ತಂದು ಹಾಕಿದ ನಂತರ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಖರೀದಿ ಮಾಡುವ ವರ್ತಕರು ಬೆಲೆಯ ಮೇಲೆ ₹ 2ರಿಂದ ₹ 4ರವರೆಗೆ ಕಮಿಷನ್‌ ಪಡೆಯುತ್ತಾರೆ. ಕೆಲ ರೈತರು ವರ್ತಕರಿಂದ ಮುಂಗಡ ಸಾಲ ಪಡೆದು ಸಿಕ್ಕಿ ಹಾಕಿಕೊಂಡಿರುತ್ತಾರೆ. ಕಮಿಷನ್‌ ಪಡೆಯುವ ಜೊತೆಗೆ ಬಡ್ಡಿಯನ್ನೂ ಕಡಿದು ಹಣ ನೀಡುತ್ತಾರೆ. ಬಡ್ಡಿಯ ಮೊತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡಟೆಯುತ್ತಿದ್ದು ರೈತರು ತೀವ್ರ ನಷ್ಟ ಅನುಭವಿವಂತಾಗಿದೆ ಎಂದರು.

‘ಲೆಕ್ಕಾಚಾರವೇ ಇಲ್ಲದಂತೆ ಬಡ್ಡಿ ಕಡಿತ ಮಾಡಿಕೊಳ್ಳುತ್ತಾರೆ. ಮೊದಲೇ ಸಾಲ ಮಾಡಿದ ತಪ್ಪಿಗೆ ಮಾಲು ತಂದು ಹಾಕಿ ಬರಿಗೈಯಲ್ಲಿ ಮನೆಗೆ ತೆರಳಬೇಕಾದ ಸ್ಥಿತಿಯೂ ಬರುತ್ತದೆ’ ಎಂದು ರೈತ ಮುಖಂಡ ಮಲ್ಲಿಕಾರ್ಜುನ್‌ ಒತ್ತಾಯಿಸಿದರು.

ಚೀಲದಲ್ಲೂ ಅನ್ಯಾಯ

ಅಪಾರ ಪ್ರಮಾಣದ ಉತ್ಪನ್ನ ಬೆಳೆದಾಗ ರೈತರು ಚೀಲಗಳ ಕೊರತೆ ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಮಾಲು ಸರಬರಾಜು ಮಾಡುವ ಷರತ್ತಿನೊಂದಿಗೆ ಚೀಲಗಳನ್ನು ವರ್ತಕರಿಂದ ಪಡೆಯುತ್ತಾರೆ. ನ್ಯಾಯಯುತವಾಗಿ ಚೀಲಗಳನ್ನು ಉಚಿತವಾಗಿ ನೀಡಬೇಕು. ಆದರೆ, ವರ್ತಕರು ಚೀಲಕ್ಕೂ ಹಣ ವಸೂಲಿ ಮಾಡುತ್ತಿದ್ದು, ರೈತರನ್ನು ಕಂಗೆಡಿಸಿದೆ.

‘ಮಳೆ, ವಾಹನಗಳ ತೊಂದರೆಯುಂಟಾಗಿ ಮಾಲು ಪೂರೈಸಲು ತಡವಾದರೆ ಪ್ರತಿ ಚೀಲಕ್ಕೆ ದಿನಕ್ಕಿಷ್ಟು ಎಂಬಂತೆ ಬಾಡಿಗೆ ತೆರಬೇಕು. ಇದಕ್ಕಿಂತ ಅನ್ಯಾಯ ಬೇಕಾ?’ ಎಂದು ರೈತರೊಬ್ಬರು ಪ್ರಶ್ನಿಸಿದರು.

ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಹತ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.