ADVERTISEMENT

ಚಿತ್ರದುರ್ಗ: ತೀವ್ರಗೊಂಡ ಬಿಡಾಡಿ ದನಗಳ ಹಾವಳಿ

ಎಂ.ಎನ್.ಯೋಗೇಶ್‌
Published 11 ಜುಲೈ 2024, 5:33 IST
Last Updated 11 ಜುಲೈ 2024, 5:33 IST
ಬೆಂಗಳೂರು– ದಾವಣಗೆರೆ ಮುಖ್ಯರಸ್ತೆ ಮದಕರಿನಾಯಕ ವೃತ್ತದ ಬಳಿ ಬೀಡಾಡಿ ದನಗಳು ಬೀಡುಬಿಟ್ಟಿರುವ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗಿರುವುದು
ಬೆಂಗಳೂರು– ದಾವಣಗೆರೆ ಮುಖ್ಯರಸ್ತೆ ಮದಕರಿನಾಯಕ ವೃತ್ತದ ಬಳಿ ಬೀಡಾಡಿ ದನಗಳು ಬೀಡುಬಿಟ್ಟಿರುವ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗಿರುವುದು   

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ವೃತ್ತ, ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರಗೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆಯಲ್ಲಿ ಗುಂಪುಗುಂಪಾಗಿ ದನಗಳು ನಿಲ್ಲುವ ಕಾರಣ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಯಾವುದೇ ಮುಖ್ಯರಸ್ತೆಯಲ್ಲಿ ನಗರ ಪ್ರವೇಶಿಸಿದರೂ ಮೊದಲು ಬಿಡಾಡಿ ದನಗಳೇ ಸ್ವಾಗತ ಕೋರುತ್ತವೆ. ಹಸುಗಳನ್ನು ಸಾಕಣೆ ಮಾಡಿರುವ ಮಾಲೀಕರು ತಮ್ಮ ಜಾನುವಾರುಗಳನ್ನು ಬೇಕಾಬಿಟ್ಟಿಯಾಗಿ ಹೊರಗೆ ಬಿಟ್ಟಿರುವ ಕಾರಣ ಅವು ಮುಖ್ಯರಸ್ತೆಯಲ್ಲಿ ಜನರಿಗೆ ತೊಂದರೆ ನೀಡುತ್ತಿವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ರಸ್ತೆಯಲ್ಲೇ ಬೀಡು ಬಿಟ್ಟಿರುತ್ತವೆ. ಸಂಜೆಯ ವೇಳೆಗೆ ಮನೆಗೆ ತೆರಳುತ್ತವೆ.

ಹಸುಗಳ ಮಾಲೀಕರು ಹಾಲು ಕರೆದ ನಂತರ ಮೇಯಲು ಹೊರಗೆ ಬಿಡುತ್ತಾರೆ. ಕೆಲ ದನಗಳಿಗೆ ಹಗ್ಗ, ಮೂಗುದಾರ ಏನೂ ಇರುವುದಿಲ್ಲ. ಕ್ರೀಡಾಂಗಣ, ಉದ್ಯಾನಗಳಲ್ಲಿ ಮೇಯುವ ದನಗಳೂ ನಂತರ ದಣಿವಾರಿಸಿಕೊಳ್ಳಲು ರಸ್ತೆಯಲ್ಲೇ ಮಲಗುತ್ತವೆ. ವಾಹನಗಳ ಶಬ್ದಕ್ಕೂ ಅವು ಬೆದರುವುದಿಲ್ಲ, ನಿಂತಲ್ಲೇ ನಿಲ್ಲುತ್ತವೆ, ಮಲಗಿದ್ದಲ್ಲೇ ಮಲಗುತ್ತವೆ. ವಾಹನ ಸವಾರರೇ ಅವುಗಳನ್ನು ಬಳಸಿಕೊಂಡು ಮುಂದೆ ತೆರಳಬೇಕಾಗಿದೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

ADVERTISEMENT

ಸದಾ ಜನರಿಂದ ತುಂಬಿರುವ ಸಂತೆ ಹೊಂಡ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಬಿಸಾಡುವ ಹಣ್ಣು, ತರಕಾರಿ, ಸೊಪ್ಪು ತಿನ್ನಲು ಅಪಾರ ಸಂಖ್ಯೆಯ ದನಗಳು ಅಲ್ಲಿಗೆ ಬರುತ್ತವೆ. ಮೆದೇಹಳ್ಳಿ, ಹೊಳಲ್ಕೆರೆ, ಬಸ್‌ನಿಲ್ದಾಣ, ಕೋಟೆ ರಸ್ತೆ ಒಂದೆಡೆ ಸೇರುವ ಆ ಹೃದಯ ಭಾಗದಲ್ಲಿ ವಾಹನಗಳ ಓಡಾಟ ಯಾವಾಗಲೂ ಹೆಚ್ಚಿರುತ್ತದೆ. ಟ್ರಾಫಿಕ್‌ ನಿರ್ವಹಣೆ ಕಾರ್ಯ ಪೊಲೀಸರಿಗೆ ಸವಾಲಿನ ವಿಷಯವಾಗಿದೆ.

ಈ ಜನನಿಬಿಡ ಸ್ಥಳದಲ್ಲಿ ಬಿಡಾಡಿ ದನಗಳು ಕಿರಿಕಿರಿ ಉಂಟು ಮಾಡುತ್ತಿವೆ. ಪೊಲೀಸರು ಟ್ರಾಫಿಕ್‌ ನಿರ್ವಹಣೆ ನಿಲ್ಲಿಸಿ ದನಗಳು ಓಡಿಸುವ ಕೆಲಸವನ್ನೂ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಮುಖ್ಯರಸ್ತೆಯಲ್ಲೂ ದನಗಳ ಹಾವಳಿ ಇದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬಿ.ಡಿ. ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಹೆಚ್ಚಾಗಿ ಸಂಚರಿಸುತ್ತವೆ, ದನಗಳ ಹಾವಳಿಯಿಂದ ಬಸ್‌ ಸಂಚಾರಕ್ಕೂ ತೊಂದರೆಯುಂಟಾಗಿದೆ.

ನಗರದ ಕೆಲವೆಡೆ ರಾಷ್ಟ್ರೀಯ ಹೆದ್ದಾರಿಯ ಬೇಲಿ ಮುರಿದಿದ್ದು, ಅಲ್ಲಿ ದನಗಳು ಹೆದ್ದಾರಿಗೂ ತೆರಳುತ್ತಿವೆ. ಡಿವೈಡರ್‌ನಲ್ಲಿ ಬೆಳೆದಿರುವ ಹುಲ್ಲು, ಗಿಡಗಳನ್ನು ತಿನ್ನುತ್ತಾ ನಿಲ್ಲುವ ದನಗಳು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಜೊತೆಗೆ ಮದಕರಿ ನಾಯಕ ವೃತ್ತ, ರೈಲ್ವೆ ನಿಲ್ದಾಣ, ಕನಕ ವೃತ್ತ ಮುಂತಾದೆಡೆ ಬಿಡಾಡಿ ದನಗಳ ಹಾವಳಿ ತೀವ್ರಗೊಂಡಿದೆ.

ಕೆಲವು ದನಗಳು ಕೊಬ್ಬಿದ್ದು, ಸಾರ್ವಜನಿಕರಿಗೆ ಒದ್ದು, ಗುದ್ದಿದ ಪ್ರಸಂಗಗಳೂ ನಡೆದಿವೆ. ಈಚೆಗೆ ದನವೊಂದು ಬ್ಯಾಂಕ್‌ ಎಟಿಎಂಗೆ ನುಗ್ಗಿ ಅಲ್ಲಿಯ ಯಂತ್ರ, ಗಾಜುಗಳಿಗೆ ಗುದ್ದಿ ಹಾಳು ಮಾಡಿತ್ತು. ಗೂಳಿಯೊಂದು ಬಿ.ಡಿ. ರಸ್ತೆಯಲ್ಲಿ ಹಲವರಿಗೆ ಗುದ್ದಿ ಗಾಯಗೊಳಿಸಿತ್ತು. ಮತ್ತೊಂದು ದನ ಸಂತೆಹೊಂಡ ರಸ್ತೆಗೆ ನುಗ್ಗಿ ತರಕಾರಿ, ಹಣ್ಣಿನ ಅಂಗಡಿಗಳನ್ನು ಉರುಳಿಸಿತ್ತು. ಇಂತಹ ಘಟನೆಗಳು ನಡೆಯುತ್ತಿದ್ದರೂ ದನಗಳ ನಿಯಂತ್ರಣಕ್ಕೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಬೀದಿಯಲ್ಲಿ ಓಡಾಡುವ ದನಗಳು ರೈತರಿಗೆ ಸೇರಿಲ್ಲ. ನಗರದಲ್ಲಿ ಹಾಲಿಗಾಗಿ ಸಾಕಣೆ ಮಾಡುವ ಮಾಲೀಕರು ಹಾಲು ಕರೆದುಕೊಂಡ ನಂತರ ಬೀದಿಗೆ ಬಿಡುತ್ತಾರೆ. ನಂತರ ಅವುಗಳ ಮೇಲೆ ನಿಗಾ ಇಟ್ಟಿರುತ್ತಾರೆ. ಸಮೀಪದಲ್ಲೇ ನಿಂತು ನೋಡಿಕೊಳ್ಳುತ್ತಾರೆ. ಅವುಗಳಿಂದ ಜನರಿಗೆ ತೊಂದರೆಯಾಗುತ್ತಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಗರಸಭೆ ಅಧಿಕಾರಿಗಳು ಅವುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಬೇಕು’ ಎಂದು ರೈತ ಸಂಘದ ಮುಖಂಡ ಸಿ.ಸೂರಪ್ಪ ಹೇಳಿದರು.

ಗೋಶಾಲೆಯಲ್ಲಿ ಜಾಗವಿಲ್ಲದ ಕಾರಣ ದನಗಳನ್ನು ಎಲ್ಲಿಗೆ ಬಿಡಬೇಕು ಎಂಬ ಪ್ರಶ್ನೆ ಇದೆ. ರೈತರು ಸಾಕಣೆಗೆ ಮುಂದೆ ಬಂದರೆ ಅವುಗಳನ್ನು ಹಿಡಿದು ಕೊಡಲಾಗುವುದು. ಆಸಕ್ತರು ನಗರಸಭೆ ಕಚೇರಿ ಸಂಪರ್ಕಿಸಬಹುದು
ಎಂ.ರೇಣುಕಾ ನಗರಸಭೆ ಪೌರಾಯುಕ್ತೆ

ಕಾಯ್ದೆ ಜಾರಿ; ಬೀದಿಯಲ್ಲಿ ಗಂಡು ಕರುಗಳು

ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಜಾನುವಾರುಗಳನ್ನು ಖಸಾಯಿಖಾನೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗಂಡುಕರುಗಳು ಮಾಲೀಕರಿಗೆ ಬೇಡವಾಗಿದ್ದು ಅವು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

‘ಚಿತ್ರದುರ್ಗ ವ್ಯಾಪ್ತಿಯಲ್ಲಿ 1 ಸರ್ಕಾರಿ 2 ಖಾಸಗಿ ಗೋಶಾಲೆಗಳಿವೆ. ಅಲ್ಲಿ ಜಾನುವಾರು ಪೂರ್ಣ ತುಂಬಿರುವ ಕಾರಣ ಅವುಗಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಿಲ್ಲ. ಬೀದಿಯಲ್ಲಿ ದನಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕು’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಎನ್‌.ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.