ADVERTISEMENT

ಪರಶುರಾಂಪುರ | ಜೆಜೆಎಂ; ಬೇಕಾಬಿಟ್ಟಿ ಅಗೆತ, ಆಕ್ರೋಶ

ಮಳೆಯ ನಂತರ ಓಡಾಡಲು ತೀವ್ರ ತೊಂದರೆ, ಹಿಡಿಶಾಪ ಹಾಕುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 7:51 IST
Last Updated 30 ಜೂನ್ 2024, 7:51 IST
ಪರಶುರಾಂಪುರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಜಾಗದಲ್ಲಿ ಗುಂಡಿ ಬಿದ್ದಿರುವುದು
ಪರಶುರಾಂಪುರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಜಾಗದಲ್ಲಿ ಗುಂಡಿ ಬಿದ್ದಿರುವುದು   

ಪರಶುರಾಂಪುರ: ಕಳೆದ 6 ತಿಂಗಳ ಹಿಂದೆ ಪ್ರಾರಂಭವಾದ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು, ಎಲ್ಲೆಂದರಲ್ಲಿ ಅಗೆದು ಹಾಗೆಯೇ ಬಿಟ್ಟಿರುವ ಕಾರಣ ಸಾರ್ವಜನಿಕರು ಹೈರಾಣಾಗಿದ್ದಾರೆ. ಸಾರ್ವಜನಿಕರು ಇಲಾಖೆ ಮತ್ತು ಗುತ್ತಿಗೆದಾರರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿರುವ 8 ವಾರ್ಡ್‌ಗಳ ಪೈಕಿ ಕೇವಲ 1 ವಾರ್ಡ್‌ನಲ್ಲಿ ಮಾತ್ರ ಈವರಗೆ ಕಾಮಗಾರಿ ಪೂರ್ಣಗೊಂಡಿದ್ದು ಇನ್ನುಳಿದ ವಾರ್ಡ್‌ಗಳಲ್ಲಿ ಗುಂಡಿ ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಮಕ್ಕಳು, ವಯೋವೃದ್ಧರಿಗೆ ಹಾಗೂ ವಾಹನ ಸಾವರರಿಗೆ ಓಡಾಡುವುದು ಸಾವಲಿನ ಕೆಲಸವಾಗಿದೆ. ಈಗಾಗಲೇ ಅನೇಕ ಜನರು ಬಿದ್ದು ಗಾಯಗೊಂಡಿರುವ ಘಟನೆಗಳು ಸಾಮಾನ್ಯವಾಗಿವೆ. ಅದರೂ ಎಚ್ಚೆತ್ತುಕೊಳ್ಳದ ಗುತ್ತಿಗೆದಾರರು ಅಮೆಗತಿಯಲ್ಲಿ ಕಾಮಗಾರಿ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ಈಚೆಗೆ ಸುರಿದ ಮಳೆಯಿಂದ ಗುಂಡಿಯಲ್ಲಿ ಮತ್ತಷ್ಟು ತಗ್ಗು ಬಿದ್ದಿದ್ದು ಓಡಾಡಲು ಜನರು ತೀವ್ರ ಪರದಾಡುತ್ತಿದ್ದಾರೆ. ಗುತ್ತಿಗೆದಾರರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ‘ಕೆಲಸಗಾರರ ಕೊರತೆಯಿದೆ ಮಳೆ ಬರುತ್ತಿದೆ ಹಾಗಾಗಿ ಕಾಮಗಾರಿ ಸ್ಥಗಿಗೊಂಡಿದೆ’ ಎಂಬ ಸಬೂಬು ಹೇಳುತ್ತಾರೆ. ಹಾಗಾಗಿ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಓಡಾಡಲೂ ಅನುವು ಮಾಡಿಕೊಡಬೇಕು. ಇಲ್ಲವಾದರೆ ಗುತ್ತಿಗೆದಾರರನ್ನು ಬದಲಿಸಿ ಬೇರೆಯವರಿಗೆ ಕಾಮಗಾರಿಯನ್ನು ಹಸ್ತಾಂತರಿಸಬೇಕು ಎಂಬುದು ಇಲ್ಲಿನ ನಿವಾಸಿಗಳಾದ ನಾಗರಾಜ, ವೆಂಕಟೇಶ, ರಾಜಣ್ಣ, ಅಂಜನೇಯ ಆಗ್ರಹಿಸುತ್ತಾರೆ.

ADVERTISEMENT

‘ತೆಗೆದಿರುವ ಗುಂಡಿಗಳನ್ನು ಮುಚ್ಚಬೇಕು, ಜೊತೆಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ವಾರ್ಡ್‌ ಜನರಿಗೆ ಉತ್ತರ ಹೇಳಿ ಸಾಕಾಗಿ ಹೋಗಿದೆ’ ಎಂದು ಗ್ರಾಮ ಪಂಚಾಯಿಸಿ ಸದಸ್ಯ ನಾಗಭೂಷಣ್ ಬೇಸರ ವ್ಯಕ್ತಪಡಿಸುತ್ತಾರೆ.

‘ಈಗಾಗಲೇ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದೇವೆ. ಇದೇ ರೀತಿ ವಿಳಂಬವಾದರೆ ಗುತ್ತಿಗೆದಾರನ ಮೇಲೆ ಇಲಾಖೆಯಿಂದ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು  ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ದಯಾನಂದಸ್ವಾಮಿ ಎಚ್ಚರಿಕೆ ನೀಡಿದರು.

ರಸ್ತೆಯಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚಿಲ್ಲ ಬಿದ್ದು ಗಾಯಗೊಳ್ಳುತ್ತಿರುವ ಮಕ್ಕಳು, ವೃದ್ಧರು ನೋಟಿಸ್‌ ಕೊಟ್ಟರೂ ಕಾಮಗಾರಿ ಪೂರ್ಣಗೊಂಡಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.