ಚಿತ್ರದುರ್ಗ: ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೂ ಘೋಷಣೆಯಾಗಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ.
ಜೆಡಿಎಸ್ ಜೊತೆಗಿನ ಮೈತ್ರಿಯ ಸೀಟು ಹಂಚಿಕೆಯ ಸೂತ್ರದಡಿ 25 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. 24 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದ ಬಿಜೆಪಿ, ಚಿತ್ರದುರ್ಗ ಮೀಸಲು ಕ್ಷೇತ್ರವನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು. ನಾಮಪತ್ರ ಸಲ್ಲಿಕೆಯ ಮುನ್ನಾ ದಿನ ಹುರಿಯಾಳು ಅಖೈರುಗೊಳಿಸಿದೆ. ಭೋವಿ ಸಮುದಾಯದ ಬಿಗಿಪಟ್ಟಿಗೆ ಮಣಿಯದ ಬಿಜೆಪಿ ಹೈಕಮಾಂಡ್, ಎಡಗೈ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಕ್ಷೇತ್ರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದರು. ನಾರಾಯಣಸ್ವಾಮಿ ಮತ್ತೊಮ್ಮೆ ಸ್ಪರ್ಧಿಸಲು ಆಸಕ್ತಿ ತೋರದಿರುವುದರಿಂದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಸಕ್ರಿಯ ರಾಜಕಾರಣದ ಕುರಿತು ಅವರು ತೋರಿದ ನಿರಾಸಕ್ತಿಯ ಕಾರಣಕ್ಕೆ ಅನೇಕರು ಟಿಕೆಟ್ ಕೋರಿ ಬಿಜೆಪಿ ಬಾಗಿಲು ಬಡಿದಿದ್ದರು. ಮಾಜಿ ಸಂಸದ ಜನಾರ್ದನಸ್ವಾಮಿ ಹಾಗೂ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಕೂಡ ಟಿಕೆಟ್ ತರುವ ಹುಮ್ಮಸ್ಸಿನಲ್ಲಿದ್ದರು. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಎಡಗೈ ಸಮುದಾಯಕ್ಕೆ ಮಣೆ ಹಾಕಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿಯ ಬಗೆಗೆ ಮತದಾರರಲ್ಲಿ ಕುತೂಹಲ ಹೆಚ್ಚಾಗಿತ್ತು. ಮಾರ್ಚ್ 24ರಂದು ಪ್ರಕಟಿಸಿದ ಪಟ್ಟಿಯಲ್ಲಿಯೂ ಮೀಸಲು ಕ್ಷೇತ್ರಕ್ಕೆ ಹುರಿಯಾಳು ಅಂತಿಮಗೊಳ್ಳದಿರುವುದು ರಾಜ್ಯದ ಗಮನ ಸೆಳೆದಿತ್ತು. ಬುಧವಾರ ಅಭ್ಯರ್ಥಿ ಘೋಷಣೆಯಾಗಿದ್ದು, ಒಂದು ವಾರದಿಂದ ಮೂಡಿದ್ದ ಗೊಂದಲಕ್ಕೆ ತೆರೆಬಿದ್ದಿದೆ. ಚುನಾವಣಾ ಅಖಾಡದ ಚಿತ್ರಣದ ಸ್ಪಷ್ಟವಾಗಿದ್ದು, ‘ಕೈ’ ಮತ್ತು ‘ಕಮಲ’ದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
ಮೂಲತಃ ಆನೇಕಲ್‌ನ ನಾರಾಯಣಸ್ವಾಮಿ 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾಗಿದ್ದರು. ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ನಾರಾಯಣಸ್ವಾಮಿ ಕೇಂದ್ರ ಸಚಿವರಾಗಿದ್ದು ಅಚ್ಚರಿ ಮೂಡಿಸಿತ್ತು. ಪ್ರಸಕ್ತ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕೆ ಇಳಿಯುವ ಬಗ್ಗೆ ಅವರು ಉತ್ಸುಕತೆ ತೋರಲಿಲ್ಲ. ಅವರ ಬಗೆಗೆ ಬಿಜೆಪಿ ಹೈಕಮಾಂಡ್‌ಗೂ ಒಲವು ಇರಲಿಲ್ಲ.
ನಾರಾಯಣಸ್ವಾಮಿ ಅವರ ಹೇಳಿಕೆ ಮತ್ತು ನಡವಳಿಕೆಗಳು ಹಲವು ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆಯುವಂತೆ ಮಾಡಿದ್ದವು. ಬಿಜೆಪಿ ಟಿಕೆಟ್ ಕೋರಿ 8 ಜನರು ಬಿಜೆಪಿಗೆ ಅರ್ಜಿ ಸಲ್ಲಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಎಂ.ಕೆ.ಶ್ರೀರಂಗಯ್ಯ ಸೇರಿ ಅನೇಕರು ಟಿಕೆಟ್‌ಗೆ ನೀಡುವಂತೆ ಬಿಜೆಪಿ ಹೈಕಮಾಂಡ್ ಬಾಗಿಲು ಬಡಿದಿದ್ದರು. ಈ ನಡುವೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೆಸರು ಕೂಡ ಕೇಳಿಬಂದಿತ್ತು. ಅಂತಿಮವಾಗಿ ಗೋವಿಂದ ಕಾರಜೋಳ ಅವರ ಸ್ಪರ್ಧೆಗೆ ಬಿಜೆಪಿ ನಾಯಕರು ಹಸಿರು ನಿಶಾನೆ ತೋರಿದ್ದಾರೆ.
‘ಎಡಗೈ’ ಸಮುದಾಯಕ್ಕೆ ಆದ್ಯತೆ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾದಿಗ ಸಮುದಾಯದ ಕೈಜಾರಿ ಹೋಗದಂತೆ ತೆರೆಮರೆಯ ಪ್ರಯತ್ನಗಳು ನಡೆದಿದ್ದವು. ಕ್ಷೇತ್ರದ ಟಿಕೆಟ್‌ಗೆ ಭೋವಿ ಮತ್ತು ಎಡಗೈ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದರು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಜ್ಯದ ಐದು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಾದರೂ ಭೋವಿಗೆ ನೀಡುವಂತೆ ಸಮುದಾಯ ಪಟ್ಟು ಹಿಡಿದಿತ್ತು. ನಾರಾಯಣಸ್ವಾಮಿ ಅವರು ಸ್ಪರ್ಧೆಗೆ ಉತ್ಸುಕತೆ ತೋರದಿರುವುದರಿಂದ ಭೋವಿ ಸಮುದಾಯದ ‘ಸ್ಥಳೀಯರಿಗೆ’ ಟಿಕೆಟ್ ನೀಡಲು ರಾಜ್ಯ ನಾಯಕರು ಒಲವು ತೋರಿದ್ದರು. ಪಟ್ಟು ಬಿಡದ ಎಡಗೈ ಸಮುದಾಯ ಗೋವಿಂದ ಕಾರಜೋಳ ಅವರನ್ನು ಅಖಾಡಕ್ಕೆ ಇಳಿಸಿತು.
ಶಾಸಕರಾಗಿ ಐದು ಬಾರಿ ಆಯ್ಕೆ
ಗೋವಿಂದ ಎಂ.ಕಾರಜೋಳ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1994ರಲ್ಲಿ ವಿಧಾನಸಭಾ ಚುನಾವಣೆಗೆ ಪದಾರ್ಪಣೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು, 2023ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸದಸ್ಯರಾಗಿರುವ ಕಾರಜೋಳ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.