ADVERTISEMENT

ಚಿತ್ರದುರ್ಗ: ಸ್ಮಾರಕಗಳಿಗೆ ಸಿಗುವುದೇ ರಾಷ್ಟ್ರ ಮಾನ್ಯತೆ?

ಆನ್‌ಲೈನ್‌ ಮತದಾನದ ಮೂಲಕ ತಾಣಗಳ ಆಯ್ಕೆ, ಪ್ರವಾಸೋದ್ಯಮ ಇಲಾಖೆಯಿಂದ ಅವಕಾಶ

ಎಂ.ಎನ್.ಯೋಗೇಶ್‌
Published 11 ಆಗಸ್ಟ್ 2024, 6:25 IST
Last Updated 11 ಆಗಸ್ಟ್ 2024, 6:25 IST
ಚಿತ್ರದುರ್ಗದ ಕಲ್ಲಿನ ಕೋಟೆಯ ಗಾಳಿಗೋಪುರದ ನೋಟ (ಸಂಗ್ರಹ ಚಿತ್ರ) 
ಚಿತ್ರದುರ್ಗದ ಕಲ್ಲಿನ ಕೋಟೆಯ ಗಾಳಿಗೋಪುರದ ನೋಟ (ಸಂಗ್ರಹ ಚಿತ್ರ)     

ಚಿತ್ರದುರ್ಗ: ಪ್ರವಾಸಿ ಸ್ಥಳಗಳ ರಾಷ್ಟ್ರ ಮಾನ್ಯತೆಗಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಹೊಸ ಕಾರ್ಯಕ್ರಮ ರೂಪಿಸಿದ್ದು ಆನ್‌ಲೈನ್‌ ಮತದಾನದ ಮೂಲಕ ತಾಣಗಳ ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಿಂದ ದುರ್ಗದ ಕೋಟೆ ಸೇರಿದಂತೆ ಹಲವು ತಾಣಗಳಿಗೆ ಮತ ಹಾಕುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕರೆ ಕೊಟ್ಟಿದ್ದಾರೆ.

ಪ್ರವಾಸಿಗರ ಕಣ್ಣಲ್ಲಿ ಚಿತ್ರದುರ್ಗದ ಕೋಟೆ ವಿಶ್ವಮಾನ್ಯತೆ ಪಡೆದಿದೆ. ಶಾತವಾಹನರಿಂದ ನಾಯಕ ಅರಸರವರೆಗೂ ದುರ್ಗದ ಮಣ್ಣಿನ ಪರಂಪರೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆದರೆ ಇಲ್ಲಿಯವರೆಗೂ ದುರ್ಗದ ಕೋಟೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಜೊತೆಗೆ ‘ರಾಷ್ಟ್ರೀಯ ಆದ್ಯತಾ ಪ್ರವಾಸಿ ತಾಣ’ ಎಂಬ ಮಾನ್ಯತೆಯೂ ಕೋಟೆಗೆ ಸಿಕ್ಕಿಲ್ಲ. ‘ರಾಜ್ಯ ಆದ್ಯತಾ ಪ್ರವಾಸಿ ತಾಣ’ ವೆಂಬ ಮಾನ್ಯತೆ ಮಾತ್ರ ಸಿಕ್ಕಿದೆ.

ರಾಷ್ಟ್ರೀಯ ಆದ್ಯತಾ ಪ್ರವಾಸಿ ತಾಣವೆಂದು ಗುರುತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆನ್‌ಲೈನ್‌ ಮೂಲಕ ಹೆಚ್ಚಿನ ಜನರು ಮತದಾನ ಮಾಡುವಂತೆ ಕೋರಲಾಗಿದೆ. ಚಿತ್ರದುರ್ಗ ಕೋಟೆಯ ಜೊತೆಗೆ ಉಚ್ಚಂಗಿ ಯಲ್ಲಮ್ಮ ದೇವಾಲಯ, ಚಂದ್ರವಳ್ಳಿ ಗುಹೆ, ಆಡುಮಲ್ಲೇಶ್ವರ ಮೃಗಾಲಯ, ಜೋಗಿಮಟ್ಟಿ, ವಾಣಿ ವಿಲಾಸ ಸಾಗರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಹಾಲುರಾಮೇಶ್ವರ, ಜಾನಕಲ್‌, ದೊಡ್ಡರಂಗನಾಥಸ್ವಾಮಿ ದೇವಾಲಯದ ಆಯ್ಕೆಗೆ ಅವಕಾಶ ನೀಡಲಾಗಿದೆ.

ADVERTISEMENT

ಮತದಾನ ಮಾಡುವುದು ಹೇಗೆ?:

ರಾಷ್ಟ್ರೀಯ ಆದ್ಯತಾ ತಾಣ ಎಂದು ಗುರುತಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ‘ದೇಖೋ ಅಪ್ನಾ ದೇಶ್‌ ಪೀಪಲ್ಸ್‌ ಚಾಯ್ಸ್‌– 2024’ ಕಾರ್ಯಕ್ರಮ ರೂಪಿಸಿದೆ. ಇದರ ಅಡಿ https://innovateindia.mygov.in/dekho&apna&desh ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಮತದಾನ ಮಾಡಬಹುದಾಗಿದೆ.

ಸಾರ್ವಜನಿಕರು ಮೊದಲು ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕು. ಒಟಿಪಿ ಸಂಖ್ಯೆಯ ಮೂಲಕ ಜಾಲತಾಣಕ್ಕೆ ಪ್ರವೇಶ ಪಡೆಯಬೇಕು. ವೆಬ್‌ಸೈಟ್‌ನಲ್ಲಿ ವಿವಿಧ ವಲಯಗಳು ತೆರೆದುಕೊಳ್ಳಲಿದ್ದು, ಜನರು ತಮ್ಮಿಷ್ಟದ ತಾಣಗಳನ್ನು ಗುರುತಿಸಬಹುದು. ಸಂಸ್ಕೃತಿ ಮತ್ತು ಪರಂಪರೆ, ವನ್ಯಜೀವಿ ಮತ್ತು ಪ್ರಕೃತಿ, ಸಾಹಸ, ಧಾರ್ಮಿಕ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಂಸ್ಕೃತಿ ಪರಂಪರೆ ವಿಭಾಗದಲ್ಲಿ ಚಿತ್ರದುರ್ಗದ ಕೋಟೆ, ಚಂದ್ರವಳ್ಳಿ ಗುಹೆ ತೆರೆದುಕೊಳ್ಳಲಿದ್ದು ಜನರು ಅಲ್ಲಿ ತಮ್ಮ ಮತದಾನ ಮಾಡಬಹುದು. ಸ್ಮಾರಕದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕುರಿತು ಮತದಾನದ ಮೂಲಕ ಮಾಹಿತಿ ನೀಡಬಹುದು. ಧಾರ್ಮಿಕ ವಿಭಾಗದಲ್ಲಿ ಹಾಲುರಾಮೇಶ್ವರ, ಜಾನಕಲ್‌, ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಾಲಯಗಳಿಗೆ ಮತದಾನ ಮಾಡಬಹುದು. ಪರಿಸರ ವಿಭಾಗದಲ್ಲಿ ವಾಣಿವಿಲಾಸ, ಜೋಗಿಮಟ್ಟಿ ತಾಣಗಳಿಗೆ ಮತದಾನ ಮಾಡಬಹುದು. 

‘ಧಾರ್ಮಿಕ ವಿಭಾಗದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ ಬಿಟ್ಟು ಹೋಗಿದ್ದು ಮತದಾರರು ‘ಇತರ ವಲಯ’ದ ಆಯ್ಕೆ ತೆರೆದು ತಿಪ್ಪೇರುದ್ರಸ್ವಾಮಿ ದೇವಾಲಯವನ್ನು ಆಯ್ಕೆ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಗಳ ತಾಣವನ್ನು ಗುರುತಿಸಲು ಜನರಿಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರಸಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಚ್‌.ಶಶಿಕುಮಾರ್‌ ಕೋರಿದರು.

ಸಂಸದ ಶಾಸಕರಿಂದ ಮತದಾನ

ಸ್ಮಾರಕಗಳ ರಾಷ್ಟ್ರೀಯ ಮಾನ್ಯತೆಗಾಗಿನ ಆನ್‌ಲೈನ್‌ ಮತದಾನ ಸೆ.15ರವರೆಗೂ ನಡೆಯಲಿದೆ. ಈಗಾಗಲೇ ಸಂಸದ ಗೋವಿಂದ ಕಾರಜೋಳ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಪ್ರತಿಯೊಬ್ಬರಿಗೂ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಪ್ರಮಾಣಪತ್ರ ದೊರೆಯಲಿದೆ. ಮತದಾನ ಮಾಡುವಂತೆ ಜನರಿಗೆ ಪ್ರೇರಣೆ ನೀಡಲು ಪ್ರವಾಸೋದ್ಯಮ ಇಲಾಖೆ ವಿವಿಧ ಚಟುವಟಿಕೆ ಹಮ್ಮಿಕೊಂಡಿದೆ. ಭಿತ್ತಿಪತ್ರಗಳನ್ನು ಮುದ್ರಿಸಿ ಹಂಚುತ್ತಿದೆ. ಅದಕ್ಕಾಗಿ ಕ್ಯೂ ಆರ್‌ ಕೋಡ್‌ ರಚಿಸಿದ್ದು ಅದನ್ನು ಸ್ಕ್ಯಾನ್‌ ಮಾಡುವ ಮೂಲಕವೂ ವೆಬ್‌ಸೈಟ್‌ಗೆ ಸರಳವಾಗಿ ಪ್ರವೇಶ ಮಾಡಬಹುದಾಗಿದೆ. ಅಧಿಕಾರಿಗಳು ವಿವಿಧ ಇಲಾಖೆಗಳ ನೌಕರರು ಶಾಲಾ ಶಿಕ್ಷಕರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.