ADVERTISEMENT

ಚಿತ್ರದುರ್ಗ: ಕಚ್ಚಾ ರಸ್ತೆಗಿಂತ ಕೀಳಾದ ರಾಷ್ಟ್ರೀಯ ಹೆದ್ದಾರಿ

ಅರ್ಧಕ್ಕೆ ನಿಂತ ಕಾಮಗಾರಿ, ನಿತ್ಯವೂ ಸ್ಥಳೀಯರಿಗೆ ದೂಳಿನ ಮಜ್ಜನ, ಇಲ್ಲವಾದ ಸರ್ವೀಸ್‌ ರಸ್ತೆ

ಎಂ.ಎನ್.ಯೋಗೇಶ್‌
Published 27 ಸೆಪ್ಟೆಂಬರ್ 2024, 6:10 IST
Last Updated 27 ಸೆಪ್ಟೆಂಬರ್ 2024, 6:10 IST
ಚಿತ್ರದುರ್ಗದ ಕವಾಡಿಗರ ಹಟ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ–369 ಹಾಳಾಗಿರುವುದು
ಚಿತ್ರದುರ್ಗದ ಕವಾಡಿಗರ ಹಟ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ–369 ಹಾಳಾಗಿರುವುದು   

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಹಾದುಹೋಗಿರುವ ಸೊಲ್ಲಾಪುರ–ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-369 ಸ್ಥಿತಿ ಗ್ರಾಮೀಣ ಭಾಗದ ಕಚ್ಚಾ ರಸ್ತೆಗಿಂತಲೂ ಕಡೆಯಾಗಿದ್ದು, ಸ್ಥಳೀಯ ನಾಗರಿಕರು ಅಲ್ಲಿ ಓಡಾಡಲು ಪರದಾಡುತ್ತಿದ್ದಾರೆ.

ಮುರುಘಾ ಮಠದ ಮುಂಭಾಗದಿಂದ ಹೊಳಲ್ಕೆರೆ ರಸ್ತೆವರೆಗೆ ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 5 ಕಿ.ಮೀ. ಸಾಗುತ್ತದೆ. ನಗರದಿಂದ ಶಿವಮೊಗ್ಗದವರೆಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಕೆಲವೆಡೆ ಅಲ್ಪಸ್ವಲ್ಪ ಕಾಮಗಾರಿ ಬಾಕಿ ಉಳಿದಿದೆ. ನಗರ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ರಸ್ತೆಯುದ್ದಕ್ಕೂ ಬರುವ ವಿವಿಧ ಬಡಾವಣೆಗಳ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಈ ಭಾಗದಲ್ಲಿ ಗಣಿ ಲಾರಿಗಳ ಓಡಾಟ ತೀವ್ರವಾಗಿದ್ದು ರಸ್ತೆ ತೀರಾ ಹಾಳಾಗಿದೆ. ದೂಳಿನ ಸಮಸ್ಯೆಯಿಂದಾಗಿ ಇಲ್ಲಿ ಓಡಾಡುವ ಜನರು ರೋಗಭೀತಿ ಅನುಭವಿಸುತ್ತಿದ್ದಾರೆ. ನಗರದ ಹೊರವಲಯದ ವಿವಿಧ ಹೊಸ ಬಡಾವಣೆಗಳಲ್ಲಿ ಮನೆಕಟ್ಟಿಕೊಂಡಿರುವ ನಿವಾಸಿಗಳು ನಿತ್ಯವೂ ದೂಳಿನ ಮಜ್ಜನ ಅನುಭವಿಸುತ್ತಿದ್ದಾರೆ. ರಸ್ತೆಗೆ ಹಾಕಿರುವ ಜಲ್ಲಿ ನಡುವೆ ವಾಹನ ಓಡಿಸುವುದು ಸವಾಲಾಗಿದೆ.

ADVERTISEMENT

ಹೆದ್ದಾರಿಯ ಎರಡೂ ಕಡೆ ಸರ್ವೀಸ್‌ ರಸ್ತೆಯಿಲ್ಲದ ಕಾರಣ, ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ತೀವ್ರ ತೊಂದರೆ ಎದುರಿಸುತ್ತಿವೆ. ತಿರುಮಲ ಕಲ್ಯಾಣ ಮಂಟಪದ ಬಳಿಯ ಪ್ರಮುಖ ಸರ್ಕಲ್‌ನಲ್ಲಿ ರಸ್ತೆ ಅಗಲವಾಗಿದ್ದು ವಾಹನಗಳು ಇಳಿಜಾರಿನಲ್ಲಿ ವೇಗವಾಗಿ ಬರುತ್ತವೆ. ಮುಂದೆ ರಸ್ತೆ ಕಿರಿದಾಗಿರುವ ಕಾರಣ ವಾಹನ ನಿಯಂತ್ರಣ ತಪ್ಪಿದ ಅನೇಕ ಘಟನೆಗಳು ನಡೆದಿವೆ. ನಿತ್ಯವೂ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಈ ಭಾಗದಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಮುರುಘಾ ಮಠ ದಾಟುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗೆ ಅಳತೆ ಮಾಡಿ ಬಿಟ್ಟಿರುವ ಸ್ಥಳದಲ್ಲೇ ತೂಕದ ಸೇತುವೆ (ವೈಯಿಂಗ್‌ ಬ್ರಿಜ್‌) ಇದ್ದು ಉದ್ದಕ್ಕೂ ಗಣಿ ಲಾರಿಗಳು ನಿಂತಿರುತ್ತವೆ. ವಾಹನಗಳು ಓಡಾಡುವ ರಸ್ತೆ ಜಾಗ ತೀರಾ ಚಿಕ್ಕದಾಗಿದ್ದು ವಾಹನ ಸವಾರರು ಮುಂದೆ ಸಾಗಲು ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ಇದೆ.  

ಕವಾಡಿಗರ ಹಟ್ಟಿ, ಮಾಳಪ್ಪನ ಹಟ್ಟಿ, ಚೋಳಗುಡ್ಡ, ಸಿದ್ಧಾರ್ಥ ಲೇಔಟ್‌, ದವಳಗಿರಿ ಬಡಾವಣೆ, ಅಗಸನಕಲ್ಲು, ಸಾಯಿ ಲೇಔಟ್‌ 3ನೇ ಹಂತ, ಬನಶಂಕರಿ ಬಡಾವಣೆ, ಶಾಂತಿ ನಗರ, ಶಾಮರಾವ್‌ ಲೇಔಟ್‌ ಜನರು ಈ ರಸ್ತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಮಧ್ಯಮ ಬಜೆಟ್‌ನ ಈ ರಾಷ್ಟ್ರೀಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ನಗರ ವ್ಯಾಪ್ತಿಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ನಿಂತಿರುವ ಕಾಮಗಾರಿ ಮುಂದುವರಿದಿಲ್ಲ.

‘ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದ ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಚಿತ್ರ ಸಮೇತ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೇವೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ. ಯೋಜನೆಯಲ್ಲಿ ಸರ್ವೀಸ್‌ ರಸ್ತೆಯ ಬಗ್ಗೆ ಪ್ರಸ್ತಾಪವಿಲ್ಲ. ಸ್ಥಳೀಯ ಅವಶ್ಯಕತೆಗಳನ್ನು ಅರಿತು ಸರ್ವೀಸ್‌ ರಸ್ತೆಗೆ ಯೋಜನೆ ರೂಪಿಸಬೇಕು’ ಎಂದು ಮಾಳಪ್ಪನಹಟ್ಟಿ ನಿವಾಸಿ ಮಾಧವ ಪೋಕಳೆ ಒತ್ತಾಯಿಸಿದರು.

ಇದು ರಾಷ್ಟ್ರೀಯ ಹೆದ್ದಾರಿಯೋ ಹಳ್ಳಿ ರಸ್ತೆಯೋ? ರಸ್ತೆಯಲ್ಲೇ ಇದೆ ತೂಕದ ಸೇತುವೆ; ಗೊಂದಲ ನಿತ್ಯವೂ ದೂಳಿನ ಮಜ್ಜನ; ಸ್ಥಳೀಯರಿಗೆ ಸಂಕಷ್ಟ
ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭಿಸುವುದು ತಡವಾಗುತ್ತಿದೆ. ಅದು ಆರಂಭವಾದರೆ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು
ಸುರೇಶ್‌ ಎಇಇ ರಾಷ್ಟ್ರೀಯ ಹೆದ್ದಾರಿ ವಿಭಾಗ ಪಿಡಬ್ಲ್ಯುಡಿ

ರೈಲ್ವೆ ಕ್ರಾಸಿಂಗ್‌ ಸಂಕಷ್ಟ

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗ ನಗರ ಹಾಗೂ ಹೊಳಲ್ಕೆರೆ 2 ಕಡೆಗಳಲ್ಲಿ ರೈಲ್ವೆ ಕ್ರಾಸಿಂಗ್‌ ಇರುವುದು ವಾಹನಗಳ ಓಡಾಟಕ್ಕೆ ಅಡ್ಡಿಯಾಗಿದೆ. ಈ ಭಾಗದಲ್ಲಿ ಗೂಡ್ಸ್‌ ರೈಲು ಗಾಡಿಗಳ ಸಂಖ್ಯೆ ಹೆಚ್ಚಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಿಷ್ಟ 20 ನಿಮಿಷ ವಾಹನಗಳನ್ನು ನಿಲ್ಲಿಸಬೇಕಾಗಿದೆ. ವಾಹನಗಳ ಓಡಾಟಕ್ಕೆ ಕೆಳಸೇತುವೆ ಮಂಜೂರಾಗಿದೆ. ಆದರೆ ಕಾಮಗಾರಿ ಆರಂಭವೇ ಆಗದ ಕಾರಣ ಹೆದ್ದಾರಿ ವಾಹನ ಸವಾರರು ಪರಿತಪಿಸುವಂತಾಗಿದೆ. ‘ರೈಲು ಬಂದಾಗ 1 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ದೂಳಿನ ನಡುವೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ರೈಲು ತೆರಳಿದ ನಂತರ ಕಿರಿದಾದ ಜಾಗದಲ್ಲಿ ರಸ್ತೆ ದಾಟುವುದು ಸವಾಲಾಗಿದೆ. ಹಲವು ವೇಳೆ ವಾಹನಗಳಿಗೆ ಸರಣಿ ಅಪಘಾತವಾಗಿದೆ’ ಎಂದು ವಾಹನ ಚಾಲಕ ರುದ್ರಮುನಿ ಹೇಳಿದರು.

ಬಾರದ ಪರಿಹಾರ; ನಿಂತ ಕಾಮಗಾರಿ

ಕವಾಡಿಗರ ಹಟ್ಟಿ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಯಲ್ಲಿ ಗೊಂದಲ ಉಂಟಾಗಿದ್ದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಹಲವು ಬಾರಿ ಸಭೆ ನಡೆಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಅಡಿಗೆ ₹650 ಪರಿಹಾರ ನಿಗದಿ ಮಾಡಿದ್ದರು. ಆದರೆ ನಮ್ಮ ಖಾತೆಗೆ ಕಡಿಮೆ ಹಣ ಬಂದಿರುವ ಕಾರಣ ನಾವು ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ’ ಎಂದು ಕವಾಡಿಗರ ಹಟ್ಟಿಯ ಆಂಜಿನಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.