ADVERTISEMENT

ಹೊಸದುರ್ಗ | ತಂಗುದಾಣಗಳ ಕೊರತೆ: ರಸ್ತೆಯಲ್ಲೇ ಕಾಯುವ ಅನಿವಾರ್ಯತೆ

ಶ್ವೇತಾ ಜಿ.
Published 19 ಜುಲೈ 2024, 6:12 IST
Last Updated 19 ಜುಲೈ 2024, 6:12 IST
ಹೊಸದುರ್ಗದ ಪೊಲೀಸ್ ಠಾಣೆ ಎದುರಿನ ರಸ್ತೆ ಬದಿಯಲ್ಲೇ ಬಸ್‌ಗಳಿಗೆ ಕಾಯುತ್ತಿರುವ ಪ್ರಯಾಣಿಕರು
ಹೊಸದುರ್ಗದ ಪೊಲೀಸ್ ಠಾಣೆ ಎದುರಿನ ರಸ್ತೆ ಬದಿಯಲ್ಲೇ ಬಸ್‌ಗಳಿಗೆ ಕಾಯುತ್ತಿರುವ ಪ್ರಯಾಣಿಕರು   

ಹೊಸದುರ್ಗ: ಬಸ್‌ಗಳಿಗೆ ಕಾಯುವ ಪ್ರಯಾಣಿಕರಿಗೆ ಪಟ್ಟಣದ ವಿವಿಧೆಡೆ ತಂಗುದಾಣಗಳಿಲ್ಲ. ಇದರಿಂದಾಗಿ ಮಕ್ಕಳು, ಮಹಿಳೆಯರು, ವೃದ್ಧರು ಹೈರಾಣಾಗುತ್ತಿದ್ದಾರೆ. ರಸ್ತೆಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ.

ಪಟ್ಟಣದ ಪೊಲೀಸ್ ಠಾಣೆ ಮುಂಭಾಗ, ಸಿದ್ಧರಾಮೇಶ್ವರ ಸಮುದಾಯ ಭವನ, ಟಿ.ಬಿ. ವೃತ್ತ, ಹುಳಿಯಾರು ವೃತ್ತಗಳಲ್ಲಿ ತಂಗುದಾಣಗಳಿಲ್ಲ. ನಿತ್ಯ ನೂರಾರು ಬಸ್‌ಗಳಲ್ಲಿ ಸಾವಿರಾರು ಜನ ಓಡಾಡುವ ಈ ಸ್ಥಳಗಳಲ್ಲಿ ನಿಲ್ದಾಣ ಇಲ್ಲದ ಕಾರಣ ಜನರು ಬಿಸಿಲಿನಲ್ಲಿ, ಮಳೆಯಲ್ಲಿ ನಿಲ್ಲಬೇಕಾಗಿದೆ.

ಹೊಳಲ್ಕೆರೆ, ದಾವಣಗೆರೆ, ಚಿತ್ರದುರ್ಗ, ಅಜ್ಜಂಪುರ, ಕಡೂರು, ಬೀರೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಹಾಗೂ ಕೆಎಸ್ಆರ್‌ಟಿಸಿ ಬಸ್ ನಿಲುಗಡೆಗೆ ಪೋಲಿಸ್ ಠಾಣೆ ಮುಂಭಾಗ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸೋಮವಾರ ಹೊಸದುರ್ಗದಲ್ಲಿ ಸಂತೆ ನಡೆಯುವ ಕಾರಣ ಜನದಟ್ಟಣೆ ಹೆಚ್ಚು. ತಂಗುದಾಣ ಇಲ್ಲದ್ದರಿಂದ ಸಮಸ್ಯೆ ಹೆಚ್ಚಾಗಿದೆ.

ADVERTISEMENT

‘ಹುಳಿಯಾರು ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆಯೂ ಹೆಚ್ಚಿದೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ತಂಗುದಾಣಗಳಿಲ್ಲದೇ ಸಮಸ್ಯೆಯಾಗಿದೆ. ಸಿದ್ಧರಾಮನಗರದಲ್ಲಿ ಪ್ರವಾಸಿ ಮಂದಿರದ ಎದುರು ಒಂದು ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಾಣವಾದರೆ ಅನುಕೂಲವಾಗುತ್ತದೆ’ ಎಂಬುದು ವಿದ್ಯಾರ್ಥಿಗಳ ಒತ್ತಾಯ.

‘ನಿರಂತರ ಮಳೆಯಾದರೆ ಜನರಿಗೆ ನಿಲ್ಲಲು ಸ್ಥಳಾವಕಾಶವಿಲ್ಲ. ಅಂಗಡಿಗಳ ಮುಂದೆ ನಿಲ್ಲಬೇಕು. ಒಮ್ಮೊಮ್ಮೆ ಅವರು ಸಹ ದೂರ ನಿಲ್ಲಲು ಸೂಚಿಸುತ್ತಾರೆ. ಪ್ರಯಾಣಿಕರ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕ ಲೋಹಿತ್ ಕೆ. ಹೇಳಿದರು.

ಇದ್ದೂ ಇಲ್ಲದಂತಾದ ತಂಗುದಾಣ:

ಪಟ್ಟಣದ ಟಿ.ಬಿ. ವೃತ್ತದಲ್ಲಿನ ಪ್ರಯಾಣಿಕರ ತಂಗುದಾಣ ಇದ್ದೂ ಇಲ್ಲದಂತಾಗಿದೆ, ಸುತ್ತಲೂ ಮುಳ್ಳುಗಿಡಗಳು ಬೆಳೆದಿವೆ. ಮಳೆ ಬಂದಾಗ ಸೋರುತ್ತಿದೆ. ತಂಗುದಾಣಕ್ಕಿಂತ ಸ್ವಲ್ಪ ದೂರದಲ್ಲಿಯೇ ಬಸ್ ನಿಲುಗಡೆಯಾಗುತ್ತದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು, ಹೊಸ ನ್ಯಾಯಾಲಯದ ಎದುರು, ಶಾಂತಿನಗರ, ಎಪಿಎಂಸಿ ಮಾರುಕಟ್ಟೆ ಬಳಿ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಈ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು ಎಂಬುದು ಜನರ ಒತ್ತಾಯ.

ಹೊಸದುರ್ಗದ ಪೊಲೀಸ್ ಠಾಣೆ ಎದುರಿನ ರಸ್ತೆ ಬದಿಯಲ್ಲೇ ಬಸ್‌ಗಳಿಗೆ ಕಾಯುತ್ತಿರುವ ಪ್ರಯಾಣಿಕರು

ಬಸ್‌ಗೆ ಕಾಯುವಾಗ ಮಳೆ ಬಂದರೆ ತೊಂದರೆಯಾಗುತ್ತದೆ. ಗರ್ಭಿಣಿಯರು ವೃದ್ಧರು ಅಂಗಡಿಗಳ ಪಕ್ಕದಲ್ಲಿ ಕೂರುತ್ತಾರೆ. ವಿದ್ಯಾರ್ಥಿಗಳು ಬಿಸಿಲು ಮಳೆಯಲ್ಲೇ ನಿಲ್ಲುತ್ತಾರೆ.

-ನಿತಿನ್ ಎಸ್.ಆರ್. ಬಿ.ಎ. ವಿದ್ಯಾರ್ಥಿ

ಪಟ್ಟಣದ ಪೋಲಿಸ್ ಠಾಣೆ ಎದುರು ಹಾಗೂ ಹುಳಿಯಾರು ವೃತ್ತದ ಸಮೀಪ ಬಸ್ ತಂಗುದಾಣ ನಿರ್ಮಿಸಲು ಸಭೆಯಲ್ಲಿ ಚರ್ಚಿಸಿ ಅನುದಾನ ಮೀಸಲಿಡಲಾಗುವುದು. ಹೊಳಲ್ಕೆರೆ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಗಿದ ನಂತರ ಟಿ.ಬಿ. ವೃತ್ತದಲ್ಲಿ ತಂಗುದಾಣ ನಿರ್ಮಿಸಲಾಗುವುದು.

-ತಿಮ್ಮರಾಜು ಜಿ.ವಿ. ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.