ಪರಶುರಾಂಪುರ: ಸಮಗ್ರ ಕೃಷಿ ವಿಧಾನದಲ್ಲಿ ಸಮೀಪದ ನಾಗಗೊಂಡನಹಳ್ಳಿಯ ಪ್ರಗತಿಪರ ರೈತ ರಾಮಚಂದ್ರ ರೆಡ್ಡಿ ದಾಳಿಂಬೆ, ಮಾವು, ಬಾರೆ, ಬಾಳೆ ಹೀಗೆ ಅನೇಕ ಬೆಳೆಗಳನ್ನು ಬೆಳೆಯುವ ಮೂಲಕ ಕೈತುಂಬ ಅದಾಯ ಗಳಿಸುತ್ತಿದ್ದಾರೆ.
ರಾಮಚಂದ್ರ ರೆಡ್ಡಿ ಅವರಿಗೆ ಒಟ್ಟು 7 ಎಕರೆ ಜಮೀನು ಇದೆ. 3 ಎಕರೆಯಲ್ಲಿ ದಾಳಿಂಬೆ, 3 ಎಕರೆಯಲ್ಲಿ ಅಡಿಕೆ ಮತ್ತು 1 ಎಕರೆಯಲ್ಲಿ ಸೂಜಿ ಬಾರೆ, ಆ್ಯಪಲ್ ಬಾರೆ, ಬಾಳೆ, ಮಾವು ಮುಂತಾದ ಬೆಳೆ ಬೆಳೆಯುತ್ತಿದ್ದಾರೆ.
2020ರಲ್ಲಿ ದಾಳಿಂಬೆ ಬೆಳೆದು ₹ 35 ಲಕ್ಷ ಅದಾಯ ಗಳಿಸಿದ್ದಕ್ಕೆ, ಜಿ.ಕೆ.ವಿ.ಕೆ ಬಬ್ಬೂರು ಫಾರಂನಲ್ಲಿರುವ ವಿಜ್ಞಾನಿಗಳು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ತೋಟಕ್ಕೆ ಭೇಟಿ ನೀಡಿ ರಾಮಚಂದ್ರ ರೆಡ್ಡಿ ಅವರನ್ನು ಗೌರವಿಸಿದ್ದರು.
‘13 ವರ್ಷಗಳಿಂದ ದಾಳಿಂಬೆ ಬೆಳೆಯುತ್ತಿದ್ದು, ಪ್ರಸ್ತುತ ಕೆ.ಜಿ. ದಾಳಿಂಬೆಗೆ ₹ 130ರಂತೆ ಒಟ್ಟು 5 ಟನ್ ದಾಳಿಂಬೆ ಮಾರಾಟ ಮಾಡಿದ್ದೇನೆ. ₹ 6 ಲಕ್ಷ ಅದಾಯ ಕೈಸೇರಿದೆ. ಇನ್ನೂ ₹ 4 ಲಕ್ಷ ಬರುವ ನಿರೀಕ್ಷೆ ಇದೆ ಎಂದು ರೆಡ್ಡಿ ತಿಳಿಸಿದರು.
‘ದಾಳಿಂಬೆ ಜೊತೆಗೆ ಸೂಜಿ ಬಾರೆ, ಆ್ಯಪಲ್ ಬಾರೆ, ಮಾವು, ಬಾಳೆಯನ್ನೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ರೈತರು ಸಮಗ್ರ ಕೃಷಿ ವಿಧಾನ ಅಳವಡಿಸಿಕೊಂಡರೆ ಒಂದಲ್ಲಾ ಒಂದು ಬೆಳೆಯಿಂದ ಲಾಭ ಗಳಿಸಬಹುದು. ಹಣ್ಣುಗಳನ್ನು ಚಳ್ಳಕೆರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತೇನೆ. ಚಿತ್ರದುರ್ಗದ ವ್ಯಾಪಾರಿಗಳು ಇಲ್ಲಿಗೇ ಬಂದು ಖರೀದಿಸುತ್ತಾರೆ. ತೋಟಗಾರಿಕೆಯಲ್ಲಿ ಪತ್ನಿ ಶ್ರೀಲಕ್ಷ್ಮಿ ಸಹಕಾರವೂ ಇದೆ’ ಎಂದು ಅವರು ಹೇಳಿದರು.
ಹೈನುಗಾರಿಕೆಗೂ ಸೈ:
ಸಮಗ್ರ ಕೃಷಿಯ ಜೊತೆಗೆ ಹೈನುಗಾರಿಯನ್ನೂ ಮಾಡುತ್ತಿರುವ ರೈತ ರಾಮಚಂದ್ರ ರೆಡ್ಡಿ ಅವರ ಬಳಿ 5 ಹಸುಗಳು ಮತ್ತು ಒಂದು ಎಮ್ಮೆ ಇದೆ. ನಿತ್ಯ 30 ಲೀಟರ್ ಹಾಲು ಹಿಂಡುತ್ತಾರೆ. ಈ ಮೂಲಕ ಕೃಷಿ ಹಾಗೂ ಮನೆ ನಿರ್ವಹಿಸುತ್ತಿದ್ದಾರೆ. ಹೈನುಗಾರಿಕೆಯಿಂದ ಸಾಕಷ್ಟು ಸಾವಯವ ಗೊಬ್ಬರ ಸಿಗುವುದರಿಂದ ರಾಸಾಯನಿಕಮುಕ್ತ ತೋಟಗಾರಿಕೆಗೆ ಸಹಕಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.