ADVERTISEMENT

ಗಣಿತ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳಗಿದ ಕ್ರೀಡಾ ಪ್ರತಿಭೆ

ವಸಂತಕುಮಾರ್ ತರಬೇತಿಯಲ್ಲಿ ಸಾಧನೆಗೈದ ಮಕ್ಕಳು

ರವಿಕುಮಾರ್ ಸಿರಿಗೊಂಡನಹಳ್ಳಿ
Published 7 ಜೂನ್ 2022, 2:02 IST
Last Updated 7 ಜೂನ್ 2022, 2:02 IST
ತಾಲ್ಲೂಕು ಮಟ್ಟದ ಕೊಕ್ಕೊ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು
ತಾಲ್ಲೂಕು ಮಟ್ಟದ ಕೊಕ್ಕೊ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು   

ಶ್ರೀರಾಂಪುರ: ಗಣಿತ ಶಿಕ್ಷಕರೇ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಶಾಲಾ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಉತ್ತಮ ಕ್ರೀಡಾ ಪಟುಗಳಾಗಿ ರೂಪಿಸಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ವಿಭಾಗಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದ್ದಾರೆ.

ಕಿಟ್ಟದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಕ್ರೀಡಾಸಕ್ತಿ ಹೊಂದಿರುವ ಗಣಿತ ಶಿಕ್ಷಕ ವಸಂತಕುಮಾರ್ ಇವರ ಮಾರ್ಗದರ್ಶನದಲ್ಲಿ ಮಕ್ಕಳು ಕ್ರೀಡೆಯಲ್ಲಿ ಸಾಧನೆಗೈದಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟದಲ್ಲಿ ಕೊಕ್ಕೊ 2 ಬಾರಿ, ವಾಲಿಬಾಲ್‌ನಲ್ಲಿ 4 ಬಾರಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಎತ್ತರ ಜಿಗಿತ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ 600 ಮೀ. ಓಟದಲ್ಲಿ ಒಬ್ಬ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ADVERTISEMENT

ಗಣಿತ ಶಿಕ್ಷಕ ವಸಂತ್‍ ಇವರ ಕ್ರಿಯಾಶೀಲ ತರಬೇತಿಯಿಂದಾಗಿ ಶಾಲೆಯ ವಿದ್ಯಾರ್ಥಿಗಳ ಸಾಧನೆಯಿಂದಾಗಿ ಹೋಬಳಿ ಹಾಗೂ ತಾಲ್ಲೂಕು ಮಟ್ಟದ ಕ್ರೀಡೆಗಳಲ್ಲಿ ಶಾಲೆಗೆ 6 ಬಾರಿ ಸಮಗ್ರ ಪ್ರಶಸ್ತಿ ಲಭಿಸಿದೆ.

ಗಣಿತ ಪಾಠ ಮಾಡುವುದರ ಜೊತೆಗೆ ಮಕ್ಕಳಿಗೆ ಕೊಕ್ಕೊ, ವಾಲಿಬಾಲ್, ಕಬಟ್ಟಿ, ಥ್ರೋಬಾಲ್, ಅಥ್ಲೆಟಿಕ್ಸ್‌ನಲ್ಲಿ ತರಬೇತಿ ನೀಡುವುದಲ್ಲದೇ ಶಾಲೆಯಲ್ಲಿ ಮಕ್ಕಳಿಗೆ ಯೋಗಾಭ್ಯಾಸವನ್ನೂ ಮಾಡಿಸುತ್ತಿದ್ದಾರೆ.

‘ಗ್ರಾಮೀಣ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರುತ್ತಾರೆ. ಅವರಿಗೆ ಉತ್ತಮ ತರಬೇತಿ ಹಾಗೂ ಪ್ರೋತ್ಸಾಹ ದೊರೆತರೆ ಉತ್ತಮ ಕ್ರೀಡಾಪಟುಗಳಾಗುತ್ತಾರೆ. ವೈಯಕ್ತಿಕವಾಗಿ ನನಗೆ ಕ್ರಿಕಟ್‌ನಲ್ಲಿ ಹೆಚ್ಚು ಆಸಕ್ತಿ ಇದ್ದು ಗ್ರಾಮೀಣ ವಿದ್ಯಾರ್ಥಿಗಳನ್ನು ಕ್ರಿಕೆಟ್‌ಪಟುಗಳನ್ನಾಗಿ ತಯಾರು ಮಾಡುವ ಹಂಬಲವಿದೆ. ಆದರೆ ಜಾಗ ಮತ್ತು ಕ್ರಿಕಟ್‌ ಸಾಮಗ್ರಿಗಳ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಸಹಕಾರ ದೊರೆತರೆ ಗ್ರಾಮೀಣ ಭಾಗದಲ್ಲಿ ಕ್ರೀಡಾ ಕ್ಲಬ್ ರಚಿಸಿ ಉತ್ತಮ ಕ್ರೀಡಾಪಟುಗಳನ್ನು ರೂಪಿಸುವುದು ಸಾಧ್ಯ’ ಎಂದು ಅಭಿಪ್ರಾಯಪಡುತ್ತಾರೆ ಶಿಕ್ಷಕ ವಸಂತಕುಮಾರ್.

......

ಗ್ರಾಮೀಣ ಮಟ್ಟದಲ್ಲಿ ಮಕ್ಕಳು ದೈಹಿಕ ಹಾಗು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಕ್ರೀಡೆಯಲ್ಲಿ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಸಿಕ್ಕಲ್ಲಿ ಉತ್ತಮ ಸಾಧನೆ ಮಾಡಬಲ್ಲರು. ದಾನಿಗಳು, ಸಂಘ–ಸಂಸ್ಥೆಗಳು ಸಹಕಾರ ನೀಡಿದರೆ ಗ್ರಾಮೀಣ ಕ್ರೀಡಾ ಕ್ಲಬ್ ಮಾಡುವ ಆಸೆ ಇದೆ.

– ವಸಂತಕುಮಾರ್, ಗಣಿತ ಶಿಕ್ಷಕ

...........

ಅದೇ ಸ್ಫೂರ್ತಿಯಿಂದ ಪ್ರೌಢಶಾಲಾ ಹಂತದಲ್ಲಿ ಗುಂಪು ಆಟಗಳಲ್ಲಿ ಸಾಧನೆ ಮಾಡಬೇಕೆಂದು ಕೊಕ್ಕೊ ಆಟವನ್ನು ಈಗಲೇ ಅಭ್ಯಾಸ ಮಾಡುತ್ತಿದ್ದೇವೆ.

– ದರ್ಶನ್, 10ನೇ ತರಗತಿ ವಿದ್ಯಾರ್ಥಿ, ಕಿಟ್ಟದಾಳ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.