ಹೊಳಲ್ಕೆರೆ: ಗ್ರಾಮೀಣ ಭಾಗದಲ್ಲಿ ಹಲವು ಕಡೆ ಸ್ವಚ್ಛತೆಯೇ ಸಮಸ್ಯೆಯಾಗಿದೆ. ಇದರಿಂದ ಡೆಂಗಿ, ಟೈಫಾಯಿಡ್, ಮಲೇರಿಯಾ, ವಾಂತಿ–ಭೇದಿಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇವಲ ಒಂದು ಗ್ರಾಮದ, ತಾಲ್ಲೂಕಿನ ಸಮಸ್ಯೆ ಅಲ್ಲ. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ೀ ಸಮಸ್ಯೆ ಕಾಡುತ್ತಿದೆ.
ತಾಲ್ಲೂಕಿನಲ್ಲಿ 29 ಗ್ರಾಮ ಪಂಚಾಯಿತಿಗಳಿದ್ದು, ಅನೇಕ ಕಡೆ ಚರಂಡಿಗಳು ಇದ್ದರೂ ಇಲ್ಲದಂತಾಗಿವೆ. ಕಸದ ರಾಶಿಯಿಂದ ತುಂಬಿ ಹೋಗಿದ್ದರೂ ಸ್ವಚ್ಛಗೊಳಿಸುವ ಕಾರ್ಯ ಮಾತ್ರ ನಡೆಯುತ್ತಿಲ್ಲ.
ಚರಂಡಿಗಳು ತುಂಬಿದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುವುದು ಮಾಮೂಲಿಯಾಗಿದೆ. ಜತೆಗೆ ಮಲೀನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕೆಲವೆಡೆ ಮಾತ್ರ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿರುವುದು ಸಮಾಧಾನದ ಸಂಗತಿ.
ಜನವರಿಯಲ್ಲಿ ದಾಸಯ್ಯನ ಹಟ್ಟಿ, ಸಂಗೇನಹಳ್ಳಿ, ಚಿತ್ರಹಳ್ಳಿ, ತೊಡರನಾಳ್ ಗ್ರಾಮಗಳಲ್ಲಿ ತಲಾ ಒಬ್ಬರಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಸೊಳ್ಳೆ ಕಡಿತದಿಂದ ಪ್ರಕರಣಗಳು ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ.
ಹಳ್ಳಿಗಳಲ್ಲಿ ತಿಪ್ಪೆಗಳಿಂದಲೂ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ನಿಯಮ ಮೀರಿ ಗ್ರಾಮದಲ್ಲೇ ತಿಪ್ಪೆ ಹಾಕಲಾಗಿದೆ. ಗ್ರಾಮ ಪಂಚಾಯಿತಿಯಿಂದ ಕಸ ವಿಲೇವಾರಿ ವಾಹನ ಒದಗಿಸಿದ್ದರೂ, ಬಹುಪಾಲು ವಾಹನಗಳು ಮೂಲೆ ಸೇರಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ಎಲ್ಲೆಂದರಲ್ಲಿ ಬೀಳುವ ಮೂಲಕ ನೈರ್ಮಲ್ಯ ಹಾಳಾಗುತ್ತಿದೆ.
‘ಚರಂಡಿ ಸ್ವಚ್ಛತೆಗೆ 15ನೇ ಹಣಕಾಸು ಯೋಜನೆಯಲ್ಲಿ ಹಣ ಖರ್ಚು ಮಾಡಬಹುದು. ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಚರಂಡಿ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಶಿವಪ್ರಕಾಶ್ ತಿಳಿಸಿದ್ದಾರೆ.
‘ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರ ಸಮಿತಿ ರಚಿಸಲಾಗಿದ್ದು, 169 ಗ್ರಾಮ ಪಂಚಾಯಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ತಾಲ್ಲೂಕಿನಲ್ಲಿರುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಿತಿ ಸದಸ್ಯರಿಗೆ ಸ್ವಚ್ಛತೆಯ ತರಬೇತಿ ನೀಡಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ಡಿ.ರೇಖಾ.
‘ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ತಿಂಗಳಿಗೊಮ್ಮೆ ಸಭೆ ನಡೆಸಿ ಸ್ವಚ್ಛತೆಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಜಾಥಾಗಳನ್ನೂ ನಡೆಸಲಾಗಿದೆ’ ಎಂದು ತಿಳಿಸಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 6 ಡೆಂಗಿ ಪ್ರಕರಣ ದಾಖಲಾಗಿದ್ದರೆ, 2023ರಲ್ಲಿ 17 ಪ್ರಕರಣಗಳು ಪತ್ತೆಯಾಗಿದ್ದವು. ಈ ಬಾರಿ ಚಿಕೂನ್ ಗುನ್ಯ- 6, ಟೈಫಾಯಿಡ್ -3, ಕರುಳುಬೇನೆಯ 250 ಹಾಗೂ ಮಲೇರಿಯಾದ ಒಂದು ಪ್ರಕರಣ ದಾಖಲಾಗಿವೆ.
ಪಟ್ಟಣದಲ್ಲೂ ಕೆಲವು ಕಡೆ ಚರಂಡಿಗಳಲ್ಲಿ ಕೊಳಚೆ ತುಂಬಿದ್ದು, ನಿವಾಸಿಗಳು ಸಂಕಷ್ಟ ಅನುಭವಿಸುವಂತೆ ಆಗಿದೆ. ಗಣಪತಿ ದೇವಸ್ಥಾನದ ಸಮೀಪ ಚೀರನಹಳ್ಳಿ ರಸ್ತೆಯ ಪಕ್ಕದಲ್ಲಿನ ಚರಂಡಿ ತುಂಬಿದ್ದು, ದುರ್ವಾಸನೆ ಬೀರುತ್ತಿದೆ. ಈ ಚರಂಡಿ ನೀರು ಮುಂದೆ ಹೋಗಲು ಅವಕಾಶ ಇಲ್ಲವಾಗಿದ್ದು, ವರ್ಷದಿಂದಲೂ ಕೊಳಚೆ ನೀರು ತುಂಬಿಕೊಂಡಿದೆ. ಪಕ್ಕದಲ್ಲೇ ಪ್ರೌಢಶಾಲೆ ಇದ್ದು, ವಿದ್ಯಾರ್ಥಿಗಳು ರೋಗಕ್ಕೆ ತುತ್ತಾಗುತ್ತಿದ್ದಾರೆ.
ಚರಂಡಿಗಳಲ್ಲಿ ಕೊಳಚೆ ತುಂಬುವುದರಿಂದ ಸೊಳ್ಳೆಗಳು ಉತ್ಪತ್ತಿ ಜಾಸ್ತಿ ಆಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿದ್ದು ಲಾರ್ವಾ ನಿರೋಧಕ ರಾಸಾಯನಿಕ ಸಿಂಪಡಣೆ ಕಾರ್ಯ ಮಾಡಲಾಗಿದೆ. ಜನರು ಶುದ್ಧ ಕುಡಿಯುವ ನೀರು ಸೇವಿಸಬೇಕುಡಾ.ಟಿ.ಡಿ.ರೇಖಾ ತಾಲ್ಲೂಕು ಆರೋಗ್ಯಾಧಿಕಾರಿ
ಚೀರನಹಳ್ಳಿ ಕಂಬದ ದೇವರಹಟ್ಟಿಯ ಮಾರ್ಗದಲ್ಲಿ ಜನರು ನಿತ್ಯ ಹೆಚ್ಚಾಗಿ ಸಂಚರಿಸುತ್ತಾರೆ. ಆದರೆ ಚರಂಡಿಯ ತುಂಬ ಕಸ ತುಂಬಿಕೊಂಡಿರುವ ಕಾರಣ ದುರ್ವಾಸನೆಯಿಂದ ಓಡಾಡುವುದೇ ಕಷ್ಟವಾಗಿದೆ.ಡಿ.ಇ.ರವಿಕುಮಾರ್ ಸ್ಥಳೀಯ ನಿವಾಸಿ
ಖಂಡೇನಹಳ್ಳಿ ಗ್ರಾಮದಲ್ಲಿ ಕೆಲವು ಕಡೆ ಚರಂಡಿ ಇಲ್ಲ. ಇರುವ ಕಡೆ ಸರಿಯಾದ ನಿರ್ವಹಣೆ ಇಲ್ಲ. ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ತಕ್ಷಣವೇ ಗ್ರಾಮ ಪಂಚಾಯಿತಿಯವರು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕುನರಸಿಂಹಮೂರ್ತಿ ಖಂಡೇನಹಳ್ಳಿ ನಿವಾಸಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸಿಸಿ ರಸ್ತೆ ಮಾಡಿರುವ ಕಾರಣ ಜಾಗ ಕಿರಿದಾಗಿದೆ. ಬಾಕ್ಸ್ ಚರಂಡಿ ನಿರ್ಮಿಸಲು ಜಾಗದ ಕೊರತೆ ಎದುರಾಗಿದೆ. ಶೀಘ್ರ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಲಾಗುತ್ತದೆಬಾಲ ಸುಬ್ರಮಣಿ ಪಿಡಿಒ ಖಂಡೇನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.