ಚಿತ್ರದುರ್ಗ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಜಿಲ್ಲೆಯಲ್ಲಿ ರೈತರಿಂದ ಖರೀದಿಸಲು ಫೆ.6ರಿಂದ ನೋಂದಣಿ ಪ್ರಾರಂಭಿಸಲಾಗುತ್ತದೆ. ಹೊಸದುರ್ಗ ಮತ್ತು ಹಿರಿಯೂರಿನಲ್ಲಿ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
‘ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ
₹ 11,750 ಬೆಂಬಲ ಬೆಲೆ ಘೋಷಿಸಿದೆ. ನಾಫೆಡ್ ಸಂಸ್ಥೆ ಮೂಲಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದಿಂದ ಹೊಸದುರ್ಗ ಹಾಗೂ ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ತಿಳಿಸಿದರು.
‘ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಲ್‌ನಂತೆ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಖರೀದಿಸಲು ಅವಕಾಶವಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಸಿರಬೇಕು. ಉಂಡೆಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಆಸಕ್ತಿ ಇರುವ ರೈತರು ಫೆ.6 ರಿಂದ ನೋಂದಣಿ ಮಾಡಿಸಬಹುದು. ಮಾರ್ಚ್ 12ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.
‘ಹದಿನೈದು ದಿನಗಳ ಒಳಗಾಗಿ ಖರೀದಿ ಕಾರ್ಯ ಪ್ರಾರಂಭಿಸಬೇಕು. ಖರೀದಿ ಪ್ರಕ್ರಿಯೆ ಜುಲೈ 27ರವರೆಗೂ ಮುಂದುವರಿಯಲಿದೆ. ಖರೀದಿಗಾಗಿ ಅಗತ್ಯ ಗ್ರೇಡರ್ ಹಾಗೂ ಇನ್ನಿತರ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಬೇಕು. ರೈತರ ನೋಂದಣಿ, ಎಫ್‌ಎಕ್ಯೂ ಗುಣಮಟ್ಟ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಗೊಂದಲ ಉಂಟಾಗದಂತೆ ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
‘ಆಧಾರ್ ಸಂಖ್ಯೆ ಜೋಡಣೆಗೊಂಡ ರೈತರ ಬ್ಯಾಂಕ್ ಖಾತೆಗೆ ಮಾತ್ರ ನೇರ ನಗದು ಪಾವತಿ ಮೂಲಕ ಹಣ ಜಮಾ ಮಾಡಬೇಕು. ರೈತರಿಂದ ಮಾತ್ರ ಉಂಡೆ ಕೊಬ್ಬರಿ ಖರೀದಿಸಬೇಕು. ಇದರಲ್ಲಿ ಯಾವುದೇ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಬೆಂಬಲ ಬೆಲೆಯಲ್ಲಿ ಉಂಡೆಕೊಬ್ಬರಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಸಿದ್ಧತೆ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಚಿತ್ರದುರ್ಗ ಎಪಿಎಂಸಿ ಉಪನಿರ್ದೇಶಕ ಎಸ್.ಎನ್. ಪತ್ತಾರ್ ಮಾತನಾಡಿ, ‘ಉಂಡೆಕೊಬ್ಬರಿ ಖರೀದಿಗಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕೊಬ್ಬರಿ ದಾಸ್ತಾನಿಗೂ ವ್ಯವಸ್ಥೆ ಕೈಗೊಳ್ಳಲಾಗಿದೆ’ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಬಸವರಾಜ್ ಮಾತನಾಡಿ, ‘ರೈತರು ಒಂದು ಚೀಲದಲ್ಲಿ ಗರಿಷ್ಠ 40ರಿಂದ 50 ಕೆ.ಜಿ. ಉಂಡೆಕೊಬ್ಬರಿ ತರುವುದರಿಂದ ಆ ಚೀಲವನ್ನು ಖಾಲಿ ಮಾಡಿಸಿ ಖರೀದಿಸಿದ ಕೊಬ್ಬರಿಯನ್ನು ಇಲಾಖೆಯಿಂದಲೇ ಬೇರೆ ಚೀಲದಲ್ಲಿ ಪ್ಯಾಕಿಂಗ್ ಮಾಡಲಾಗುತ್ತದೆ. ಜತೆಗೆ ಉಗ್ರಾಣಕ್ಕೆ ಕಾಲಕಾಲಕ್ಕೆ ಸಾಗಾಣಿಕೆ ಮಾಡಲಾಗುವುದು’ ಎಂದು ತಿಳಿಸಿದರು.
‘ಕಳೆದ ವರ್ಷ ಜಿಲ್ಲೆಯಲ್ಲಿ 2,075 ಕ್ವಿಂಟಲ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು, ಈ ವರ್ಷ ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು 28,315 ಹೆಕ್ಟರ್‌ನಲ್ಲಿ ತೆಂಗು ಬೆಳೆ ಇದ್ದು, ಹಿರಿಯೂರಿನಲ್ಲಿ 10,037 ಹೆಕ್ಟೇರ್ ಇದೆ. ಉಳಿದಂತೆ ಚಳ್ಳಕೆರೆ- 822, ಚಿತ್ರದುರ್ಗ- 1,049, ಹೊಳಲ್ಕೆರೆ- 5,762, ಮೊಳಕಾಲ್ಮುರಿನಲ್ಲಿ 138 ಹೆಕ್ಟೇರ್ ತೆಂಗು ಬೆಳೆ ಇದೆ. ಹೀಗಾಗಿ ಈ ಬಾರಿ ಅಂದಾಜು ಎರಡರಿಂದ ಎರಡೂವರೆ ಸಾವಿರ ಕ್ವಿಂಟಲ್ ಉಂಡೆಕೊಬ್ಬರಿ ಖರೀದಿಯಾಗುವ ಸಾಧ್ಯತೆ ಇದೆ’ ಎಂದರು.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಚಂದ್ರಯ್ಯ ಹಿರೇಮಠ, ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ಮಾರುತಿ, ಸಹಕಾರ ಸಂಘಗಳ ಉಪನಿಬಂಧಕ ಎಚ್. ಮೂರ್ತಿ, ಹೊಸದುರ್ಗ ಎಪಿಎಂಸಿ ಕಾರ್ಯದರ್ಶಿ ಗೌತಮ್, ಹಿರಿಯೂರಿನ ಅತಾವುಲ್ಲಾ, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕ ರಾಗ್ಯಾನಾಯ್ಕ ಇದ್ದರು.
ಸದ್ಯ ಮಾರುಕಟ್ಟೆಯಲ್ಲಿ ಉಂಡೆಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ₹ 9,500ರಿಂದ ₹ 10,600ರವರೆಗೂ ದೊರೆಯುತ್ತಿದೆ. ಸರ್ಕಾರ ₹ 11,750 ಬೆಂಬಲ ಬೆಲೆ ನಿಗದಿಪಡಿಸಿರುವುದರಿಂದ ಹೆಚ್ಚಿನ ರೈತರು ಖರೀದಿಗೆ ಮುಂದಾಗಬಹುದು.
-ರಮೇಶ್‍ಕುಮಾರ್, ಜಂಟಿ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.