ಶ್ರೀರಾಂಪುರ: ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಶ್ರೀರಾಂಪುರಕ್ಕೆ ಪ್ರಥಮ ದರ್ಜೆ ಕಾಲೇಜು ಬೇಕೆಂಬ ಬೇಡಿಕೆಯಿಟ್ಟು 2 ದಶಕಗಳು ಕಳೆದಿವೆ. ಹೋಬಳಿಯ ನಾಗರಿಕರು
ಜನಪ್ರತಿನಿಧಿಗಳಿಗೆ ಈ ಬಗ್ಗೆ ಒತ್ತಾಯಿಸುತ್ತಾ ಬಂದಿದ್ದರೂ ಅದು ಇನ್ನೂ ಅನುಷ್ಠಾನಕ್ಕೆ ಬರುವ ಲಕ್ಷಣಗಳು
ಕಾಣುತ್ತಿಲ್ಲ.
ಹೊಸದುರ್ಗ ಪಟ್ಟಣದಲ್ಲಿ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು ಇಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲ್ಲೂಕಿಗೆ ಇನ್ನೊಂದು ಪದವಿ ಕಾಲೇಜಿನ ಅವಶ್ಯಕತೆ ಇದೆ.
ಹೋಬಳಿಯ ವ್ಯಾಪ್ತಿಯಲ್ಲಿ ಶ್ರೀರಾಂಪುರ ಸೇರಿದಂತೆ 3 ಪದವಿ ಪೂರ್ವ ಕಾಲೇಜುಗಳಿವೆ. ಪಿಯು ಮುಗಿಸಿ ಹೊರಬಂದ ಗ್ರಾಮೀಣ ಭಾಗದ ಯುವತಿಯರು ಹಳ್ಳಿಗಳಿಂದ ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಹುಳಿಯಾರು ಪಟ್ಟಣಗಳಿಗೆ ಕಿಕ್ಕಿರಿದು ತುಂಬುವ ಬಸ್ಸುಗಳಲ್ಲಿ 25-30 ಕಿ.ಮೀ. ದೂರದ ಪದವಿ ಕಾಲೇಜಿಗೆ ಹೋಗಿ ಬರುವುದು ತುಂಬಾ ತ್ರಾಸದಾಯಕವಾಗಿದೆ. ಇದೇ ಕಾರಣಕ್ಕೆ ಎಷ್ಟೋ ಕುಟುಂಬಗಳಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಪದವಿ ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಹಳಷ್ಟು ವಿದ್ಯಾರ್ಥಿನಿಯರು ಪದವಿ ಶಿಕ್ಷಣದಿಂದ
ವಂಚಿತರಾಗುತ್ತಿದ್ದಾರೆ.
ಹೋರಾಟ ಅನಿವಾರ್ಯ: ‘ಶ್ರೀರಾಂಪುರಕ್ಕೆ ಪದವಿ ಕಾಲೇಜು ಮಂಜೂರು ಮಾಡಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಶ್ರೀರಾಂಪುರ ಹೋಬಳಿಯ ನಾಗರಿಕರು ಪದವಿ ಕಾಲೇಜಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಶ್ರೀರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಸಿ. ರಮೇಶ್.
ಈಚೆಗೆ ಶ್ರೀರಾಂಪುರದಲ್ಲಿ ನಡೆದ
ಕಾರ್ಯಕ್ರಮವೊಂದರಲ್ಲಿ ಪದವಿ ಕಾಲೇಜು ವಿಚಾರವಾಗಿ ಇಲ್ಲಿಯ ಗ್ರಾಮ ಪಂಚಾಯಿತಿ ವತಿಯಿಂದ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮ್ಮದೇ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಸರಿಯಾಗಿ ಸ್ಪಂದಿಸದಿರುವ ಬಗ್ಗೆ ಬೇಸರ
ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಅದರಂತೆ ಕಳೆದ ವರ್ಷ ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಶ್ರೀರಾಂಪುರಕ್ಕೆ ಹೊಸದಾಗಿ ಪದವಿ ಕಾಲೇಜು ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ಎತ್ತಿದ್ದರು. ಉನ್ನತ ಶಿಕ್ಷಣ
ಸಚಿವರು ಈ ಕುರಿತು ಪರಿಶೀಲಿಸಲಾಗುವುದು ಎಂದಷ್ಟೇ ಲಿಖಿತ ಉತ್ತರ ನೀಡಿದ್ದರು. ಅಲ್ಲಿಂದೀಚೆ ಈ ವಿಚಾರವಾಗಿ ಯಾವುದೇ ಪ್ರಕ್ರಿಯೆಗಳು ನಡೆದಂತೆ
ಕಾಣುತ್ತಿಲ್ಲ.
ಇದರಿಂದ ಶ್ರೀರಾಂಪುರ ಹೋಬಳಿಯ ಜನತೆಗೆ ಹಾಗೂ ಪದವಿ ವಿದ್ಯಾಭ್ಯಾಸದ ಕನಸು ಹೊತ್ತ ಹಳ್ಳಿಮಕ್ಕಳ ಆಸೆಗೆ ಸೂಕ್ತ ಭರವಸೆ ನೀಡಲು ಸರ್ಕಾರ ವಿಫಲವಾಗಿದೆ. ಶನಿವಾರ ಮುಖ್ಯಮಂತ್ರಿ
ಹೊಸದುರ್ಗಕ್ಕೆ ಬರುತ್ತಿದ್ದು ಶಾಸಕರು ಶ್ರೀರಾಂಪುರಕ್ಕೆ ಪದವಿ ಕಾಲೇಜು ವಿಚಾರ ಪ್ರಸ್ತಾಪ ಮಾಡಿ ಕಾರ್ಯಗತ ಮಾಡಿಸುವರೆಂದು ಹೋಬಳಿಯ ಜನ ಆಸೆಗಣ್ಣಿನಿಂದ
ನೋಡುತ್ತಿದ್ದಾರೆ.
.....
ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಟು ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯಬೇಕು. ಪುನಃ ಹೊಸದುರ್ಗ ಬಸ್ ನಿಲ್ದಾಣದಿಂದ ಸುಮಾರು 2 ಕಿ.ಮೀ. ದೂರ ನಡೆದುಕೊಂಡು ಕಾಲೇಜಿಗೆ ಹೋಗಬೇಕು. ಮನೆಗೆ ಬರುವುದು ಸಂಜೆ 5 ಆಗುತ್ತದೆ.
– ಕೋಮಲ್ ಲೋಹರ್, ಪದವಿ ವಿದ್ಯಾರ್ಥಿನಿ, ಶ್ರೀರಾಂಪುರ
..........
ಶ್ರೀರಾಂಪುರ ಶೈಕ್ಷಣಿಕವಾಗಿ ಮುಂದುವರಿಯಬೇಕು. ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿರುವ ಹೋಬಳಿಯ ವಿದ್ಯಾರ್ಥಿಗಳಿಗೆ ಪದವಿ ಕಾಲೇಜಿನ ಅವಶ್ಯಕತೆ ಇದೆ. ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.
– ವೇದಮೂರ್ತಿ,ಶ್ರೀರಾಂಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.