ಚಿತ್ರದುರ್ಗ: ಐದು ವರ್ಷಗಳಿಂದ ಬೆಳಗಾವಿಯಲ್ಲಿ ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ್ ಅವರ ನಿಧನಕ್ಕೆ ಜಿಲ್ಲೆಯ ಗುತ್ತಿಗೆದಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಿದರು. ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮಂಜುನಾಥ್, ‘ಮೂರು ವರ್ಷಗಳಿಂದ ಶೇ 40 ಕಮಿಷನ್ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಸಚಿವರಿಂದ ಕಮಿಷನ್ ವಿಚಾರವಾಗಿ ನೊಂದಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ’ ಎಂದು ವಿಷಾದಿಸಿದರು.
‘ಕಮಿಷನ್ ವಿಚಾರದಲ್ಲಿ ಏನಾದರೂ ಒತ್ತಡ ಬಂದರೆ ರಾಜ್ಯ ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ ನೇರವಾಗಿ ತಿಳಿಸಿದರೆ ನಿಮ್ಮ ಜೊತೆ ಸದಾ ನಾವಿರುತ್ತೇವೆ. ಮೂರು ವರ್ಷಗಳಿಂದ ನೊಂದ ಗುತ್ತಿಗೆದಾರರಿಂದ ಕಮಿನಷ್ ವಿಚಾರದ ದಾಖಲೆಗಳನ್ನು ಸಂಗ್ರಹಿಸಿದ್ದು, ಶೀಘ್ರ ರಾಜ್ಯದಲ್ಲಿ ಹೆಚ್ಚು ಕಮಿಷನ್ ತೆಗೆದುಕೊಳ್ಳುತ್ತಿರುವ ಕೆಲವು ಶಾಸಕರ ಆಡಿಯೊ ವಿಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು’ ಎಂದರು. ಗುತ್ತಿಗೆದಾರರ ಸಂಘದ ಹಿರಿಯ ಉಪಾಧ್ಯಕ್ಷ ಕೆ. ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಕೆ. ಅನ್ವರ್ ಬಾಷಾ
ಇದ್ದರು.
....
ಸಂತೋಷ ಪಾಟೀಲ್ ಆರೋಪದ ಬಗ್ಗೆ 10-15 ದಿನಗಳ ಹಿಂದೆ ಚರ್ಚೆ ನಡೆದಿತ್ತು. ಆರ್‌ಡಿಪಿಆರ್ ಕಾರ್ಯದರ್ಶಿ ಸಹ ಸ್ಪಷ್ಟನೆ ನೀಡಿದ್ದರು. ಆದರೆ ಆತ್ಮಹತ್ಯೆ ನಿಜಕ್ಕೂ ದುರಂತ. ಮುಖ್ಯಮಂತ್ರಿ ಈ ಬಗ್ಗೆ ಗಮನಹರಿಸುತ್ತಾರೆ.
-ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.