ADVERTISEMENT

ಚಿತ್ರದುರ್ಗ: ವಸತಿ ಶಾಲೆ ಪ್ರವೇಶ ಪಡೆಯಲು ಪೈಪೋಟಿ

ಖಾಸಗಿ ಕಾನ್ವೆಂಟ್‌ಗಳಿಗೆ ಸಡ್ಡು ಒಡೆಯುತ್ತಿರುವ ಸರ್ಕಾರಿ ಶಾಲೆಗಳು, ಮುಗಿಬೀಳುತ್ತಿರುವ ಪೋಷಕರು

ಎಂ.ಎನ್.ಯೋಗೇಶ್‌
Published 26 ಜೂನ್ 2024, 6:46 IST
Last Updated 26 ಜೂನ್ 2024, 6:46 IST
ಮೆದೇಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೋಟ
ಮೆದೇಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೋಟ   

ಚಿತ್ರದುರ್ಗ: ಸರ್ಕಾರಿ ವಸತಿ ಶಾಲೆಗಳ ಪ್ರವೇಶಾತಿಗೆ ಜಿಲ್ಲೆಯಾದ್ಯಂತ ಅಪಾರ ಬೇಡಿಕೆ ಸೃಷ್ಟಿಯಾಗಿದ್ದು ಮಕ್ಕಳು, ಪಾಲಕರು ಸೀಟು ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಸ್ವಂತ ಕಟ್ಟಡ, ಮೂಲ ಸೌಲಭ್ಯ, ಇಂಗ್ಲಿಷ್‌ ಮಾಧ್ಯಮದ ಮೂಲಕ ಗಮನ ಸೆಳೆಯುತ್ತಿರುವ ಈ ವಸತಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಡ್ಡು ಒಡೆಯುತ್ತಿವೆ.

ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌) ಅಡಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್‌.ಅಂಬೇಡ್ಕರ್‌ ಶಾಲೆ, ಏಕಲವ್ಯ ಶಾಲೆ ಸೇರಿ ಜಿಲ್ಲೆಯಲ್ಲಿ 35 ವಸತಿ ಶಾಲೆಗಳಿವೆ. ಎಲ್ಲಾ ಶಾಲೆಗಳು ಶೈಕ್ಷಣಿಕ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದ್ದು ಪ್ರವೇಶಾತಿಗೆ ತೀವ್ರ ಬೇಡಿಕೆ ಸೃಷ್ಟಿಯಾಗಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 14 ಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸಿರುವುದು ಪ್ರವೇಶಾತಿಗೆ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇತರ ಶಾಲೆಗಳು ಕೂಡ ಶೇ 95ರಿಂದ ಶೇ 98ರವರೆಗೂ ಫಲಿತಾಂಶ ಪಡೆದಿದ್ದು ಮಕ್ಕಳು ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರವಾಗಿವೆ. ಹಲವರು ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ವಸತಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದವ ವರ್ಗಗಳ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿ ಜಿಲ್ಲೆಯಲ್ಲಿ 35 ವಸತಿ ಶಾಲೆಗಳಿವೆ, ಎಲ್ಲವೂ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಶಿಕ್ಷಣ, ವಸತಿ ಸೇರಿದಂತೆ ಸಕಲ ಸೌಲಭ್ಯಗಳು ಸಂಪೂರ್ಣ ಉಚಿತವಾಗಿದ್ದು ಗ್ರಾಮೀಣ ಭಾಗದ ಮಕ್ಕಳನ್ನು ಆಕರ್ಷಿಸುತ್ತಿವೆ. ಹೀಗಾಗಿ ಹೆಚ್ಚಿನ ಮಕ್ಕಳು ವಸತಿ ಶಾಲೆಗಳ ದಾಖಲಾತಿಗೆ ಅರ್ಜಿ ಹಾಕಿದ್ದಾರೆ.

ಇಂದಿರಾ ಗಾಂಧಿ ವಸತಿ ಶಾಲೆ 16, ಮೊರಾರ್ಜಿ ದೇಸಾಯಿ ವಸತಿ ಶಾಲೆ 12, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ 6, ಏಕಲವ್ಯ ವಸತಿ ಶಾಲೆಗಳಿಂದ 1,750 ಸೀಟುಗಳು ಲಭ್ಯ ಇವೆ. ಬೇಡಿಕೆ ತೀವ್ರವಾಗಿದ್ದು ಜಿಲ್ಲೆಯಾದ್ಯಂತ 6,500 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದು ಸೀಟಿಗಾಗಿ ನಾಲ್ವರು ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ವಸತಿ ಶಾಲೆಗಳ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶೇ 75 ಸೀಟು ಮೀಸಲಿಡಲಾಗಿದೆ. ಶೇ 25 ಸೀಟು ಹೊರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸಿಗಲಿವೆ. ಸರ್ಕಾರದ ಆದೇಶದಂತೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ.
ಜಗದೀಶ್‌ ಹೆಬ್ಬಾಳ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ

6ನೇ ತರಗತಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು 5ನೇ ತರಗತಿ ಪೂರೈಸಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಎದುರಿಸಿದ್ದಾರೆ. ರಾಜ್ಯ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು ಈಗಾಗಲೇ 2 ಹಂತದ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. 3ನೇ ಆಯ್ಕೆ ಪಟ್ಟಿಗಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾಯುತ್ತಿದ್ದಾರೆ. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕ, ಪ್ರವರ್ಗ ಹಾಗೂ ಲಿಂಗದ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ.

‘ಮಗನನ್ನು ಇಂಗ್ಲಿಷ್‌ ಮೀಡಿಯಂ ಕಾನ್ವೆಂಟ್‌ಗೆ ಸೇರಿಸಿದ್ದರೂ ಆತ ಓದಿನಲ್ಲಿ ಹಿಂದುಳಿದಿದ್ದಾನೆ. ಹೀಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪರೀಕ್ಷೆ ಬರೆಸಿದ್ದೇವೆ. 3ನೇ ಪಟ್ಟಿಯಲ್ಲಿ ಸೀಟು ದೊರೆಯುವ ವಿಶ್ವಾಸವಿದೆ’ ಎಂದು ಭರಮಸಾಗರದ ಪಾಲಕರೊಬ್ಬರು ಹೇಳಿದರು.

ಜಿಲ್ಲೆಯ 15 ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತವೆ. ಅವುಗಳಲ್ಲಿ ಶೇ 75ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. 16 ಶಾಲೆಗಳು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯದ ಅಡಿ ನಡೆಯುತ್ತಿದ್ದು ಶೇ 75ರಷ್ಟು ಸೀಟುಗಳನ್ನು ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

4 ವಸತಿ ಶಾಲೆಗಳು ಇತರ ಹಿಂದುಳಿದ ವರ್ಗಗಳ ಇಲಾಖೆ ಉಸ್ತುವಾರಿಯಲ್ಲಿ ನಡೆಯುತ್ತಿವೆ. ಅವುಗಳಲ್ಲಿ ಶೇ 75ರಷ್ಟು ಸೀಟನ್ನು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ. ಎಲ್ಲಾ ವರ್ಗಗಳಿಗೂ ಸೀಟು ದೊರೆಯಬೇಕು ಎಂಬ ಉದ್ದೇಶದಿಂದ ವಿವಿಧ ವರ್ಗಗಳಿಗೆ ಸೀಟು ಮೀಸಲಿಡಲಾಗಿದೆ. 

ಹೈರಾಣಾದ ಅಧಿಕಾರಿಗಳು

ವಸತಿ ಶಾಲೆಗಳ ಸೀಟು ಪಡೆಯಲು ಪಾಲಕರು ಮುಗಿ ಬೀಳುತ್ತಿದ್ದು ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡಗಳ ಇಲಾಖೆ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಶಿಫಾರಸು ಪತ್ರದೊಂದಿಗೆ ಸೀಟಿಗೆ ಒತ್ತಾಯ ಮಾಡಲಾಗುತ್ತಿದೆ. ಒತ್ತಡಕ್ಕೆ ಸಿಲುಕಿರುವ ಅಧಿಕಾರಿಗಳು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ಪರೀಕ್ಷೆ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರ ನಿರ್ವಹಿಸಿದೆ. ಆದರೂ ಪಾಲಕರು ಸೀಟು ಕೊಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆ ಆದಷ್ಟು ಬೇಗ ಮುಗಿದರೆ ಸಾಕು ಎಂದು ಕಾಯುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಂಕಿ– ಅಂಶ

ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ;16

ಸಮಾಜ ಕಲ್ಯಾಣ ಇಲಾಖೆ;15

ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ;4

ಒಟ್ಟು ವಸತಿ ಶಾಲೆ;35

ಸೀಟುಗಳ ಲಭ್ಯತೆ; 1750

ಅರ್ಜಿ ಸಲ್ಲಿಕೆ; 6500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.