ಚಿತ್ರದುರ್ಗ: ದೇಶದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಮಾಡಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಟೀಕಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ನೆಹರೂ ಜಯಂತಿಯಲ್ಲಿ ಮಾತನಾಡಿದ ಅವರು, ‘ಶ್ರೀಮಂತಿಕೆಯಲ್ಲಿ ಬೆಳೆದ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ದೇಶದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದರು’ ಎಂದು ಹೇಳಿದರು.
‘ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶ ಬಡತನದಲ್ಲಿತ್ತು. ರಸ್ತೆ, ಸಂಪರ್ಕ ವ್ಯವಸ್ಥೆ, ಜಲಾಶಯ ನಿರ್ಮಾಣ ಮಾಡಿದ್ದು ನೆಹರೂ. ಪಂಚವಾರ್ಷಿಕ ಯೋಜನೆ ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅವರ ಕುಟುಂಬವನ್ನು ಟೀಕಿಸುವ ಕೀಳುಮಟ್ಟಕ್ಕೆ ಬಿಜೆಪಿ ಇಳಿದಿದ್ದು ವಿಪರ್ಯಾಸ’ ಎಂದು ಹೇಳಿದರು.
‘ಕಾಂಗ್ರೆಸ್ ಕೊಡುಗೆಯನ್ನು ಬಿಜೆಪಿ ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಬ್ಬಿಸಿ ಜನರ ದಿಕ್ಕು ತಪ್ಪಿಸುತ್ತಿದೆ. ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಿ ದೇಶವನ್ನು ಹಾಳು ಮಾಡುತ್ತಿದೆ’ ಎಂದು ಆರೋಪಿಸಿದರು.
ಬಿಜೆಪಿ ಕೊಡುಗೆ ಏನು?:‘ಇಸ್ರೊ, ಎಚ್‌ಎಎಲ್, ಬಿಎಸ್‌ಎನ್‌ಎಲ್, ಏರ್ ಇಂಡಿಯಾ ಸೇರಿ ಸಾರ್ವಜನಿಕ ವಲಯದ ಉದ್ಯಮ ಆರಂಭಿಸಿದ್ದು ನೆಹರೂ. ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ಜಲಾಶಯಗಳನ್ನು ನಿರ್ಮಿಸಿದರು. ಈ ದೇಶಕ್ಕೆ ಬಿಜೆಪಿ ಯಾವ ಕೊಡುಗೆ ಕೊಟ್ಟಿದೆ’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ ಪ್ರಶ್ನಿಸಿದರು.
‘ದೇಶಕ್ಕೆ ಸ್ವಾತಂತ್ರ್ಯ ತಂದಕೊಡಲು ಕಾಂಗ್ರೆಸ್ ಹೋರಾಟ ನಡೆಸಿತು. ಆರ್‌ಎಸ್‌ಎಸ್ ನಾಯಕರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲೇ ಇಲ್ಲ. ದೇಶದ ವಿಮೋಚನೆಗಾಗಿ ಅವರು ಹೋರಾಟ ನಡೆಸಿದ ನಿದರ್ಶನ ಇಲ್ಲ. ಬಿಜೆಪಿಯ ಹುಸಿ ದೇಶಭಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಸಿ.ಶಿವು ಯಾದವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.