ಹೊಸದುರ್ಗ: ‘ಪಟ್ಟಣದಲ್ಲಿ ಶನಿವಾರ ನಡೆದ ಕಾಮಗಾರಿ ಮಾಹಿತಿ ಕೇಳಿದ್ದಕ್ಕೆ ಹಲ್ಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅನಗತ್ಯವಾಗಿ ನನ್ನ ಹೆಸರು ಬಳಸುತ್ತಿದ್ದಾರೆ. ನನ್ನ ಏಳಿಗೆ ಸಹಿಸದ ಕೆಲವರು ಬಿಜೆಪಿ ಟಿಕೆಟ್ ತಪ್ಪಿಸಲು ಪಕ್ಷದ ಮುಖಂಡರೇ ಹೀಗೆ ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ಆರೋಪಿಸಿದರು.
‘ರಾಜ್ಯದ ಬಿಜೆಪಿ ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಬಸವ ಜಯಂತಿ ಸಂದರ್ಭದಲ್ಲೂ ನಾನು ಲಿಂಗಾಯತ ವಿರೋಧಿ ಎಂಬ ಪಟ್ಟ ಕಟ್ಟಲು ಯತ್ನಿಸಿ ವಿಫಲರಾದರು. ಈ ಬಾರಿಯೂ ಘಟನೆಗೂ ನನಗೂ ಸಂಬಂಧ ಕಲ್ಪಿಸಿ ವಿಫಲರಾಗಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಪಟ್ಟಣದ ಸಂಗಮನಗರದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಕೆಲವು ಮುಖಂಡರು ಕೂಲಿಕಾರ್ಮಿಕರನ್ನು ಪ್ರಶ್ನೆ ಮಾಡಿದ್ದಾರೆ. ಅವರು ಎಂಜಿನಿಯರ್ ಅಥವಾ ಗುತ್ತಿಗೆದಾರರನ್ನು ಕೇಳಬೇಕಿತ್ತು. ಅದನ್ನು ಹೊರತುಪಡಿಸಿ, ಕೂಲಿ ಕಾರ್ಮಿಕರಿಗೆ ದೌರ್ಜನ್ಯ ವೆಸಗಿದ್ದಾರೆ. ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿ, ಅವರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ಅಪರಾಧ ಎಸಗಿದವರನ್ನು ಪೊಲೀಸ್ ಠಾಣೆಯಿಂದ ಬಿಡಿಸಲು ಬರುತ್ತಾರೆ. ಒಪ್ಪದಿದ್ದರೆ ಸುಮ್ಮನೆ ಆರೋಪ ಮಾಡುತ್ತಾರೆ’ ಎಂದು ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
‘ಗೂಳಿಹಟ್ಟಿ ಶೇಖರ್ ಅವರನ್ನು ಶಾಸಕರನ್ನಾಗಿ ಮಾಡಿದ್ದು, ನಮ್ಮ ಸಮುದಾಯದವರ (ಭೋವಿ ಸಮಾಜ) ಹಾವಳಿ ಹೆಚ್ಚಾಗಿದೆ ಎಂದು ಹಲವರು ಮಾತಾಡುತ್ತಾರೆ. ಜೀತ ಪದ್ಧತಿಯಲ್ಲೇ ಬೆಳೆದ ನಾವು ಹಾಗೆಯೇ ಇರಬೇಕೆಂದು ಹಲವರ ಉದ್ದೇಶವಿದೆ. ನಾವು ವಡ್ಡರಾಗಿ ಹುಟ್ಟಿದ್ದು ತಪ್ಪಾ? ಜಾತ್ಯತೀತವಾಗಿರುವ ನನಗೆ ಜಾತಿನಿಂದನೆ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.
ಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿದ್ದರೂ ಹಲವರು ವಿರೋಧ ವ್ಯಕ್ತಪಡಿಸುತ್ತಾರೆ. ಪೊಲೀಸರ ತನಿಖೆಗೂ ಸಹಕರಿಸಲಿಲ್ಲ ಎಂದರು.
ಘಟನೆಯ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ. ಮುಖಂಡರು ಇದನ್ನು ಮುಂದುವರಿಸುವುದನ್ನು ಬಿಡಬೇಕು.ಚರ್ಚಿಸಿ ರಾಜಿಸಂಧಾನ ಮಾಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.