ಚಿತ್ರದುರ್ಗ: ಸಂವಿಧಾನ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ ಸಂವಿಧಾನದ ಪೀಠಿಕೆ ಪ್ರತಿಧ್ವನಿಸಿತು.
ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ, ಸಂವಿಧಾನದ ಪೀಠಿಕೆಯ ಬೋಧನೆ, ಪ್ರತಿಜ್ಞಾವಿಧಿ ಸ್ವೀಕಾರ ಪ್ರಕ್ರಿಯೆಗಳು ಜರುಗಿದವು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಚೇರಿ ಸಿಬ್ಬಂದಿಗೆ ಸಂವಿಧಾನದ ಪೀಠಿಕೆ ಬೋಧನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ‘ಸಮಾಜದಲ್ಲಿ ಎಲ್ಲರಿಗೂ ಸಮಾನ ರೀತಿಯಲ್ಲಿ ಬದುಕುವ ಅವಕಾಶವನ್ನು ಸಂವಿಧಾನ ನೀಡಿದೆ. ಅದರಿಂದಾಗಿ ನಾವು ಸಮಾಜದಲ್ಲಿ ಗೌರವಯುತವಾಗಿ, ಘನತೆಯಿಂದ ಬದುಕಲು ಸಾಧ್ಯವಾಗಿದೆ. ಸಂವಿಧಾನದ ತತ್ವಗಳಿಗೆ ಅನುಸಾರವಾಗಿ ನಾವೆಲ್ಲರೂ ಜೀವಿಸಬೇಕು’ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಭೂದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ಜಿಲ್ಲಾಧಿಕಾರಿ ಕಚೇರಿಯ ಪತ್ರಾಂಕಿತ ಕಚೇರಿ ಸಹಾಯಕ ಸಿದ್ದೇಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಇದ್ದರು.
ಜಿಲ್ಲಾ ಪಂಚಾಯಿತಿ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂವಿಧಾನ ದಿನ ಆಚರಿಸಲಾಯಿತು. ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸಿ.ಎನ್.ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಮಧು, ಸಹಾಯಕ ಕಾರ್ಯದರ್ಶಿ ರವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್ ಇದ್ದರು.
ಶಾಲಾ ಶಿಕ್ಷಣ ಇಲಾಖೆ: ಕವಾಡಿಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ‘ಬಡತನ, ಜಾತಿಪದ್ಧತಿ, ಆರ್ಥಿಕ ಅಸಮತೋಲನ, ರಾಗ- ದ್ವೇಷಗಳ ಮಧ್ಯೆ ಭಾರತ ಒಗ್ಗಟಿನಲ್ಲಿ ಇರಲು ಮತ್ತು ಸಮಷ್ಟಿಯ ಹಿತ ಕಾಪಾಡುವಲ್ಲಿ ಸಂವಿಧಾನಕ್ಕೆ ಅಗ್ರಮಾನ್ಯ ಸ್ಥಾನ ದೊರಕಿದೆ’ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್ ಕುಮಾರ್, ಸಿ.ಆರ್.ಪಿ ಅಜಯ್ ಕುಮಾರ್ ಇದ್ದರು.
ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ: ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೆಹರೂ ಯುವ ಕೇಂದ್ರ, ಪ್ರಜಾ ಸೇವಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಆಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ವೈ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮನೆ ಮನೆಗೆ, ಜನ ಸಾಮಾನ್ಯರಿಗೆ ಸಂವಿಧಾನದ ಕುರಿತು ಅರಿವು ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಸಂವಿಧಾನದ ಮಹತ್ವ ಎಲ್ಲರನ್ನೂ ತಲುಪಬೇಕು’ ಎಂದರು.
ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ ಮಾತನಾಡಿ, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಆದರ್ಶಪ್ರಾಯರು. ಅವರ ಪರಿಶ್ರಮದ ಫಲವಾಗಿ ನಮಗೆ ಸದೃಢವಾದ ಸಂವಿಧಾನ ದೊರೆತಿದೆ’ ಎಂದರು.
ಎಂ.ಮೂರ್ತಿ, ಪಿ.ಬಿ.ಭರತ್, ಶ್ರೀನಿವಾಸ್ ಮಳಲಿ ಇದ್ದರು.
ಸಂವಿಧಾನದ ಅಡಿ ಕೆಲಸ ಮಾಡಿ
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪಕ್ಷದ ಹಿರಿಯ ಮುಖಂಡ ಗಾಂಧಿ ವಾದಿ ಎಚ್.ಹನುಮಂತಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ‘ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದು ಪ್ರತಿಯೊಬ್ಬರೂ ಸಂವಿಧಾನದ ಹಾದಿಯಲ್ಲಿ ನಡೆಯಬೇಕು’ ಎಂದರು.
‘ಇಂದಿನ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದವರೆಲ್ಲರಿಗೂ ಶೀಘ್ರವಾಗಿ ಅಧಿಕಾರಕ್ಕಾಗಿ ಹಂಬಲಿಸುತ್ತಾರೆ. ಬೇಗ ಎಲ್ಲಲ್ಲಾ ರೀತಿಯ ಸೌಲಭ್ಯವನ್ನು ಅನುಭವಿಸಲು ಹಾತೊರೆಯುತ್ತಾರೆ. ಪಕ್ಷದ ಬಾವುಟ ಕಟ್ಟಲು ಸಮಯ ಇಲ್ಲ ಚುನಾವಣೆ ಬಂದರೆ ಎಲ್ಲರೂ ಟಿಕೆಟ್‌ಗೆ ಬರುತ್ತಾರೆ. ಹಿರಿಯರು ಸಂವಿಧಾನದ ಅಡಿ ಪಕ್ಷ ಕಟ್ಟಿದ್ದಾರೆ. ಕಿರಿಯರು ಕೂಡ ಅದೇ ಹಾದಿಯಲ್ಲಿ ನಡೆಯಬೇಕು. ಲೆಟರ್‌ಹೆಡ್ ಹಿಡಿದು ಓಡಾಡುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.
‘ಪಕ್ಷದ ವತಿಯಿಂದ ನಡೆಯುವ ಸಮಾರಂಭಗಳಲ್ಲಿ ಕೆಲಸ ಮಾಡದ ಮುಖಂಡರ ಹುದ್ದೆಗಳನ್ನು ರದ್ದು ಮಾಡಬೇಕು. ಸಂವಿಧಾನ ದಿನಾಚರಣೆ ಸೇರಿ ಇಂತಹ ಕಾರ್ಯಕ್ರಮಗಳಿಗೆ ಕಾರ್ಯಕರ್ತರೇ ಬರುವುದಿಲ್ಲ. ಆದರೆ ಅಧಿಕಾರ ಸಿಗುತ್ತದೆ ಎಂದರೆ ಎಲ್ಲರೂ ತುಂಬಿ ಬರುತ್ತಾರೆ. ಈ ಮನೋಭಾವ ಬಿಡಬೇಕು. ಬದ್ಧತೆಯಿಂದ ಸಮಾರಂಭ ಆಯೋಜನೆ ಮಾಡಬೇಕು’ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಕಾನೂನು ವಿಭಾಗದ ಸುದರ್ಶನ್ ಮುಖಂಡರಾದ ಡಿ.ಎನ್.ಮೈಲಾರಪ್ಪ ಬೀಸನಹಳ್ಳಿ ಜಯಣ್ಣ ಎನ್.ಡಿ.ಕುಮಾರ್ ಎಂಬಿಟಿ ಜಮೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.