ADVERTISEMENT

ದೆಹಲಿಯಿಂದ ಮರಳಿದ ವ್ಯಕ್ತಿಗೆ ಕೋವಿಡ್

ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವಕ

​ಪ್ರಜಾವಾಣಿ ವಾರ್ತೆ
Published 29 ಮೇ 2020, 13:23 IST
Last Updated 29 ಮೇ 2020, 13:23 IST

ಚಿತ್ರದುರ್ಗ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗೆ ದೆಹಲಿಯಲ್ಲಿ ತರಬೇತಿ ಪಡೆದು ಜಿಲ್ಲೆಗೆ ಮರಳಿದ 23 ವರ್ಷದ ಯುವಕನಿಗೆ ‘ಕೋವಿಡ್‌–19’ ಅಂಟಿರುವುದು ಖಚಿತವಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಹಿರಿಯೂರು ತಾಲ್ಲೂಕಿನ ಧರ್ಮಪುರ ಸಮೀಪದ ಸಕ್ಕರೆ ಗ್ರಾಮದ ಯುವಕ ಧರ್ಮಪುರದ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇವರನ್ನು ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಿ-2584 ರೋಗಿಯೊಂದಿಗೆ ಪ್ರಯಾಣ ಮಾಡಿದ 12 ಜನ ಸೇರಿದಂತೆ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಿ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಸೋಂಕಿತ ಯುವಕ ಯುಪಿಎಸ್‌ಸಿ ಪರೀಕ್ಷೆಗೆ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲೇ ಸಿಲುಕಿದ್ದರು. ಕೋಚಿಂಗ್‌ಗೆ ಅವಕಾಶ ಇಲ್ಲದಿರುವ ಪರಿಣಾಮ ಸ್ವಗ್ರಾಮಕ್ಕೆ ಬರಲು ಇಚ್ಛಿಸಿದ್ದರು. ಮೇ 14ರಂದು ರೈಲಿನಲ್ಲಿ ಹೊರಟ ಇವರು ಮೇ 15ರಂದು ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮೇ 16ರಂದು ಚಿತ್ರದುರ್ಗ ತಲುಪಿದ್ದರು.

ADVERTISEMENT

‘ಸಾರಿಗೆ ಸಂಸ್ಥೆಯ ಕೆ.ಎ.63, ಎಫ್‌ 0170 ಬಸ್ಸಿನಲ್ಲಿ ಇವರು ಚಿತ್ರದುರ್ಗಕ್ಕೆ ಬಂದಿದ್ದರು. ಸೋಂಕಿತ ಯುವಕನೊಂದಿಗೆ ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮುರು ಹಾಗೂ ಹೊಳಲ್ಕೆರೆಯ 12 ಜನ ಸಹ ಪ್ರಯಾಣಿಕರು ಇದ್ದರು. ಹೊರ ರಾಜ್ಯದಿಂದ ಬಂದ ಈ ಎಲ್ಲ 12 ಜನರನ್ನು ಆಯಾ ತಾಲ್ಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿತ್ತು’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಮಾಹಿತಿ ನೀಡಿದ್ದಾರೆ.

ಮೊದಲ ಬಾರಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲರ ವರದಿ ನೆಗೆಟಿನ್‌ ಎಂದಿತ್ತು. ಮೇ 24ರಂದು ಎರಡನೇ ಬಾರಿಗೆ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ 23 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಯುವಕನ ಆರೋಗ್ಯ ಸ್ಥಿರವಾಗಿದ್ದು, ಸೋಂಕಿನ ಲಕ್ಷಣ ಕಂಡುಬಂದಿಲ್ಲ.

ಸೋಂಕಿತ ವ್ಯಕ್ತಿಯನ್ನು ಜಿಲ್ಲೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ನಿಕಟ ಸಂಪರ್ಕ ಹೊಂದಿದ ಎಲ್ಲರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ. ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್‌ ಮಾಡಲು ಪ್ರಯತ್ನಿಸಲಾಗುತ್ತಿದೆ.

32 ವಲಸೆ ಕಾರ್ಮಿಕರಿಗೆ ಸೋಂಕಿಲ್ಲ

ಚಳ್ಳಕೆರೆ ತಾಲ್ಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಉತ್ತರಪ್ರದೇಶದ 59 ವಲಸೆ ಕಾರ್ಮಿಕರಲ್ಲಿ 32 ಜನರಿಗೆ ಸೋಂಕಿಲ್ಲ ಎಂಬುದು ಖಚಿತವಾಗಿದೆ.

ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಕಂಟೇನರ್‌ನಲ್ಲಿ ಹೊರಟಿದ್ದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದ್ದರು. ಇವರಲ್ಲಿ 27 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಎಲ್ಲ ಕಾರ್ಮಿಕರ ಗಂಟಲು ದ್ರವದ ಮಾದರಿಯ ವರದಿ ಜಿಲ್ಲಾಡಳಿತದ ಕೈಸೇರಿದೆ.

‘ಸೋಂಕಿತರು ಹಾಗೂ ಕ್ವಾರಂಟೈನ್‌ನಲ್ಲಿ ಇರುವವರನ್ನು ಪ್ರತ್ಯೇಕಿಸಲಾಗಿದೆ. ನೆಗೆಟಿವ್‌ ವರದಿ ಬಂದಿರುವವರ ಗಂಟಲು ದ್ರವದ ಮಾದರಿಯನ್ನು ಎರಡನೇ ಬಾರಿಗೆ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಸೋಂಕು ಕಾಣಿಸಿಕೊಳ್ಳದಿದ್ದರೆ ಎಲ್ಲರನ್ನು ಉತ್ತರಪ್ರದೇಶಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.