ಭರಮಸಾಗರ: ಇಲ್ಲಿರುವ ಐತಿಹಾಸಿಕ ಭರಮಣ್ಣನಾಯಕನ ದೊಡ್ಡಕೆರೆ ಏರಿ ಮೇಲಿನ ರಸ್ತೆ ಮತ್ತೆ ಬಿರುಕು ಬಿಡಲು ಆರಂಭಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸುಮಾರು 11 ವರ್ಷಗಳಿಂದ ಬರಿದಾಗಿದ್ದ ದೊಡ್ಡ ಕೆರೆಗೆ ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರಮದಿಂದ ಭರಮಸಾಗರ ಏತ ನೀರಾವರಿ ಯೋಜನೆಯಡಿ ಹರಿಹರದಿಂದ ತುಂಗಭದ್ರೆಯ ನೀರು ತುಂಬಿ ಕೋಡಿ ಬಿದ್ದಿತ್ತು.
ಜನವರಿಯಲ್ಲಿ ಕೆರೆ ಏರಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಕ್ರಮೇಣ ದೊಡ್ಡದಾಗತೊಡಗಿ, ಸಾರ್ವಜನಿಕರನ್ನು ಆತಂಕಕ್ಕೆ ಈಡು ಮಾಡಿತ್ತು. ನಂತರ ಸಂಬಂಧಪಟ್ಟ ಅಧಿಕಾರಿಗಳು ತಜ್ಞರು ಪರಿಶೀಲನೆ ನಡೆಸಿ ಕೆರೆ ಏರಿ ದುರಸ್ತಿಗೆ ಕ್ರಮ ಕೈಗೊಂಡಿದ್ದರು.
2ನೇ ತೂಬು ಇರುವ ಸ್ಥಳದ ಬಳಿ ಕೆರೆ ಏರಿ ಹಿಂಭಾಗದ ಕೆಳಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಸಿಯಲು ಆರಂಭವಾಗಿತ್ತು. ಒಂದು ಹಂತದಲ್ಲಿ ಕೆರೆಯಲ್ಲಿರುವ ನೀರಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಕೋಡಿಯನ್ನು ಒಡೆದು ನೀರನ್ನು ಹೊರಬಿಡುವ ಯತ್ನಕ್ಕೂ ಅಧಿಕಾರಿಗಳು ಮುಂದಾಗಿದ್ದರು.
ಆದರೆ ಆಗ ಸಕಾಲದಲ್ಲಿ ಸ್ಥಳಕ್ಕೆ ಬಂದ ಸಿರಿಗೆರೆ ಶ್ರೀಗಳು, ‘ಅವಸರದ ತೀರ್ಮಾನ ಕೈಗೊಂಡು ಕೆರೆ ಕೋಡಿ ಒಡೆಯುವ ನಿರ್ಣಯ ಸರಿಯಲ್ಲ. ಭರಮಣ್ಣನಾಯಕನ ಕಾಲದಲ್ಲಿ ನಿರ್ಮಾಣಗೊಂಡ ಮೂಲ ಏರಿ ಸುಭದ್ರವಾಗಿದೆ. ಅದಕ್ಕೆ ಹೊಸದಾಗಿ ಜೋಡಿಸಿರುವ ಏರಿಯಲ್ಲಿ ಮಾತ್ರ ಬಿರುಕು ಕಾಣಿಸಿಕೊಂಡಿದ್ದು, ಪರ್ಯಾಯ ವಿಧಾನಗಳ ಮೂಲಕ ಕೆರೆ ಏರಿಯನ್ನು ದುರಸ್ತಿಗೊಳಿಸಬೇಕು’ ಎಂದು ಸೂಚಿಸಿದ್ದರು.
ಕರ್ನಾಟಕ ನೀರಾವರಿ ನಿಗಮದ ಎಂ.ಡಿ. ಮಲ್ಲಿಕಾರ್ಜುನ್ ಗುಂಗೆ ಮತ್ತಿತರ ಅಧಿಕಾರಿಗಳು, ತಂತ್ರಜ್ಞರು ಸ್ಥಳ ಪರಿಶೀಲಿಸಿದ ನಂತರ ಏರಿ ದುರಸ್ತಿ ಕಾರ್ಯ ಆರಂಭಗೊಂಡಿತ್ತು. ಆದರೆ, ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಕಳೆದ 3 ತಿಂಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ.
ದೊಡ್ಡಕೆರೆ ಏರಿ ರಸ್ತೆ ಅನೇಕ ಗ್ರಾಮಗಳಿಗೆ ಸಂಪರ್ಕ ಮಾರ್ಗವಾಗಿದೆ. ವಿದ್ಯಾರ್ಥಿಗಳು, ರೈತರು ಸೇರಿದಂತೆ ಅನೇಕರು ನಿತ್ಯ ಈ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯ. ದುರಸ್ತಿ ಕಾರ್ಯಕ್ಕಾಗಿ ಏರಿ ರಸ್ತೆಯ ಒಂದು ಬದಿಯಲ್ಲಿ 8 ಅಡಿ, ಇನ್ನೊಂದು ಬದಿಯಲ್ಲಿ 3 ಅಡಿ ಆಳ ಹಾಗೂ ಸುಮಾರು 200 ಅಡಿ ಉದ್ದದವರೆಗೆ ಮಣ್ಣು ತೆಗೆಯಲಾಗಿದೆ. ಇದರಿಂದ ಮಳೆ ಬಂದಾಗ ಇಲ್ಲಿ ನೀರು ನಿಂತು ಜಾರಿಕೆ ಉಂಟಾಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ತಡೆಗೋಡೆ ಇರದ ಕಾರಣ ವಾಹನಗಳು ನಿಯಂತ್ರಣ ಕಳೆದುಕೊಂಡು ಕೆರೆಗೆ ಬೀಳುವ ಸಾಧ್ಯತೆ ಇದೆ.
‘ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷವೇ ಏರಿ ಮೇಲಿನ ರಸ್ತೆಯ ದುರವಸ್ತೆಗೆ ಪ್ರಮುಖ ಕಾರಣ’ ಎಂದು ದೂರುತ್ತಾರೆ ಸ್ಥಳೀಯರಾದ ಸುರೇಶ್ ಕುಮಾರ್ ನಾಯ್ಕ, ವೀರೇಶ್, ಹರೀಶ್ ಮತ್ತು ತಿಮ್ಮಣ್ಣ.
ಈ ಬಾರಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ಹಳ್ಳ–ಕೊಳ್ಳಗಳು ತುಂಬಿ ಹರಿದು ಮತ್ತೆ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದಿದೆ. ಏರಿ ದುರಸ್ತಿ ನಡೆಯುತ್ತಿದ್ದ ಸ್ಥಳದಲ್ಲಿಯೇ ಬಿರುಕು ಬಿಡಲು ಆರಂಭವಾಗಿದೆ. ಬುಧವಾರ ಸಣ್ಣದಾಗಿ ಕಾಣಿಸಿಕೊಂಡ ಬಿರುಕು ಗುರುವಾರ ದೊಡ್ಡದಾಗಿದೆ.
ಈ ಬಿರುಕು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದುಗ್ರಾಮಸ್ಥರ ಕೋರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.