ADVERTISEMENT

106 ಜನರಿಗೆ ಮೋಸ, ₹4.80 ಕೋಟಿ ವಂಚನೆ: ಆಸ್ತಿ ಜಪ್ತಿಗೆ ಸಿದ್ಧತೆ

ಹಣ ದ್ವಿಗುಣ ಆಮಿಷ; ರೈಲ್ವೆ ಉದ್ಯೋಗಿಗಳು ಸೇರಿ 106 ಜನರಿಗೆ ಮೋಸ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST

ಚಿತ್ರದುರ್ಗ: ಅಧಿಕ ಬಡ್ಡಿ ನೀಡುವ ಮೂಲಕ ಹಣ ದ್ವಿಗುಣಗೊಳಿಸುವ ಆಮಿಷ ತೋರಿಸಿ ರೈಲ್ವೆ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಂದ ₹ 4.80 ಕೋಟಿ ಠೇವಣಿ ಸಂಗ್ರಹಿಸಿ ವಂಚಿಸಿದ ಆಂಧ್ರಪ್ರದೇಶದ ‘ಕ್ರೌಡ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌’ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಚಿತ್ರದುರ್ಗ ಪೊಲೀಸರು ಸಜ್ಜಾಗಿದ್ದಾರೆ.

ಪ್ರಮುಖ ಆರೋಪಿ ಕೋಡೆ ರಮಣಯ್ಯ ಪತ್ತೆಗೆ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿಕ್ಕಜಾಜೂರಿನ ರೈಲ್ವೆ ಉದ್ಯೋಗಿಗಳು ಸೇರಿದಂತೆ 106 ಜನರು ಈ ಕಂಪನಿಯಲ್ಲಿ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದವರಲ್ಲಿ ಕರ್ನಾಟಕ, ರಾಜಸ್ಥಾನ, ಆಂಧ್ರಪ್ರದೇಶವರೂ ಇದ್ದಾರೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೋಡೆ ರಮಣಯ್ಯ ಪ್ರಮುಖ ಆರೋಪಿಯಾಗಿದ್ದು, ದೇಶ ತೊರೆದಿರುವ ಶಂಕೆ ವ್ಯಕ್ತವಾಗಿದೆ.

ADVERTISEMENT

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ–2019 (ಬಡ್ಸ್‌), ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ– 2004 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರೈಲ್ವೆ ಉದ್ಯೋಗಿಯಾಗಿರುವ ಹೊಸದುರ್ಗ ತಾಲ್ಲೂಕಿನ ಬಾಗೂರು ಗ್ರಾಮದ ರಮೇಶಪ್ಪ ಅವರಿಗೆ ಸಹೋದ್ಯೋಗಿ ಪಿ.ವಿ. ಶೇಷಪ್ಪ ಎಂಬುವರು ‘ಕ್ರೌಡ್‌ ಕ್ಲಬ್‌’ ಕಂಪನಿಯನ್ನು ಪರಿಚಯಿಸಿದ್ದರು. 60 ದಿನಗಳಲ್ಲಿ ಹಣ ದ್ವಿಗುಣಗೊಳ್ಳುವ ಆಸೆಯಿಂದ ರಮೇಶಪ್ಪ ₹ 1.04 ಲಕ್ಷ ಹೂಡಿಕೆ ಮಾಡಿದ್ದರು. ನಿಗದಿತ ಸಮಯಕ್ಕೆ ₹ 1.96 ಲಕ್ಷವನ್ನು ಕಂಪನಿ ಮರಳಿಸಿತ್ತು. ಈ ಭರವಸೆಯ ಮೇರೆಗೆ ರಮೇಶಪ್ಪ ಅವರ ಸಂಬಂಧಿಕರು, ಸಹೋದ್ಯೋಗಿಗಳು ಹಣ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರಮೇಶಪ್ಪ ಅವರು 2ನೇ ಬಾರಿ ಹೂಡಿಕೆ ಮಾಡಿದಾಗ ಠೇವಣಿದಾರರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿತ್ತು. ಮರಳಿಸುವ ಹಣದಲ್ಲಿ ಶೇ 50ರಷ್ಟನ್ನು ಚಿನ್ನ ಖರೀದಿಗೆ ಹೂಡಿಕೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ನಿಗದಿತ ಸಮಯ ಮುಗಿದರೂ ಕಂಪನಿ ಹಣ ಮರಳಿಸಲಿಲ್ಲ. ದೂರವಾಣಿ ಕರೆ, ವಾಟ್ಸ್‌ಆ್ಯಪ್‌ ಸಂದೇಶಕ್ಕೂ ಪ್ರತಿಕ್ರಿಯಿಸಿಲ್ಲ. ಮೋಸ ಹೋಗಿದ್ದು ಖಚಿತವಾದ ಬಳಿಕ ಚಿಕ್ಕಜಾಜೂರು ಠಾಣೆಗೆ ರಮೇಶಪ್ಪ ದೂರು ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೋಡೆ ರಮಣಯ್ಯ ವಂಚನೆಯ ಜಾಲದ ಸುಳಿವು ದೊರೆತಿದೆ. 106 ಜನರಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ. ಚಿಕ್ಕಜಾಜೂರು ಠಾಣೆಯ ಪ್ರಕರಣವನ್ನು ಚಿತ್ರದುರ್ಗದ ‘ಸೆನ್‌’ ಠಾಣೆಗೆ ವರ್ಗಾವಣೆ ಮಾಡಿ ತನಿಖೆಗೆ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ರಚಿಸಲಾಗಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ರಿಜಿಸ್ಟ್ರಾರ್‌ ಹಾಗೂ ಬ್ಯಾಂಕ್‌ಗಳಿಂದ ತನಿಖಾಧಿಕಾರಿ ಮಾಹಿತಿ ಕೋರಿದ್ದಾರೆ. ಕಂಪನಿ ಮತ್ತು ಆರೋಪಿ ಹೆಸರಿನಲ್ಲಿರುವ ಚರ ಮತ್ತು ಸ್ಥಿರಾಸ್ತಿ ಪತ್ತೆ ಮಾಡಲಾಗುತ್ತಿದೆ.

ಹಣ ಕಳೆದುಕೊಂಡವರಲ್ಲಿ ಬಹುತೇಕರು ರೈಲ್ವೆ ಉದ್ಯೋಗಿಗಳು ಹಾಗೂ ಅವರ ಸಂಬಂಧಿಕರು. ಹೆಚ್ಚಿನ ಲಾಭದ ಆಮಿಷ ತೋರಿಸಿ ವಂಚನೆ ಮಾಡಲಾಗಿದೆ.

-ಧರ್ಮೇಂದ್ರ ಕುಮಾರ್‌ ಮೀನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಆರೋಪಿ ದೇಶ ತೊರೆದ ಶಂಕೆ

ಪ್ರಕರಣದ ಪ್ರಮುಖ ಆರೋಪಿ ಕೋಡೆ ರಮಣಯ್ಯ ದೇಶ ತೊರೆದಿರುವ ಶಂಕೆ ವ್ಯಕ್ತವಾಗಿದೆ. ಲುಕ್‌ಔಟ್‌ ನೋಟಿಸ್‌ ಹೊರಡಿಸಿ ಪತ್ತೆ ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ವಂಚನೆಯ ಹಣವನ್ನು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿರುವ ಬಗ್ಗೆಯೂ ಠೇವಣಿದಾರರು ಅನುಮಾನ ಹೊರಹಾಕಿದ್ದಾರೆ. ‘ಮಲ್ಟಿ ಲೇವಲ್‌ ಮಾರ್ಕೆಟಿಂಗ್‌ ಸ್ಕೀಮ್‌ ನಿಯಂತ್ರಣಕ್ಕೆ ಪ್ರಬಲ ಕಾಯ್ದೆಗಳಿವೆ. ಆಸ್ತಿ ಜಪ್ತಿ ಮಾಡಲು ಅವಕಾಶವಿದ್ದು ಸಂತ್ರಸ್ತ ಠೇವಣಿದಾರರಿಗೆ ಹಂಚಿಕೆ ಮಾಡಬಹುದಾಗಿದೆ. ಆರೋಪಿಯ ಬ್ಯಾಂಕ್‌ ಖಾತೆ ಪರಿಶೀಲಿಸಲಾಗಿದ್ದು ಹೆಚ್ಚಿನ ಹಣವಿಲ್ಲ ಎಂಬುದು ಖಚಿತವಾಗಿದೆ. ಕಂಪನಿಯ ಇತರ ನಿರ್ದೇಶಕರ ಪತ್ತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.